ಜೈಪುರ, ಡಿ.26: ಮುಂಬೈ ಮತ್ತು ಸಿಕ್ಕಿಂ ನಡುವಿನ ವಿಜಯ್ ಹಜಾರೆ ಟ್ರೋಫಿ(Vijay Hazare Trophy) ಪಂದ್ಯದ ಒಂದು ಫೋಟೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಒಂದೇ ಫ್ರೇಮ್‌ನಲ್ಲಿ ಇಬ್ಬರು ರೋಹಿತ್ ಶರ್ಮಾ(Rohit Sharma)ರಂತೆ ಕಾಣುವ ಫೋಟೊವನ್ನು ನೋಡಿದ ಅಭಿಮಾನಿಗಳು ಒಂದು ಕ್ಷಣ ಆಶ್ಚರ್ಯಚಕಿತರಾಗಿದ್ದಾರೆ.
ಈ ವೈರಲ್ ಚಿತ್ರದಲ್ಲಿ ಮುಂಬೈ ವಿಕೆಟ್ ಕೀಪರ್ ಹಾರ್ದಿಕ್ ತಮೋರ್ ಜೊತೆಗೆ ರೋಹಿತ್ ಶರ್ಮಾ ಇದ್ದಾರೆ. ಹಾರ್ದಿಕ್ ತಮೋರ್ ಕೂಡ ರೋಹಿತ್ ಅವರಂತೆಯೇ ಹೋಲುತ್ತಾರೆ. ಹೀಗಾಗಿ ಈ ಫೊಟೋ ವೈರಲ್ ಆಗಿದೆ. ರೋಹಿತ್ ಶರ್ಮಾ ಮತ್ತು ವಿಕೆಟ್ ಕೀಪರ್ ಹಾರ್ದಿಕ್ ತಾಮೋರ್ ಮೈದಾನದಲ್ಲಿ ಒಟ್ಟಿಗೆ ನಿಂತಾಗ ಅಭಿಮಾನಿಗಳು ರೋಹಿತ್ ಶರ್ಮಾ ಯಾರು? ಎಂಬ ಗೊಂದಲಕ್ಕೆ ಒಳಗಾಗಿದ್ದಾರೆ.
ರೋಹಿತ್ ಶರ್ಮಾ ಹಾಗೂ ಹಾರ್ದಿಕ್ ತಾಮೋರ್ ಇಬ್ಬರೂ ಕೂಡ ಒಂದೇ ಎತ್ತರ ಹಾಗೂ ರೂಪದಲ್ಲೂ ಬಹುತೇಕ ಒಂದೇ ತರ ಇರುವುದು ಕಂಡು ಬಂದಿದೆ. ಸದ್ಯ, ಈ ಇಬ್ಬರು ಆಟಗಾರರ ಫೋಟೊಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿವೆ. ಅನೇಕರು ಜ್ಯೂನಿಯರ್ ರೋಹಿತ್ ಶರ್ಮಾ ಎಂದು ಕಾಮೆಂಟ್ ಮಾಡುತ್ತಿದ್ದಾರೆ.
ಹಾರ್ದಿಕ್ ತಮೋರೆ ಯಾರು?
28 ವರ್ಷದ ಹಾರ್ದಿಕ್ ಜಿತೇಂದ್ರ ತಮೋರೆ ಮುಂಬೈ ವಿಕೆಟ್ ಕೀಪರ್-ಬ್ಯಾಟರ್ ಆಗಿದ್ದು, ಭಾರತದ ದೇಶೀಯ ಕ್ರಿಕೆಟ್‌ನಲ್ಲಿ ವಿಶ್ವಾಸಾರ್ಹ ಪ್ರದರ್ಶನ ನೀಡುತ್ತಿದ್ದಾರೆ. ಅಕ್ಟೋಬರ್ 20, 1997 ರಂದು ಮಹಾರಾಷ್ಟ್ರದ ಥಾಣೆಯಲ್ಲಿ ಜನಿಸಿದ ತಮೋರೆ, ಕಳೆದ ಕೆಲವು ಋತುಗಳಲ್ಲಿ ಮುಂಬೈನ ಎಲ್ಲಾ ಮಾದರಿಗಳ ಹಿರಿಯರ ತಂಡದ ಭಾಗವಾಗಿದ್ದಾರೆ. ರಣಜಿ ಹಾಗೂ ಲಿಸ್ಟ್ ಎ ಪಂದ್ಯಗಳಲ್ಲಿ ವಿಕೆಟ್ ಕೀಪರ್, ಬ್ಯಾಟರ್ ಆಗಿ ಆಡಿದ್ದಾರೆ.
ಇದನ್ನೂ ಓದಿ ವಿಜಯ್ ಹಜಾರೆ; ಕೊಹ್ಲಿ ಅರ್ಧಶತಕ, ರೋಹಿತ್ ಶರ್ಮ 'ಗೋಲ್ಡನ್ ಡಕ್'
2019–20ರ ರಣಜಿ ಟ್ರೋಫಿ ಋತುವಿನಲ್ಲಿ ತಮೋರೆ ಮುಂಬೈ ಪರ ಪ್ರಥಮ ದರ್ಜೆ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು. ಆರಂಭದಿಂದಲೂ, ಅವರನ್ನು ತಾಂತ್ರಿಕವಾಗಿ ಉತ್ತಮ ವಿಕೆಟ್ ಕೀಪರ್ ಎಂದು ಪರಿಗಣಿಸಲಾಗುತ್ತಿದೆ. ಅವರು ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್‌ನಲ್ಲಿಯೂ ಸಹ ಕೊಡುಗೆ ನೀಡಬಲ್ಲರು. ಅವರ ಅತಿದೊಡ್ಡ ಪ್ರಗತಿ 2021–22ರ ರಣಜಿ ಟ್ರೋಫಿಯಲ್ಲಿ ಬಂದಿತ್ತು. ಆ ಋತುವಿನಲ್ಲಿ ಮುಂಬೈ ಫೈನಲ್ ತಲುಪಿತ್ತು. ಉತ್ತರ ಪ್ರದೇಶ ವಿರುದ್ಧದ ಸೆಮಿಫೈನಲ್‌ನಲ್ಲಿ, ತಮೋರೆ ಅಜೇಯ ಶತಕ ಗಳಿಸಿದ್ದರು. ಬಲಗೈ ಬ್ಯಾಟ್ಸ್‌ಮನ್ ಆಗಿರುವ ಟಮೋರೆ ಮಧ್ಯಮ ಕ್ರಮಾಂಕದಲ್ಲಿ ನಂಬಿಕಸ್ಥ ಬ್ಯಾಟರ್ ಆಗಿದ್ದಾರೆ. ಪರಿಸ್ಥಿತಿ ಅಗತ್ಯವಿರುವಾಗ ಸ್ಫೋಟಕ ಬ್ಯಾಟಿಂಗ್‌ಗೂ ಹೆಸರುವಾಸಿಯಾಗಿದ್ದಾರೆ.