ಹ್ಯೂಸ್ಟನ್ (ಅಮೆರಿಕ), ಜೂ.24: ದಿಗ್ಗಜ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಅವರ ಅವಳಿ ಗೋಲು ಮತ್ತು ತಂಡದ ಸಹ ಆಟಗಾರರ ಅಮೋಘ ಪ್ರದರ್ಶನದ ನೆರವಿನಿಂದ ಪೋರ್ಚುಗಲ್ ತಂಡ ಫಿಫಾ ವಿಶ್ವಕಪ್‌ನಲ್ಲಿ ಭರ್ಜರಿ ಗೆಲುವಿನ ಖಾತೆ ತೆರೆದಿದೆ. ಮಂಗಳವಾರ ತಡರಾತ್ರಿ ನಡೆದ ಉಜ್ಬೇಕಿಸ್ತಾನ ವಿರುದ್ಧದ ‘ಕೆ’ ಗುಂಪಿನ ಪಂದ್ಯದಲ್ಲಿ 5-0 ಅಂತರದ ಗೆಲುವು ಸಾಧಿಸಿ ನಾಕೌಟ್ ಹೊಸ್ತಿಲಿಗೆ ಬಂದು ನಿಂತಿತು.
ಕಾಂಗೊ ರಿಪಬ್ಲಿಕ್ ವಿರುದ್ಧದ ಮೊದಲ ಪಂದ್ಯಲ್ಲಿ ಗೋಲು ಬಾರಿಸಲು ವಿಫಲವಾಗಿ ಭಾರೀ ಟೀಕೆಗೆ ಗುರಿಯಾಗಿದ್ದ ಕ್ರಿಸ್ಟಿಯಾನೊ ರೊನಾಲ್ಡೊ ಈ ಪಂದ್ಯದ 6ನೇ ನಿಮಿಷದಲ್ಲೇ ಗೋಲು ಬಾರಿಸಿದರು. ಇದೇ ವೇಳೆ ಫಿಫಾ ವಿಶ್ವಕಪ್‌ನಲ್ಲಿ ಆಡಿದ ಆರೂ ಆವೃತ್ತಿಗಳಲ್ಲಿ ಗೋಲು ದಾಖಲಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. 2006ರ ಆವೃತ್ತಿಯಲ್ಲಿ ಇರಾನ್ ವಿರುದ್ಧ ತಮ್ಮ ಮೊದಲ ವಿಶ್ವಕಪ್ ಗೋಲು ಗಳಿಸಿದ್ದರು.
41 ವರ್ಷ ವಯಸ್ಸಿನ ರೊನಾಲ್ಡೊ 39ನೇ ನಿಮಿಷದಲ್ಲಿ ಮತ್ತೊಂದು ಗೋಲು ಬಾರಿಸಿ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿದರು. ಮಾತ್ರವಲ್ಲದೆ ತನ್ನ ವಿರುದ್ಧದ ಟೀಕೆಗಳಿಗೆ ತಕ್ಕ ಉತ್ತರ ನೀಡಿದರು. ರೊನಾಲ್ಡೊ ಹೊರತುಪಡಿಸಿ ತಂಡದ ಪರ ನುನೊ ಮೆಂಡೆಸ್ (17ನೇ) ಮತ್ತು ರಫೆಲ್ ಲಿಯೊ (87ನೇ) ತಲಾ ಒಂದು ಗೋಲು ಬಾರಿಸಿದರು. ಒಂದು ಗೋಲು ಎದುರಾಳಿ ತಂಡದ ಗೋಲ್‌ಕೀಪರ್ ಅಬ್ದುವೋಹಿದ್ ನೆಮಾಟೋವ್ ಮಾಡಿದ ತಪ್ಪಿನಿಂದ ಲಭಿಸಿತು.
ಮೆಸ್ಸಿ,ಎಂಬಾಪೆ ಮ್ಯಾಜಿಕ್; ಫಿಫಾ ನಾಕೌಟ್‌ಗೆ ಲಗ್ಗೆಯಿಟ್ಟ ಅರ್ಜೆಂಟೀನಾ, ಫ್ರಾನ್ಸ್
ಅರ್ಜೆಂಟೀನಾ ನಾಯಕ ಲಿಯೊನೆಲ್ ಮೆಸ್ಸಿ ಅವರೂ ವಿಶ್ವಕಪ್‌ನ ಆರು ಆವೃತ್ತಿಗಳಲ್ಲಿ ಆಡಿದ್ದಾರೆ. ಆದರೆ, 2010ರ ಆವೃತ್ತಿಯಲ್ಲಿ ಅವರಿಗೆ ಗೋಲು ಗಳಿಸಲು ಸಾಧ್ಯವಾಗಿರಲಿಲ್ಲ. 2003ರಲ್ಲಿ ಅಂತರ ರಾಷ್ಟ್ರೀಯ ಪಂದ್ಯಕ್ಕೆ ಪದಾರ್ಪಣೆ ಮಾಡಿದ ರೊನಾಲ್ಡೊ ಇದುವರೆಗೆ 230 ಪಂದ್ಯಗಳಲ್ಲಿ ದಾಖಲೆಯ 145 ಗೋಲು ಗಳಿಸಿದ್ದಾರೆ. ಇದು ಅವರ ಕೊನೆಯ ವಿಶ್ವಕಪ್ ಆಗಿರುವ ಕಾರಣ ಕನಸಿನ ವಿಶ್ವಕಪ್ ಗೆಲುವಿಗಾಗಿ ವಯಸ್ಸನ್ನೂ ಲೆಕ್ಕಿಸದೆ ಶಕ್ತಿ ಮೀರಿದ ಪ್ರಯತ್ನವೊಂದನ್ನು ಮಾಡಲಿದ್ದಾರೆ.