ಸಿಡ್ನಿ: ರೋಹಿತ್ ಶರ್ಮ(121) ಅವರ ಸೊಗಸಾದ ಶತಕ ಮತ್ತು ವಿರಾಟ್ ಕೊಹ್ಲಿ(74)ಯ ಆಕರ್ಷಕ ಅರ್ಧಶತಕದ ನೆರವಿನಿಂದ ಶನಿವಾರ ನಡೆದ ಆಸ್ಟ್ರೇಲಿಯಾ(IND vs AUS 3rd ODI) ವಿರುದ್ಧ 3ನೇ ಹಾಗೂ ಕೊನೆ ಏಕದಿನ ಪಂದ್ಯದಲ್ಲಿ ಭಾರತ ಭರ್ಜರಿ 9 ವಿಕೆಟ್‌ಗಳ ಗೆಲುವು ಸಾಧಿಸಿದೆ. ಈ ಮೂಲಕ ವೈಟ್‌ವಾಶ್ ಮುಖಭಂಗದಿಂದ ಪಾರಾಗಿದೆ. ಜತೆಗೆ ಶುಭಮನ್ ಗಿಲ್ ನಾಯಕನಾಗಿ ಗೆಲುವಿನ ಶುಭಾರಂಭ ಕಂಡರು. ಇನ್ನು ಮುಂದಿನ 2 ವರ್ಷ ಭಾರತಕ್ಕೆ ಆಸೀಸ್ ನೆಲದಲ್ಲಿ ಸರಣಿಯಿಲ್ಲ. ಹೀಗಾಗಿ, ನಿವೃತ್ತಿ ಅಂಚಿನಲ್ಲಿರುವ ಕೊಹ್ಲಿ, ರೋಹಿತ್ ತಮ್ಮ ಕೊನೆ ಆಸೀಸ್ ಸರಣಿಯನ್ನು ಸ್ಮರಣೀಯವಾಗಿಸಿದರು.
ಸಿಡ್ನಿಯಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಆಸ್ಟ್ರೇಲಿಯಾದ ಎಲ್ಲ ಲೆಕ್ಕಾಚಾರವನ್ನು ಭಾರತೀಯ ಬೌಲರ್‌ಗಳು ಸಂಘಟಿತ ದಾಳಿ ಮೂಲಕ ಬುಡಮೇಲು ಮಾಡಿದರು. ಆಸೀಸ್ 46.4 ಓವರ್‌ಗಳಲ್ಲಿ 236 ರನ್‌ಗೆ ಆಲೌಟ್ ಆಯಿತು. ಗುರಿ ಬೆನ್ನಟ್ಟಿದ ಭಾರತ ಯಾವುದೇ ಆಘಾತಕ್ಕೊಳಗಾಗದೆ 38.3 ಓವರ್‌ಗಳಲ್ಲಿ ಒಂದು ವಿಕೆಟ್ ನಷ್ಟಕ್ಕೆ 237 ರನ್ ಬಾರಿಸಿ ಗೆಲುವಿನ ನಗೆ ಬೀರಿತು. ಈ ಮೂಲಕ ಆಸೀಸ್‌ನ ಚೊಚ್ಚಲ ಕ್ಲೀನ್ ಸ್ವೀಪ್ ಯೋಜನೆಯನ್ನು ವಿಫಲಗೊಳಿಸಿತು. ಭಾರತ ವಿರುದ್ಧ ಆಸೀಸ್ 4 ದಶಕಗಳಿಂದ ದ್ವಿಪಕ್ಷೀಯ ಏಕದಿನ ಸರಣಿ ಆಡುತ್ತಿದೆ. ಆದರೆ ಒಮ್ಮೆಯೂ ಸರಣಿಯ ಎಲ್ಲಾ ಪಂದ್ಯಗಳನ್ನು ಗೆದ್ದು ಕ್ಲೀನ್‌ಸ್ವೀಪ್ ಮಾಡಿಲ್ಲ.
ರೋ-ಕೊ ಶೋ!
ಈ ಪಂದ್ಯದಲ್ಲಿ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಸೊಗಸಾದ ಬ್ಯಾಟಿಂಗ್ ಮೂಲಕ ಅಭಿಮಾನಿಗಳಿಗೆ ಬರಪೂರ ರಂಜನೆ ಒದಗಿಸಿದರು. ಶುಭಮನ್ ಗಿಲ್(24) ವಿಕೆಟ್ ಪತನದ ಬಳಿಕ ಜತೆಯಾದ ಈ ಜೋಡಿ ಅಜೇಯ ಬ್ಯಾಟಿಂಗ್ ಮೂಲಕ ಸಿಕ್ಸರ್ ಮತ್ತು ಬೌಂಡರಿಗಳ ಸುರಿಮಳೆಗೈದು ಆಸೀಸ್ ಬೌಲರ್‌ಗಳ ಬೆವರಿಳಿಸಿದರು. ಈ ಜೋಡಿ ಮುರಿಯದ 2ನೇ ವಿಕೆಟ್‌ಗೆ 168 ರನ್ ರಾಶಿ ಹಾಕಿತು.
ಪರ್ತ್ ಮತ್ತು ಅಡಿಲೇಡ್ ಪಂದ್ಯದಲ್ಲಿ ಸತತ ಶೂನ್ಯ ಸುತ್ತಿದ್ದ ಕೊಹ್ಲಿ, ಈ ಪಂದ್ಯದಲ್ಲಿ ತಾನೆದುರಿಸಿದ ಮೊದಲ ಎಸೆತದಲ್ಲೇ ಒಂದು ರನ್ ಕಸಿದು, ಕಿರುನಗೆಯೊಂದಿಗೆ ಇನಿಂಗ್ಸ್ ಆರಂಭಿಸಿದರು. ಬಳಿಕ ಚೆಂದದ ಕವರ್ ಡ್ರೈವ್, ಫುಲ್ ಶಾರ್ಟ್ ಮೂಲಕ ಚೆಂಡನ್ನು ಬೌಂಡರಿ ಗೆರೆ ದಾಟಿಸಿ ಅರ್ಧಶತಕ ಬಾರಿಸಿದರು. 81 ಎಸೆತ ಎದುರಿಸಿದ ಕೊಹ್ಲಿ 7 ಬೌಂಡರಿ ಮೂಲಕ 74* ರನ್ ಗಳಿಸಿದರು.
ಮತ್ತೊಂಡೆದೆ ಹಿಟ್‌ಮ್ಯಾನ್ ರೋಹಿತ್ ಕೂಡ ಆಸೀಸ್ ಬೌಲರ್‌ಗಳನ್ನು ದಂಡಿಸುತ್ತಾ ಸಾಗಿ ಏಕದಿನ ವೃತ್ತಿಜೀವನದ 33ನೇ ಶತಕ ಬಾರಿಸಿ ಸಂಭ್ರಮಿಸಿದರು. 13 ಬೌಂಡರಿ ಮತ್ತು 3 ಸಿಕ್ಸರ್ ಸಿಡಿಸಿ 121*ರನ್ ಬಾರಿಸಿದರು. ಇದು ಆಸೀಸ್ ವಿರುದ್ಧ ರೋಹಿತ್ ಬಾರಿಸಿದ 9ನೇ ಏಕದಿನ ಶತಕ. ದಾಖಲೆ ಕೊಹ್ಲಿ(10 ಶತಕ) ಹೆಸರಿನಲ್ಲಿದೆ. ಆಸ್ಟ್ರೇಲಿಯಾ ವಿರುದ್ಧ 2,500 ಏಕದಿನ ರನ್ ಗಳಿಸಿದ ಎರಡನೇ ಭಾರತೀಯ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೂ ರೋಹಿತ್ ಪಾತ್ರರಾದರು. ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ 3,077 ರನ್ ಗಳಿಸಿ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.
ಇದನ್ನೂ ಓದಿ IND vs AUS 3rd ODI: ರಾಣಾ ಬೌಲಿಂಗ್ ದಾಳಿಗೆ ತತ್ತರಿಸಿದ ಆಸೀಸ್; 236ರನ್‌ಗೆ ಆಲೌಟ್
ರಾಣಾ ದಾಳಿಗೆ ಕುಸಿದ ಆಸೀಸ್
ಇದಕ್ಕೂ ಮುನ್ನ ಬ್ಯಾಟಿಂಗ್ ನಡೆಸಿದ ಆಸೀಸ್‌ಗೆ ಮೊಹಮ್ಮದ್ ಸಿರಾಜ್, ಅಪಾಯಕಾರಿ ಟ್ರಾವಿಸ್ ಹೆಡ್(29) ವಿಕೆಟ್ ಕೀಳುವ ಮೂಲಕ ಮೊದಲ ಆಘಾತವಿಕ್ಕಿದರು. ಆ ಬಳಿಕ ಹರ್ಷಿತ್ ರಾಣಾ ಘಾತಕ ದಾಳಿ ಮೂಲಕ ಆಸೀಸ್ ಬ್ಯಾಟರ್‌ಗಳನ್ನು ಪೆವಿಲಿಯನ್‌ಗೆ ಅಟ್ಟಿದರು. 39 ರನ್‌ಗೆ 4 ವಿಕೆಟ್ ಕಿತ್ತು ಎಲ್ಲ ಟೀಕೆಗೆ ಉತ್ತರ ನೀಡಿದರು. ಆಸೀಸ್ ಪರ ಮ್ಯಾಟ್ ರೆನ್ಶಾ ಅರ್ಧಶತಕ ಬಾರಿಸುವ ಮೂಲಕ ತಂಡಕ್ಕೆ ನೆರವಾದರು. ಅವರು 56 ರನ್ ಗಳಿಸಿದರು. ಉಳಿದಂತೆ ನಾಯಕ ಮಿಚೆಲ್ ಮಾರ್ಷ್ 41, ಮ್ಯಾಥ್ಯೂ ಶಾರ್ಟ್ 30 ರನ್ ಬಾರಿಸಿದರು.