ಲಕ್ನೋ: ಇತ್ತೀಚೆಗೆ ಮುಕ್ತಾಯಗೊಂಡ ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯಲ್ಲಿ(ND vs ENG Test Series) ಅಮೋಘ ಬೌಲಿಂಗ್ ಪ್ರದರ್ಶನ ನೀಡಿ ಮಿಂಚಿದ್ದ ವೇಗಿ ಆಕಾಶ್‌ದೀಪ್‌ಗೆ(Akash Deep) ಕಾನೂನು ಸಂಕಷ್ಟವೊಂದು ಎದುರಾಗಿದೆ. ಇಂಗ್ಲೆಂಡ್ ಪ್ರವಾಸ ಮುಗಿಸಿ ಸ್ವದೇಶಕ್ಕೆ ಮರಳಿದ್ದ ಆಕಾಶ್ ತಮ್ಮ ಕನಸಿನ ಕಾರು ಖರೀದಿಸಿದ್ದರು. ಆದರೆ ಅವರೀಗ ಉತ್ತರ ಪ್ರದೇಶ ಸಾರಿಗೆ ಇಲಾಖೆಯ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಆಕಾಶ್‌ದೀಪ್ ಟೊಯೊಟಾ ಫಾರ್ಚೂನರ್ ಕಾರು ಖರೀದಿಸಿ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಇಲ್ಲೆ ಕಾರನ್ನು ಚಲಾಯಿಸಿದ್ದಕ್ಕಾಗಿ ನೋಟೀಸ್ ಪಡೆದಿದ್ದಾರೆ. ಜತೆಗೆ ಅವರಿಗೆ ಕಾರು ವಿತರಿಸಿದ ಡೀಲರ್ ವಿರುದ್ಧವೂ ಕ್ರಮ ಕೈಗೊಳ್ಳಲಾಗಿದೆ. ಮಾತ್ರವಲ್ಲದೆ ಒಂದು ತಿಂಗಳ ಕಾಲ ಅದರ ಡೀಲರ್‌ಶಿಪ್‌ಅನ್ನು ಅಮಾನತುಗೊಳಿಸಲಾಗಿದೆ. ಆಕಾಶ್‌ದೀಪ್ ಖರೀದಿ ಮಾಡಿದ್ದ ಟಯೊಟಾ ಫಾರ್ಚೂನರ್ ಕಾರಿನ ಬೆಲೆ 62 ಲಕ್ಷ ರೂ. ಗೂ ಅಧಿಕವಾಗಿತ್ತು. ಒಂದೊಮ್ಮೆ ಆಕಾಶ್‌ದೀಪ್ ನಿಯಮ ಉಲ್ಲಂಘಿಸಿರುವುದು ಸಾಬೀತಾದರೆ ಅವರ ಕಾರು ಜಪ್ತಿಯಾಗಲಿದೆ.
1988ರ ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 39, 41 (6) ಮತ್ತು 207 ರ ಅಡಿ ವಾಹನ ಬಳಕೆಯನ್ನು ನಿಲ್ಲಿಸುವಂತೆ ಸಾರಿಗೆ ಇಲಾಖೆ ಕಾರು ಮಾಲೀಕ ಕ್ರಿಕೆಟಿಗ ಆಕಾಶ್‌ದೀಪ್ ಸಿಂಗ್ ಅವರಿಗೆ ನೋಟಿಸ್ ನೀಡಿದೆ. ಎಲ್ಲ ಕಾನೂನು ವಿಧಿವಿಧಾನಗಳು ಪೂರ್ಣಗೊಳ್ಳುವವರೆಗೆ ವಾಹನವನ್ನು ರಸ್ತೆಯಲ್ಲಿ ಓಡಿಸಬಾರದು ಎಂದು ಸೂಚಿಸಿದೆ. ಒಂದು ವೇಳೆ, ನಿಯಮ ಉಲ್ಲಂಘನೆ ಆಗಿದ್ದು ಕಂಡು ಬಂದಲ್ಲಿ ವಾಹನವನ್ನು ವಶಪಡಿಸಿಕೊಳ್ಳಲಾಗುತ್ತದೆ ಮತ್ತು ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಆರ್‌ಟಿಒ ಎಚ್ಚರಿಸಿದೆ.
ಈ ಕುರಿತು ಮಾತನಾಡಿರುವ ಲಕ್ನೋದ ಆರ್‌ಟಿಒ ಅಧಿಕಾರಿ ಪ್ರದೀಪ್ ಕುಮಾರ್ ಸಿಂಗ್, "ಕ್ರಿಕೆಟಿಗ ಆಕಾಶ್‌ದೀಪ್ ಆಗಸ್ಟ್ 7 ರಂದು ಕಾರನ್ನು ಖರೀದಿಸಿದ್ದರು. ಕಾರು ಮಾರಾಟದ ಇನ್‌ವಾಯ್ಸ್ ಅನ್ನು ಡೀಲರ್ ಅದೇ ದಿನಾಂಕದಂದು ನೀಡಿದ್ದರು. ಆದರೆ, ಕಾರು ವಿಮೆಯನ್ನು ಆಗಸ್ಟ್ 8 ರಂದು ಮಾಡಲಾಗಿದೆ. ಇಲ್ಲಿಯವರೆಗೆ ವಾಹನದ ರಸ್ತೆ ತೆರಿಗೆಯ ಬಗ್ಗೆ ಪೋರ್ಟಲ್‌ನಲ್ಲಿ ಠೇವಣಿ ಮಾಡಲಾಗಿಲ್ಲ, ಇದು ಕೇಂದ್ರ ಮೋಟಾರು ವಾಹನ ನಿಯಮಗಳ ಉಲ್ಲಂಘನೆಯಾಗಿದೆ" ಎಂದು ಹೇಳಿದ್ದಾರೆ.
ಇದನ್ನೂ ಓದಿ ಇಂಗ್ಲೆಂಡ್ ಸರಣಿಯ ವೇಳೆ ಗಂಭೀರ್ ಹೇಳಿದ್ದ ಮಾತನ್ನು ರಿವೀಲ್ ಮಾಡಿದ ಆಕಾಶ್ ದೀಪ್!
ಭಾರತ ಪರ 10 ಟೆಸ್ಟ್ ಪಂದ್ಯಗಳನ್ನು ಆಡಿರುವ ಆಕಾಶ್‌ದೀಪ್ ಒಟ್ಟು 28 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಇತ್ತೀಚೆಗೆ ಇಂಗ್ಲೆಂಡ್ ಪ್ರವಾಸದಲ್ಲಿ ಉತ್ತಮ ಪ್ರದರ್ಶನ ನೀಡಿ 13 ವಿಕೆಟ್‌ಗಳನ್ನು ಕಬಳಿಸಿದ್ದರು. ಅಂತಿಮ ಟೆಸ್ಟ್‌ನಲ್ಲಿ ಅರ್ಧಶತಕ ಕೂಡ ಬಾರಿಸಿ ಪಂದ್ಯದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.