ಬೆಂಗಳೂರು: ಮಳೆಯಿಂದ ಅಡಚಣೆಯಾಗಿ 14 ಓವರ್‌ಗೆ ಸೀಮಿತಗೊಂಡ ಶುಕ್ರವಾರದ ಐಪಿಎಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ ಬೆಂಗಳೂರು ತಂಡವು ಪಂಜಾಬ್ ಕಿಂಗ್ಸ್ ವಿರುದ್ಧ 5 ವಿಕೆಟ್‌ಗಳಿಂದ ಸೋಲನುಭವಿಸಿ ಅನತ್ಯ ದಾಖಲೆಯೊಂದನ್ನು ತನ್ನ ಹೆಸರಿಗೆ ಸೇರಿಸಿಕೊಂಡಿದೆ. ತವರಿನಲ್ಲಿ ಅತ್ಯಧಿಕ ಪಂದ್ಯ ಸೋತ ಮೊದಲ ತಂಡ ಎನಿಸಿಕೊಂಡಿದೆ. ಇದು ಆರ್‌ಸಿಬಿಗೆ ತವರಿನ ಚಿನ್ನಸ್ವಾಮಿ ಮೈದಾನದಲ್ಲಿ ಎದುರಾದ 46ನೇ ಸೋಲಾಗಿದೆ. ದಿಲ್ಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ 45 ಸೋಲು ಕಂಡಿರುವ ಡೆಲ್ಲಿ ಕ್ಯಾಪಿಟಲ್ಸ್ ದ್ವಿತೀಯ ಸ್ಥಾನದಲ್ಲಿದೆ.
ಹಾಲಿ ಆವೃತ್ತಿಯ ಐಪಿಎಲ್‌ನಲ್ಲಿ ಆರ್‌ಸಿಬಿ ತವರಿನಂಗಳದಲ್ಲಿ ಎದುರಾದ ಸತತ ಮೂರನೇ ಸೋಲಾಗಿದೆ. ಈ ಮೂಲಕ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ತವರಿನಲ್ಲಿ ಇನ್ನೂ ಗೆಲುವು ಸಾಧಿಸಿದ ಏಕೈಕ ತಂಡ ಎಂಬ ಕೆಟ್ಟ ಹಣೆಪಟ್ಟಿಯನ್ನು ಆರ್‌ಸಿಬಿ ಮುಂದುವರಿಸಿದೆ.
ತವರಿನ ಸತತ ಸೋಲಿನಿಂದ ಬೇಸರಗೊಂಡ ಆರ್‌ಸಿಬಿ ಅಭಿಮಾನಿಗಳು ತಂಡದ ವಿರುದ್ಧ ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಂದ್ಯ ಮುಕ್ತಾಯದ ಬಳಿಕ ಫ್ರಾಂಚೈಸಿಗೆ ಹಿಡಿ ಶಾಪ ಹಾಕಿದ್ದಾರೆ. ಬೇರಾವ ಪಂದ್ಯಕ್ಕೂ ಇಲ್ಲದ ಟಿಕೆಟ್ ದರ ನಿಗದಿ ಮಾಡಿ ಅಭಿಮಾನಿಗಳಿಂದ ಹಣ ಕೊಳ್ಳೆಹೊಡೆಯುತ್ತಿರುವ ಫ್ರಾಂಚೈಸಿಯನ್ನು ಮೊದಲು ಕಿತ್ತೊಗೆಯಬೇಕು ಎಂದು ಕೆಲವರು ಆಕ್ರೋಶ ಹೊರಹಾಕಿದ್ದು ಕಂಡು ಬಂತು.
ಇದನ್ನೂ ಓದಿ IPL 2025: ಸಚಿನ್ ತೆಂಡೂಲ್ಕರ್ ದಾಖಲೆ ಮುರಿದ ರಜತ್ ಪಾಟೀದಾರ್
ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಆಹ್ವಾನ ಪಡೆದ ಆರ್‌ಸಿಬಿ ಬ್ಯಾಟಿಂಗ್ ಮರೆತವರಂತೆ ಆಟವಾಡಿತು. ಪಂಜಾಬ್‌ನ ಬಿಗು ದಾಳಿಗೆ ಕುಸಿದ ಆರ್‌ಸಿಬಿ 14 ಓವರ್‌ಗಳಲ್ಲಿ 9 ವಿಕೆಟಿಗೆ 95 ರನ್ ಗಳಿಸಲಷ್ಟೇ ಶಕ್ತವಾಯಿತು. ಆರ್‌ಸಿಬಿ ಗಳಿಸಿದ 95 ರನ್‌ಗಳ ಪೈಕಿ ಟಿಮ್ ಡೇವಿಡ್‌ರದ್ದೇ 50 ರನ್ ಒಳಗೊಂಡಿತ್ತು. ಪಂಜಾಬ್ 12.1 ಓವರ್‌ಗಳಲ್ಲಿ 5 ವಿಕೆಟಿಗೆ 98 ರನ್ ಗಳಿಸಿ ಜಯಭೇರಿ ಬಾರಿಸಿತು. ಜತೆಗೆ ಈ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ದ್ವಿತೀಯ ಸ್ಥಾನಕ್ಕೇರಿತು. ಉಭಯ ತಂಡಗಳು ನಾಳೆ(ಭಾನುವಾರ) ಮತ್ತೆ ಮುಖಾಮುಖಿಯಾಗಲಿವೆ. ಈ ಪಂದ್ಯ ಬೌಲಿಂಗ್ ಟ್ರ್ಯಾಕ್ ಚಂಡೀಗಢದಲ್ಲಿ ನಡೆಯಲಿದೆ.