ಮೈಸೂರು, ಅ.29: ಇಲ್ಲಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕ್ರೀಡಾಂಗಣದಲ್ಲಿ ನಡೆದ ರಣಜಿ ಟ್ರೋಫಿ ಬಿ ಗುಂಪಿನ ಪಂದ್ಯದಲ್ಲಿ ತ್ರಿಪುರಾ ತಂಡವನ್ನು ಇನಿಂಗ್ಸ್ ಹಾಗೂ 116 ರನ್ ಅಂತರದಿಂದ ಮಣಿಸಿದ ಕರ್ನಾಟಕ ತಂಡ ಟೂರ್ನಿಯಲ್ಲಿ ಮೊದಲ ಗೆಲುವು ದಾಖಲಿಸಿದೆ. ಈ ಹಿಂದಿನ ಎರಡು ಪಂದ್ಯಗಳನ್ನು ಡ್ರಾ ಮಾಡಿಕೊಂಡಿತ್ತು.
ತಮ್ಮ ಮೊದಲ ಎರಡು ಪಂದ್ಯಗಳಿಂದ ಕೇವಲ ಎರಡು ಅಂಕಗಳನ್ನು ಗಳಿಸಿದ್ದ ಕರ್ನಾಟಕ ತಂಡಕ್ಕೆ, ಮೈಸೂರಿನಲ್ಲಿ ತ್ರಿಪುರಾ ವಿರುದ್ಧ ಬೋನಸ್ ಅಂಕದೊಂದಿಗೆ ಜಯ ಸಾಧಿಸಿರುವುದು ದೊಡ್ಡ ನಿರಾಳತೆಯನ್ನು ನೀಡಿದೆ.
'ಫಾಲೋ-ಆನ್' ಒತ್ತಡಕ್ಕೆ ಸಿಲುಕಿದ ತ್ರಿಪುರಾ ತಂಡವು 180 ರನ್‌ಗಳಿಗೆ ಆಲೌಟ್ ಆಯಿತು. ಇದರೊಂದಿಗೆ, ಈ ಟೂರ್ನಿಯಲ್ಲಿ ತಂಡವು ಸತತ ಮೂರನೇ ಸೋಲನ್ನು ಅನುಭವಿಸಿದೆ. ತಂಡದ ನಾಯಕನ ಜವಾಬ್ದಾರಿ ನಿರ್ವಹಿಸಿದ ಶ್ರೇಯಸ್ ಗೋಪಾಲ್, 36 ರನ್‌ಗಳಿಗೆ 5 ವಿಕೆಟ್‌ಗಳನ್ನು ಕಬಳಿಸಿದರು. ಪಂದ್ಯದ ಅಂತಿಮ ವಿಕೆಟ್ ಅನ್ನು ಅವರೇ ಪಡೆಯುವ ಮೂಲಕ ತಂಡದ ಗೆಲುವನ್ನು ಖಚಿತಪಡಿಸಿದರು. ಉಳಿದಂತೆ ವೇಗಿಗಳಾದ ಎಲ್. ಮನ್ವಂತ್ ಕುಮಾರ್ ಹಾಗೂ ವೈಶಾಖ್ ವಿಜಯ್ ಕುಮಾರ್ ತಲಾ ಎರಡು ವಿಕೆಟ್ ಹಂಚಿಕೊಂಡರು.
ಮೊದಲು ಬ್ಯಾಟಿಂಗ್ ನಡೆಸಿದ ತ್ರಿಪುರಾ ತಂಡ 194 ರನ್‌ಗೆ ಆಲೌಟ್ ಆಗಿತ್ತು. ಬಳಿಕ ಗುರಿ ಬೆನ್ನಟ್ಟಿದ ಕರ್ನಾಟಕ ತಂಡ 9 ವಿಕೆಟ್‌ಗೆ 490 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು. ಕೆಳಕ್ರಮಾಂಕದಲ್ಲಿನ ಉತ್ತಮ ಜೊತೆಯಾಟಗಳು ಬಲ ತುಂಬಿದವು. ಅನೀಶ್ವರ್ ಗೌತಮ್ ತಮ್ಮ ಮೊದಲ ಶತಕದ (100) ಮೂಲಕ ಸೊಗಸಾದ ಇನಿಂಗ್ಸ್ ಆಡಿದರು.
ಹಾರ್ದಿಕ್ ಪಾಂಡ್ಯ ಸಿಎಸ್‌ಕೆಗೆ; ಜೆರ್ಸಿ ನಂಬರ್ ಪ್ರೋಮೋ ಬಿಡುಗಡೆ!
ಎಂಟನೇ ವಿಕೆಟ್‌ಗೆ ಅನೀಶ್ವರ್ ಹಾಗೂ ಎಲ್. ಮನ್ವಂತ್‌ಕುಮಾರ್ (51) ನಡುವಿನ 82 ರನ್‌ಗಳ ಜೊತೆಯಾಟ ಮೂಡಿಬಂತು. ಬಿರುಸಿನ ಹೊಡೆತಗಳ ಮೂಲಕ ರನ್ ವೇಗ ಹೆಚ್ಚಿಸಿದ ಮನ್ವಂತ್ ಅರ್ಧಶತಕ ಪೂರೈಸಿದರು.
ಕೊನೆಯ ದಿನವಾದ ಗುರುವಾರ 3 ವಿಕೆಟ್ ನಷ್ಟಕ್ಕೆ 98 ರನ್ ಗಳಿಸಿದ್ದಲ್ಲಿಂದ ಎರಡನೇ ಇನಿಂಗ್ಸ್ ಆರಂಭಿಸಿದ ತ್ರಿಪುರಾ ತಂಡದ ಪರ ಶ್ರೀದಮ್ ಪಾಲ್ ಅರ್ಧಶತಕ ಬಾರಿಸಿದರು. ಅವರು ಭರ್ತಿ 50 ರನ್ ಗಳಿಸಿದ ವೇಳೆ ವೈಶಾಖ್ ವಿಜಯ್ ಕುಮಾರ್ ಎಸೆದಲ್ಲಿ ರೋಹನ್ ಪಾಟೀಲ್‌ಗೆ ಕ್ಯಾಚ್ ನೀಡಿ ವಿಕೆಟ್ ಕಳೆದುಕೊಂಡರು. ಉಳಿದಂತೆ ಯಾರೂ ನಿರೀಕ್ಷಿತ ಬ್ಯಾಟಿಂಗ್ ನಡೆಸಲಿಲ್ಲ.
ಸಂಕ್ಷಿಪ್ತ ಸ್ಕೋರು
ಮೊದಲ ಇನಿಂಗ್ಸ್: ತ್ರಿಪುರಾ: 194. ಕರ್ನಾಟಕ: 144 ಓವರುಗಳಲ್ಲಿ 9 ವಿಕೆಟ್‌ಗೆ 490 ಡಿಕ್ಲೇರ್ (ಅನೀಶ್ವರ್ ಗೌತಮ್ 100, ರಿತೇಶ್ ಭಟ್ಕಳ ಔಟಾಗದೇ 74, ಎಲ್. ಮನ್ವಂತ್‌ಕುಮಾರ್ 51. ಪರ್ವೇಜ್ ಸುಲ್ತಾನ್ 94ಕ್ಕೆ 3, ಸಂದೀಪ್ ಸರ್ಕಾರ್ 147ಕ್ಕೆ 3). ಎರಡನೇ ಇನಿಂಗ್ಸ್: ತ್ರಿಪುರಾ; 180( ಶ್ರೀದಮ್ ಪಾಲ್ 50, ಮನ್‌ದೀಪ್ ಸಿಂಗ್ ಔಟಾದೆ 20, ಶ್ರೇಯಸ್ ಗೋಪಾಲ್ 36ಕ್ಕೆ 5, ವೈಶಾಖ್ 31ಕ್ಕೆ 2, ಮನ್ವಂತ್ ಕುಮಾರ್ 42ಕ್ಕೆ 2). ಪಂದ್ಯಶ್ರೇಷ್ಠ: ಅನೀಶ್ವರ್ ಗೌತಮ್.