ನವದೆಹಲಿ, ಎ.19: ಅಫ್ಘಾನಿಸ್ತಾನದ ಲೆಗ್ ಸ್ಪಿನ್ನರ್ ರಶೀದ್ ಖಾನ್(Rashid Khan) ಅವರು ಭಾರತ ಸೇರಿದಂತೆ ಎರಡು ದೇಶಗಳ ಪೌರತ್ವ ಮತ್ತು ತಂಡವನ್ನು ಪ್ರತಿನಿಧಿಸುವ ಮನವಿಯನ್ನು ನಿರಾಕರಿಸಿದ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ತಮ್ಮ ಮುಂಬರುವ ಪುಸ್ತಕ ರಶೀದ್ ಖಾನ್: ಫ್ರಮ್ ಸ್ಟ್ರೀಟ್ಸ್ ಟು ಸ್ಟಾರ್‌ಡಮ್‌ನಲ್ಲಿ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. 2023 ರ ಐಪಿಎಲ್ ಋತುವಿನ ವೇಳೆ ಈ ಆಫರ್ ಬಂದಿತ್ತು ಎಂದು ಹೇಳಿದ್ದಾರೆ.
"ನನಗೆ ಆಸ್ಟ್ರೇಲಿಯಾ ಮತ್ತು ಭಾರತ ಎರಡೂ ದೇಶಗಳಿಂದಲೂ ಅಂತಹ ಕೊಡುಗೆಗಳು (ಪೌರತ್ವ ಮತ್ತು ಆಟ) ಬಂದವು. ಆದರೆ ನಾನು ಅವರಿಗೆ ಹೇಳಿದೆ, 'ನಾನು ನನ್ನ ದೇಶಕ್ಕಾಗಿ ಆಡದಿದ್ದರೆ, ಬೇರೆ ಯಾವುದೇ ದೇಶಕ್ಕಾಗಿಯೂ ಆಡುವುದಿಲ್ಲ" ಎಂದು ಹೇಳಿದ್ದಾಗಿ ರಶೀದ್ ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ.
ಆಸ್ಟ್ರೇಲಿಯಾದ ಬಗ್ಗೆ ವಿವರವಾಗಿ ಹೇಳದಿದ್ದರೂ, ರಶೀದ್ ಭಾರತದ ಕೊಡುಗೆಯನ್ನು ದೀರ್ಘವಾಗಿ ವಿವರಿಸಿದ್ದಾರೆ. ಆ ಸಮಯದಲ್ಲಿ, ಅವರು ಗುಜರಾತ್ ಟೈಟಾನ್ಸ್ ಪರ ಐಪಿಎಲ್‌ನಲ್ಲಿ ಆಡುತ್ತಿದ್ದಾಗ, ತಂಡದ ಅಧಿಕಾರಿಯೊಬ್ಬರು ಭಾರತೀಯ ಕ್ರಿಕೆಟ್ ಮಂಡಳಿಯ ಉನ್ನತ ಅಧಿಕಾರಿ ಭೇಟಿ ಮಾಡಲು ಬಯಸುತ್ತಾರೆ ಎಂದು ತಿಳಿಸಿದರು.
"ನಾನು ಅವರ(ಬಿಸಿಸಿಐ ಅಧಿಕಾರಿ) ಬಳಿಗೆ ಹೋದೆ. ನಾವು ಮಾತನಾಡಲು ಪ್ರಾರಂಭಿಸಿದೆವು, ಮತ್ತು ಅವರು ಹೇಳಿದರು 'ನಿಮ್ಮ ದೇಶದಲ್ಲಿ (ಅಫ್ಘಾನಿಸ್ತಾನ) ಪರಿಸ್ಥಿತಿ ತುಂಬಾ ಕೆಟ್ಟದಾಗಿದೆ. ಭಾರತದಲ್ಲೇ ಇರಿ. ನಾವು ನಿಮಗೆ ಭಾರತೀಯ ಪೌರತ್ವ ನೀಡುತ್ತೇವೆ, ಇಲ್ಲಿ ವಾಸಿಸಿ ಮತ್ತು ಇಲ್ಲಿ ಕ್ರಿಕೆಟ್ ಆಡಿ' ಎಂದು ಅವರು ಹೇಳುತ್ತಿದ್ದ ವಿಷಯದಿಂದ ನನಗೆ ಆಶ್ಚರ್ಯವಾಯಿತು ಮತ್ತು ಹೇಗೆ ಪ್ರತಿಕ್ರಿಯಿಸಬೇಕೆಂದು ತಿಳಿಯಲಿಲ್ಲ. ಆದರೆ ನಾನು ಮುಗುಳ್ನಕ್ಕು, 'ತುಂಬಾ ಧನ್ಯವಾದಗಳು. ನಾನು ನನ್ನ ದೇಶವಾದ ಅಫ್ಘಾನಿಸ್ತಾನಕ್ಕಾಗಿ ಆಡುತ್ತಿದ್ದೇನೆ' ಎಂದು ಹೇಳಿದೆ" ಎಂದು ರಶೀದ್ ಅಂದಿನ ಘಟನೆಯನ್ನು ತಮ್ಮ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ.
ಪಂದ್ಯ ಗೆದ್ದರೂ ಅನಪೇಕ್ಷಿತ ದಾಖಲೆ ಬರೆದ ಕೆಕೆಆರ್ ನಾಯಕ ಅಜಿಂಕ್ಯ ರಹಾನೆ
ರಶೀದ್ ಖಾನ್ 2018ರಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಪ್ರತಿನಿಧಿಸುವ ಮೂಲಕ ಐಪಿಎಲ್‌ಗೆ ಪದಾರ್ಪಣೆ ಮಾಡಿದರು. ಅವರ ಸ್ಪಿನ್ ಮೋಡಿ ಕಂಡು ಅನೇಕ ಭಾರತೀಯ ಅಭಿಮಾನಿಗಳು ಆಗಿನ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ಗೆ ಟ್ವೀಟ್ ಮೂಲಕ ಭಾರತದ ಪೌರತ್ವ ನೀಡುವಂತೆ ಮನವಿಯನ್ನೂ ಮಾಡಿದ್ದರು. ಐಪಿಎಲ್ ಮೂಲಕ ವಿಶ್ವ ಕ್ರಿಕೆಟ್‌ಗೆ ಪರಿಚಯವಾದ ರಶೀದ್ ಖಾನ್ ಒಂದು ವಿಶ್ವದ ನಂ.1 ಟಿ20 ಬೌಲರ್ ಆಗಿ ಮಿಂಚಿದ್ದಾರೆ.