ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

RR vs DC: ರಾಹುಲ್‌–ನಿಸ್ಸಾಂಕ ಅಬ್ಬರ: ರಾಜಸ್ಥಾನ್‌ ಎದುರು ಗೆದ್ದು ಬೀಗಿದ ಡೆಲ್ಲಿ

IPL 2026: ಇದಕ್ಕೂ ಮುನ್ನ ಬ್ಯಾಟಿಂಗ್‌ ನಡೆಸಿದ ರಾಜಸ್ಥಾನ್‌ ರಾಯಲ್ಸ್‌ಗೆ ಉತ್ತಮ ಆರಂಭ ಸಿಗದಿದ್ದರೂ ಮಧ್ಯಮ ಕ್ರಮಾಂಕದಲ್ಲಿ ನಾಯಕ ರಿಯಾನ್‌ ಪರಾಗ್‌ ಮತ್ತು ವಿಕೆಟ್ ಕೀಪರ್ ಬ್ಯಾಟರ್ ಧ್ರುವ್ ಜುರೆಲ್ ಜವಾಬ್ದಾರಿಯುತ ಬ್ಯಾಟಿಂಗ್‌ ಮೂಲಕ ತಂಡಕ್ಕೆ ನೆರವಾದರು. ಈ ಜೋಡಿ ಮೂರನೇ ವಿಕೆಟ್‌ಗೆ 102 ರನ್‌ಗಳ ಜತೆಯಾಟ ನಡೆಸಿತು. ಹಾಲಿ ಆವೃತ್ತಿಯಲ್ಲಿ ಸತತ ಬ್ಯಾಟಿಂಗ್‌ ವೈಫಲ್ಯ ಕಂಡಿದ್ದ ಪರಾಗ್‌ ಅರ್ಧಶತಕ ಬಾರಿಸಿ ಬ್ಯಾಟಿಂಗ್‌ ಫಾರ್ಮ್‌ ಕಂಡುಕೊಂಡರು.

Pathum Nissanka and KL Rahul

ಜೈಪುರ, ಮೇ 1: ಶುಕ್ರವಾರದ ಬೃಹತ್‌ ಮೊತ್ತದ ಐಪಿಎಲ್‌(IPL 2026) ಮೇಲಾಟದಲ್ಲಿ ಆತಿಥೇಯ ರಾಜಸ್ಥಾನ್‌ ರಾಯಲ್ಸ್‌ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್‌(RR vs DC) ತಂಡ 7 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿತು. ಇದು ಡೆಲ್ಲಿಗೆ ಒಲಿದ 4ನೇ ಗೆಲುವಾದರೆ, ರಾಜಸ್ಥಾನ್‌ ಎದುರಾದ 4ನೇ ಸೋಲು.

ಇಲ್ಲಿನ ಸವಾಯಿ ಮಾನ್ಸಿಂಗ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್‌ ಗೆದ್ದ ರಾಜಸ್ಥಾನ್‌ ಬ್ಯಾಟಿಂಗ್‌ ಆಯ್ದುಕೊಂಡಿತು. ಆಯ್ಕೆ ತಕ್ಕ ಬ್ಯಾಟಿಂಗ್‌ ಪ್ರದರ್ಶನ ತೋರುವ ಮೂಲಕ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 225 ರನ್‌ ಬಾರಿಸಿತು. ಆಕ್ರಮಣಕಾರಿ ಬ್ಯಾಟರ್‌ಗಳಿರುವ ಡೆಲ್ಲಿಗೆ ಈ ಮೊತ್ತ ಸವಾಲಾಗಲಿಲ್ಲ. ತಂಡ 19.1 ಓವರ್‌ಗಳಲ್ಲೇ ಕೇವಲ 3 ವಿಕೆಟ್ ಕಳೆದುಕೊಂಡು 226 ರನ್‌ ಬಾರಿಸಿ ಸುಲಭವಾಗಿ ಗೆಲುವಿನ ದಡ ಸೇರಿತು. ಜತೆಗೆ ಪ್ಲೇ-ಆಫ್‌ ರೇಸ್‌ನಲ್ಲಿ ತನ್ನ ಹೋರಾಟವನ್ನು ಜೀವಂತವಿರಿಸಿತು. ಇದು ಐಪಿಎಲ್‌ ಇತಿಹಾಸದಲ್ಲಿ ಡೆಲ್ಲಿ ತಂಡದ ಅತ್ಯಧಿಕ ಯಶಸ್ವಿ ರನ್‌ ಚೇಸ್‌.

ಅಬ್ಬರಿಸಿದ ರಾಹುಲ್‌-ನಿಸ್ಸಂಕಾ

ದೊಡ್ಡ ಮೊತ್ತವನ್ನು ಬೆನ್ನಟ್ಟಿದ ಡೆಲ್ಲಿಗೆ ಆರಂಭಿಕರಾದ ಕೆ.ಎಲ್‌ ರಾಹುಲ್‌ ಮತ್ತು ಪಾತುಮ್ ನಿಸ್ಸಂಕಾ ಉತ್ತಮ ಅಡಿಪಾಯ ಹಾಕಿದರು. ಉಭಯ ಆಟಗಾರರು ಜಿದ್ದಿಗೆ ಬಿದ್ದವಂತೆ ಬ್ಯಾಟ್‌ ಬೀಸುವ ಮೂಲಕ ರಾಜಸ್ಥಾನ್‌ ಬೌಲರ್‌ಗಳ ಮೇಲೆ ಸವಾರಿ ಮಾಡಿದರು. 9.3 ಓವರ್‌ ತನಕ ಬ್ಯಾಟ್‌ ಬೀಸಿದ ಈ ಜೋಡಿ ಮೊದಲ ವಿಕೆಟ್‌ಗೆ ಬರೋಬ್ಬರಿ 110 ರನ್‌ಗಳನ್ನು ರಾಶಿ ಹಾಕಿತು. ಮುನ್ನುಗ್ಗಿ ಬಾರಿಸುತ್ತಿದ್ದ ಈ ಜೋಡಿಯನ್ನು ರವೀಂದ್ರ ಜಡೇಜಾ ಬೇರ್ಪಡಿಸಿದರು. 62(6 ಬೌಂಡರಿ, 3 ಸಿಕ್ಸರ್‌) ರನ್‌ ಗಳಿಸಿದ್ದ ವೇಳೆ ನಿಸ್ಸಾಂಕ ಅವರನ್ನು ಎಲ್‌ಬಿಡಬ್ಲ್ಯು ಬಲೆಗೆ ಬೀಳಿಸಿದರು.

ನಿಸ್ಸಂಕಾ ವಿಕೆಟ್‌ ಕಿತ್ತರೂ ರಾಜಸ್ಥಾನ್‌ಗೆ ಪಂದ್ಯದಲ್ಲಿ ಹಿಡಿತ ಸಾಧಿಸಲು ಸಾಧ್ಯವಾಗಲಿಲ್ಲ. ಆ ಬಳಿಕ ಕ್ರೀಸ್‌ಗಿಳಿದ ಎಡಗೈ ಬ್ಯಾಟರ್‌ ನಿತೇಶ್‌ ರಾಣಾ ಕೂಡ ಆಕ್ರಮಣಕಾರಿ ಬ್ಯಾಟಿಂಗ್‌ ಮೂಲಕ ರಾಜಸ್ಥಾನ್‌ ಬೌಲರ್‌ಗಳ ಚಳಿ ಬಿಡಿಸಿದರು. ಮತ್ತೊಂದು ಕಡೆ ಕ್ರೀಸ್‌ನಲ್ಲಿ ಬೇರೂರಿದ್ದ ರಾಹುಲ್‌ ತಮ್ಮ ಕ್ಲಾಸ್‌ ಬ್ಯಾಟಿಂಗ್‌ ಮೂಲಕ ಅರ್ಧಶತಕ ಪೂರ್ತಿಗೊಳಿಸಿದರು. ಪ್ರತಿ ಓವರ್‌ನಲ್ಲಿಯೂ ಕನಿಷ್ಠ ಒಂದು ಸಿಕ್ಸರ್‌ ಅಥವಾ ಬೌಂಡರಿ ಬಾರಿಸುತ್ತಲೇ ಇದ್ದರು.

ಗೆಲುವಿಗೆ 33 ಎಸೆತಗಳಲ್ಲಿ 55 ರನ್‌ ಬೇಕಿದ್ದ ವೇಳೆ ರಾಣಾ ವಿಕೆಟ್‌ ಪತನಗೊಂಡಿತು. ಅವರು 17 ಎಸೆತಗಳಲ್ಲಿ 33 ರನ್‌ ಕೊಡುಗೆ ನೀಡಿದರು. 40 ಎಸೆತ ಎದುರಿಸಿದ ರಾಹುಲ್‌ ಸೊಗಸಾದ 5 ಸಿಕ್ಸರ್‌ ಮತ್ತು 6 ಬೌಂಡರಿ ಸಿಡಿಸಿ 75 ರನ್‌ ಬಾರಿಸಿದರು. ಇದೇ ವೇಳೆ ಆರೆಂಜ್‌ ಕ್ಯಾಪ್‌ ರೇಸ್‌ನಲ್ಲಿ ಮೊದಲ ಸ್ಥಾನ ತಮ್ಮದಾಗಿಸಿಕೊಂಡರು. 9 ಪಂದ್ಯಗಳಿಂದ 433 ರನ್‌ ಬಾರಿಸಿದ್ದಾರೆ.

ಅಂತಿಮವಾಗಿ ಡೆಲ್ಲಿ ತಂಡವನ್ನು ಸ್ಟಬ್ಸ್‌(18*) ಮತ್ತು ಅಶುತೋಷ್ ಶರ್ಮಾ(25*) ಅಜೇಯ ಬ್ಯಾಟಿಂಗ್‌ ಮೂಲಕ ಗೆಲುವಿನ ದಡ ಸೇರಿಸಿದರು. ರಾಜಸ್ಥಾನ್‌ ಪರ ಜಡೇಜಾ, ಆರ್ಚರ್‌ ತಲಾ ಒಂದು ವಿಕೆಟ್‌ ಕಿತ್ತರು.



‌ನಾಯಕನ ಆಟವಾಡಿದ ಪರಾಗ್

ಇದಕ್ಕೂ ಮುನ್ನ ಬ್ಯಾಟಿಂಗ್‌ ನಡೆಸಿದ ರಾಜಸ್ಥಾನ್‌ ರಾಯಲ್ಸ್‌ಗೆ ಉತ್ತಮ ಆರಂಭ ಸಿಗದಿದ್ದರೂ ಮಧ್ಯಮ ಕ್ರಮಾಂಕದಲ್ಲಿ ನಾಯಕ ರಿಯಾನ್‌ ಪರಾಗ್‌ ಮತ್ತು ವಿಕೆಟ್ ಕೀಪರ್ ಬ್ಯಾಟರ್ ಧ್ರುವ್ ಜುರೆಲ್ ಜವಾಬ್ದಾರಿಯುತ ಬ್ಯಾಟಿಂಗ್‌ ಮೂಲಕ ತಂಡಕ್ಕೆ ನೆರವಾದರು. ಈ ಜೋಡಿ ಮೂರನೇ ವಿಕೆಟ್‌ಗೆ 102 ರನ್‌ಗಳ ಜತೆಯಾಟ ನಡೆಸಿತು. ಹಾಲಿ ಆವೃತ್ತಿಯಲ್ಲಿ ಸತತ ಬ್ಯಾಟಿಂಗ್‌ ವೈಫಲ್ಯ ಕಂಡಿದ್ದ ಪರಾಗ್‌ ಅರ್ಧಶತಕ ಬಾರಿಸಿ ಬ್ಯಾಟಿಂಗ್‌ ಫಾರ್ಮ್‌ ಕಂಡುಕೊಂಡರು.

ಸೂರ್ಯವಂಶಿಯನ್ನು ಕ್ಲೀನ್‌ ಬೌಲ್ಡ್‌ ಮಾಡಿ ಘರ್ಜಿಸಿದ ಜೇಮಿಸನ್; ವಿಡಿಯೊ ವೈರಲ್‌

ಜುರೇಲ್‌ 42 ರನ್‌ ಗಳಿಸಿದರೆ, ಪರಾಗ್‌ 50 ಎಸೆತಗಳಲ್ಲಿ 5 ಸಿಕ್ಸರ್‌ ಮತ್ತು 8 ಬೌಂಡರಿ ನೆರವಿನಿಂದ 90 ರನ್‌ ಗಳಿಸಿದರು. ಕೇವಲ 10 ರನ್‌ ಅಂತರದಲ್ಲಿ ಶತಕ ವಂಚಿತರಾದರು. ಹಾಲಿ ಆವೃತ್ತಿಯ ಮೊದಲ ಪಂದ್ಯವನ್ನಾಡಿದ ಮಿಚೆಲ್‌ ಸ್ಟಾರ್ಕ್‌ ಅವರು ತಾವೆಸೆದ ಮೊದಲ ಎಸೆತದಲ್ಲೇ ಯಶಸ್ವಿ ಜೈಸ್ವಾಲ್‌ ಅವರಿಂದ ಸಿಕ್ಸರ್‌ ಹೊಡೆಸಿಕೊಂಡರೂ ಅದೇ ಓವರ್‌ನ ಮೂರನೇ ಎಸೆತದಲ್ಲಿ ಅವರ ವಿಕೆಟ್‌ ಕಿತ್ತು ಮೇಲುಗೈ ಸಾಧಿಸಿದರು. ಒಟ್ಟು ಮೂರು ವಿಕೆಟ್‌ ಕಿತ್ತರೂ 40 ರನ್‌ ಬಿಟ್ಟು ಕೊಟ್ಟು ದುಬಾರಿ ಎನಿಸಿದರು. ವೈಭವ್‌ ಸೂರ್ಯವಂಶಿ(4) ಕೈಲ್‌ ಜೇಮಿಸನ್‌ ಓವರ್‌ನಲ್ಲಿ ಕ್ಲೀನ್‌ ಬೌಲ್ಡ್‌ ಆದರು.

CSK vs MI: ಮುಂಬೈಗೆ ಮಾಡು ಇಲ್ಲವೇ ಮಡಿ ಪಂದ್ಯ; ಚೆನ್ನೈ ಎದುರಾಳಿ

ಕೆಳ ಕ್ರಮಾಂಕದಲ್ಲಿ ಬಿರುಸಿನ ಬ್ಯಾಟಿಂಗ್‌ ನಡೆಸಿದ ಡೊನೊವನ್‌ ಫೆರಿಯೆರಾ ಕೇವಲ 14 ಎಸೆತಗಳಲ್ಲಿ ಅಜೇಯ 47 ರನ್‌ ಸಿಡಿಸಿ ತಂಡದ ಮೊತ್ತವನ್ನು 200ರ ಗಡಿ ದಾಟಿಸಿದರು. ಅವರ ಈ ಬ್ಯಾಟಿಂಗ್‌ ಇನಿಂಗ್ಸ್‌ನಲ್ಲಿ 6 ಸಿಕ್ಸರ್‌ಗಳು ಸಿಡಿಯಿತು. ರವೀಂದ್ರ ಜಡೇಜಾ 20 ರನ್‌ ಕೊಡುಗೆ ನೀಡಿದರು. 12 ರನ್‌ಗೆ ಎರಡು ವಿಕೆಟ್‌ ಕಿತ್ತ ಡೆಲ್ಲಿ ಬೌಲರ್‌ಗಳು ಆ ಬಳಿಕ ಸರಿಯಾಗಿ ದಂಡಿಸಿಕೊಂಡರು.

ಸಂಕ್ಷಿಪ್ತ ಸೋರ್

ರಾಜಸ್ಥಾನ್‌ ರಾಯಲ್ಸ್‌; 6 ವಿಕೆಟ್‌ಗೆ 225(ರಿಯಾನ್‌ ಪರಾಗ್‌, 90, ಫೆರಿಯೆರಾ ಔಟಾಗದೆ 47, ಜುರೆಲ್ 42, ಜಡೇಜಾ 20, ಮಿಚೆಲ್‌ ಸ್ಟಾರ್ಕ್‌ 40ಕ್ಕೆ 3). ಡೆಲ್ಲಿ ಕ್ಯಾಪಿಟಲ್ಸ್‌; 3 ವಿಕೆಟ್‌ಗೆ 226 (ಕೆ.ಎಲ್‌ ರಾಹುಲ್‌ 75 ಪಾತುಮ್ ನಿಸ್ಸಂಕಾ 62, ನಿತೇಶ್‌ ರಾಣಾ 33, ಜಡೇಜಾ 33ಕ್ಕೆ 1).