ವಿಶಾಖಪಟ್ಟಣ: ಕ್ರಿಕೆಟ್ ಅಭಿಮಾನಿಗಳನ್ನು ತುದಿಗಾಲಲ್ಲಿ ನಿಲ್ಲುವಂತೆ ಮಾಡಿ, ಅಸಾಮಾನ್ಯ ಬ್ಯಾಟಿಂಗ್ ಪ್ರದರ್ಶನ ತೋರುವ ಮೂಲಕ ಡೆಲ್ಲಿ ಕ್ಯಾಪಿಟಲ್ಸ್(LSG vs DC ) ತಂಡ ಸೋಮವಾರ ನಡೆದಿದ್ದ ಐಪಿಎಲ್(IPL 2025) ಪಂದ್ಯದಲ್ಲಿ ಎದುರಾಳಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ರೋಚಕ ಒಂದು ವಿಕೆಟ್ ಅಂತರದ ಗೆಲುವ ಸಾಧಿಸಿ ಮೆರೆದಾಡಿತ್ತು. ಪಂದ ಬಳಿಕ ಲಕ್ನೋ ನಾಯಕ ರಿಷಭ್ ಪಂತ್(Rishabh Pant) ಅವರು ಫ್ರಾಂಚೈಸಿ ಮಾಲಕ ಸಂಜೀವ್ ಗೋಯೆಂಕಾ (Sanjiv Goenka) ಎದುರು ಸಪ್ಪೆ ಮೋರೆ ಹಾಕಿ ನಿಂತಿರುವ ಫೋಟೋ ಒಂದು ವೈರಲ್ ಆಗಿದ್ದು ಭಾರೀ ಚರ್ಚೆಗೆ ಗ್ರಾಸವಾಗಿದೆ.
ಕಳೆದ ಸೀಸನ್‌ನಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಲಕ್ನೋ ತಂಡ ಹತ್ತು ವಿಕೆಟ್‌ಗಳ ಸೋಲನುಭವಿಸಿತ್ತು. ಪಂದ್ಯ ಸೋತ ಬಳಿಕ ಫ್ರಾಂಚೈಸಿ ಮಾಲಕ ಸಂಜೀವ್ ಗೋಯೆಂಕಾ (Sanjiv Goenka) ಅವರು ನಾಯಕ ರಾಹುಲ್ ರನ್ನು ತರಾಟೆಗೆ ತೆಗೆದುಕೊಂಡಿದ್ದರು. ಮೈದಾನದಲ್ಲಿ ಕ್ಯಾಮರಾ ಕಣ್ಣಿಗೆ ಸೆರೆಯಾಗುವಂತೆ ಈ ಪ್ರಸಂಗ ನಡೆದಿತ್ತು. ಇದೀಗ ಪಂತ್‌ಗೂ ಇದೇ ಗತಿ ಬಂದಂತೆ ತೋರುತ್ತಿದೆ.
ಡೆಲ್ಲಿ ವಿರುದ್ಧ 200 ಪ್ಲಸ್ ಮೊತ್ತ ಬಾರಿಸಿಯೂ ಪಂದ್ಯವನ್ನು ಉಳಿಸಿಕೊಳ್ಳಲಾಗದ ಕಾರಣದಿಂದ ಗೋಯೆಂಕಾ ಪಂತ್ ಜತೆ ಅಸಮಾಧಾನದಿಂದ ಮಾತನಾಡುತ್ತಿರುವುದು ಕಂಡು ಬಂದಿದೆ. ಪಂತ್ ಸಪ್ಪೆ ಮೋರೆ ಹಾಕಿರುವ ಫೋಟೊ ಕೂಡ ವೈರಲ್ ಆಗಿದೆ. ಈ ಫೋಟೊ ಕಂಡ ನೆಟ್ಟಿಗರು ಮುಂದಿನ ಆವೃತ್ತಿಯಲ್ಲಿ ಪಂತ್ ಲಕ್ನೋ ತಂಡ ತೊರೆಯುವುದು ಖಚಿತ ಎನ್ನಲಾರಂಭಿಸಿದ್ದಾರೆ.
ಅಂದು ಗೋಯೆಂಕಾ ವರ್ತನೆಯಿಂ ನೊಂದಿದ್ದ ಕೆಎಲ್ ರಾಹುಲ್ ಮೆಗಾ ಹರಾಜಿಗೂ ಮುನ್ನವೇ ತಂಡವನ್ನು ಲಕ್ನೋ ತಂಡ ತೊರೆದಿದ್ದರು. ಪಂತ್ ಅವರನ್ನು ದಾಖಲೆಯ 27 ಕೋಟಿ ಮೊತ್ತ ನೀಡಿ ಲಕ್ನೋ ತಂಡ ಖರೀದಿ ಮಾಡಿತ್ತು. ಆದರೆ ಅವರು ಮೊದಲ ಪಂದ್ಯದಲ್ಲೇ ಶೂನ್ಯ ಸುತ್ತಿದರು.
ವೈಎಸ್‌ಆರ್ ಸ್ಟ್ರೇಡಿಯಂನಲ್ಲಿ ಸೋಮವಾರ ನಡೆದಿದ್ದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಲಕ್ನೋ, ಎಡಗೈ ಬ್ಯಾಟರ್ ನಿಕೋಲಸ್ ಪೂರನ್ (75 ರನ್, 30 ಎಸೆತ, 6 ಬೌಂಡರಿ, 7 ಸಿಕ್ಸರ್) ಹಾಗೂ ಆರಂಭಿಕ ಮಿಚೆಲ್ ಮಾರ್ಷ್ (72 ರನ್, 36 ಎಸೆತ, 6 ಬೌಂಡರಿ, 6 ಸಿಕ್ಸರ್) ಅಬ್ಬರದ ಬ್ಯಾಟಿಂಗ್ ಬಲದಿಂದ 8 ವಿಕೆಟ್‌ಗೆ 209 ರನ್ ಪೇರಿಸಿತು.
ಪ್ರತಿಯಾಗಿ ಬ್ಯಾಟಿಂಗ್ ನಡೆಸಿದ ಡೆಲ್ಲಿ ತಂಡ ಆರಂಭಿಕ ಆಘಾತದ ಹೊರತಾಗಿಯೂ ಕೆಲ ಕ್ರಮಾಂಕದಲ್ಲಿ ಜತೆಯಾದ ಇಂಪ್ಯಾಕ್ಟ್ ಪ್ಲೇಯರ್ ಆಶುತೋಷ್ ಶರ್ಮ (66* ರನ್, 31 ಎಸೆತ, 5 ಬೌಂಡರಿ, 5 ಸಿಕ್ಸರ್) ಹಾಗೂ 20 ವರ್ಷದ ಆಲ್ರೌಂಡರ್ ವಿಪ್ರಜ್ ನಿಗಮ್ (39) ಅಸಾಮಾನ್ಯ ಬ್ಯಾಟಿಂಗ್ ಹೋರಾಟದಿಂದ ಡೆಲ್ಲಿ 19.3 ಓವರ್‌ಗಳಲ್ಲಿ 9 ವಿಕೆಟ್‌ಗೆ 211 ರನ್‌ಗಳಿಸಿ ರೋಚಕ ಗೆಲುವು ಸಾಧಿಸಿತು.