ಮುಂಬಯಿ: ಭಾರತದ ದಿಗ್ಗಜ ಕ್ರಿಕೆಟಿಗರಾದ ವಿರಾಟ್ ಕೊಹ್ಲಿ(Virat Kohli) ಹಾಗೂ ರೋಹಿತ್ ಶರ್ಮಾ(Rohit Sharma) ಟೆಸ್ಟ್ ಹಾಗೂ ಅಂತಾರಾಷ್ಟ್ರೀಯ ಟಿ20ಯಿಂದ ಈಗಾಗಲೇ ನಿವೃತ್ತಿಯಾಗಿದ್ದಾರೆ. ಹೀಗಾಗಿ ಏಕದಿನ ಕ್ರಿಕೆಟ್‌ನಲ್ಲಿ ಈ ಇಬ್ಬರ ಆಟವನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾಯುತ್ತಿದ್ದಾರೆ. ಈ ಮಧ್ಯೆ ಕೆಲ ಮಾಧ್ಯಮಗಳು ಉಭಯ ಆಟಗಾರರು ಏಕದಿನದಿಂದಲೂ ನಿವೃತ್ತಿಯಾಗುವ ಸಮಯ ದೂರವಿಲ್ಲ ಎನ್ನಲಾರಂಭಿಸಿದೆ. ಆದರೆ ಕೊಹ್ಲಿ, ರೋಹಿತ್ ಮುಂಬರುವ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಗೆ(IND vs AUS Odi) ಅಭ್ಯಾಸ ಆರಂಭಿಸಿದ್ದಾರೆ.
ವಿರಾಟ್ ಕೊಹ್ಲಿ ಲಂಡನ್‌ನಲ್ಲಿ ಅಭ್ಯಾಸ ನಿರತರಾಗಿದ್ದರೆ, ನಾಯಕ ರೋಹಿತ್ ಶರ್ಮ ಮುಂಬೈಯಲ್ಲಿ ಟೀಮ್ ಇಂಡಿಯಾದ ಮಾಜಿ ಬ್ಯಾಟಿಂಗ್ ಕೋಚ್ ಅಭಿಷೇಕ್ ನಾಯರ್ ಅವರ ಮಾರ್ಗದರ್ಶನದಲ್ಲಿ ಬ್ಯಾಟಿಂಗ್ ಅಭ್ಯಾಸ ಆರಂಭಿಸಿದ್ದಾರೆ. ಅಭ್ಯಾಸದ ಫೋಟೊಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮೂಲಗಳ ಪ್ರಕಾರ ಕೊಹ್ಲಿ, ರೋಹಿತ್ ಆಸೀಸ್ ಸರಣಿಗೂ ಮುನ್ನ ನಡೆಯಲಿರುವ ಆಸ್ಟ್ರೇಲಿಯಾ ‘ಎ’ ತಂಡದ ವಿರುದ್ಧ ಸರಣಿಯಲ್ಲಿ ಭಾರತ ‘ಎ’ ಪರ ಆಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಆಸೀಸ್‌ನಲ್ಲಿ ಭಾರತ ತಂಡ ಅಕ್ಟೋಬರ್ 19ರಿಂದ 3 ಏಕದಿನ ಪಂದ್ಯಗಳ ಸರಣಿ ಆಡಲಿದೆ. ಎ ತಂಡಗಳ ಸರಣಿ ಸೆ.30, ಅ. 3 ಮತ್ತು 5ರಂದು ಕಾನ್ಪುರದ ಗ್ರೀನ್ ಪಾರ್ಕ್ ಸ್ಟೇಡಿಯಂನಲ್ಲಿ ನಡೆಯಲಿದೆ.
ಆಸೀಸ್ ಸರಣಿಯೇ ಕೊನೆ?
ವರದಿಗಳ ಪ್ರಕಾರ, ಆಸೀಸ್ ಸರಣಿಯೇ ಕೊಹ್ಲಿ ಹಾಗೂ ರೋಹಿತ್‌ಗೆ ವಿದಾಯದ ಸರಣಿಯಾಗುವ ಸಾಧ್ಯತೆಯಿದೆ. ಒಂದು ವೇಳೆ ಅವರು ಆಸೀಸ್ ಸರಣಿ ಬಳಿಕ ಏಕದಿನದಲ್ಲಿ ಮುಂದುವರಿಯಲು ನಿರ್ಧರಿಸಿದರೂ, ಬಿಸಿಸಿಐ ಅವರನ್ನು 2027ರ ಏಕದಿನ ವಿಶ್ವಕಪ್‌ವರೆಗೂ ಮುಂದುವರಿಸುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ.