ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Sachin Tendulkar maiden 100: ಕ್ರಿಕೆಟ್‌ ದೇವರ ಚೊಚ್ಚಲ ಶತಕಕ್ಕೆ 35ನೇ ವರ್ಷದ ಸಂಭ್ರಮ

ಏಕದಿನ ಕ್ರಿಕೆಟ್‌ನಲ್ಲಿ ಒಟ್ಟು 463 ಪಂದ್ಯಗಳನ್ನು ಆಡಿರುವ ಸಚಿನ್‌ 18,426 ರನ್‌ ಗಳಿಸಿದ್ದು, 49 ಶತಕ ಬಾರಿಸಿದ್ದಾರೆ. ಟೆಸ್ಟ್‌ ಕ್ರಿಕೆಟ್‌ನಲ್ಲಿ200 ಪಂದ್ಯಗಳ ಪೈಕಿ 15,921 ರನ್‌ ಕಲೆಹಾಕಿದ್ದು, 51 ಶತಕ ಸಿಡಿಸಿದ್ದಾರೆ. ಒಟ್ಟಾರೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ100 ಶತಕಗಳನ್ನು ಬಾರಿಸಿದ ಏಕೈಕ ಬ್ಯಾಟ್ಸ್‌ಮನ್‌ ಎನಿಸಿಕೊಂಡಿದ್ದಾರೆ.

ಸಚಿನ್‌ ಮೊದಲ ಅಂತಾರಾಷ್ಟ್ರೀಯ ಶತಕ ಬಾರಿಸಿದ್ದು ಇದೇ ದಿನ

Abhilash BC Abhilash BC Aug 14, 2025 11:25 AM

ಮುಂಬಯಿ: ಕ್ರಿಕೆಟ್‌ ದೇವರು ಎಂದು ಕರೆಸಿಕೊಳ್ಳುವ ಭಾರತ ದಿಗ್ಗಜ ಸಚಿನ್ ತೆಂಡೂಲ್ಕರ್‌‌, ಮೊದಲ ಶತಕ(Sachin Tendulkar maiden 100) ಗಳಿಸಿ ಇವತ್ತಿಗೆ ಬರೋಬ್ಬರಿ 35 ವರ್ಷ ತುಂಬಿತು. ಹೌದು, 1990 ಆಗಸ್ಟ್ 14ರಂದು ಸಚಿನ್ ತೆಂಡೂಲ್ಕರ್(Sachin Tendulkar ) ಮೊದಲ ಅಂತಾರಾಷ್ಟ್ರೀಯ ಶತಕ ಬಾರಿಸಿದ್ದರು. ಇಂಗ್ಲೆಂಡ್ ವಿರುದ್ಧ ಓಲ್ಡ್ ಟ್ರಾಫರ್ಡ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ 17 ವರ್ಷ 112 ದಿನ ಪ್ರಾಯ ಸಚಿನ್‌ ಚೊಚ್ಚಲ ಅಂತಾರಾಷ್ಟ್ರೀಯ ಶತಕ ಬಾರಿಸಿ ಮಿಂಚಿದ್ದರು. ಇದೇ ವೇಳೆ ಟೆಸ್ಟ್‌ ಮಾದರಿಯಲ್ಲಿ ಶತಕ ದಾಖಲಿಸಿದ ಮೂರನೇ ಕಿರಿಯ ಆಟಗಾರ ಎಂಬ ಖ್ಯಾತಿಗೆ ಪಾತ್ರರಾಗಿದ್ದರು.

ತಮ್ಮ ಎಂಟನೇ ಟೆಸ್ಟ್‌ ಪಂದ್ಯದಲ್ಲಿ ಮೂರಂಕಿ ಮುಟ್ಟಿದ್ದ ಸಚಿನ್‌, ಪಂದ್ಯದಲ್ಲಿ 189 ಎಸೆತಗಳಿಂದ ಅಜೇಯ 119 ರನ್‌ ಗಳಿಸಿದ್ದರು. ಅವರ ಈ ಶತಕದ ನೆರವಿನಿಂದ ಭಾರತವು ಟೆಸ್ಟ್‌ ಪಂದ್ಯವನ್ನು ಡ್ರಾ ಮಾಡಿಕೊಂಡಿತ್ತು.

ಅಂದಿನ ಪಂದ್ಯದಲ್ಲಿ ಟಾಸ್‌ ಗೆದ್ದ ಇಂಗ್ಲೆಂಡ್‌ ಮೊದಲು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡಿತ್ತು. ನಾಯಕ ಗ್ರಾಹಂ ಗೂಚ್‌(116), ಮೈಕ್‌ ಅಥರ್‌ಟನ್‌ (131), ಮತ್ತು ರಾಬಿನ್‌ ಸ್ಮಿತ್‌ (ಅಜೇಯ 121) ಶತಕ ಗಳಿಸಿದ್ದರಿಂದ ಇಂಗ್ಲೆಂಡ್‌ ಮೊದಲ ಇನಿಂಗ್ಸ್‌ನಲ್ಲಿ 519 ರನ್‌ ಕಲೆ ಹಾಕಿತ್ತು. ಇದಕ್ಕುತ್ತರವಾಗಿ ಭಾರತ 432 ರನ್‌ ಗಳಿಸಿತ್ತು.

ನಾಯಕ ಮೊಹಮದ್‌ ಆಜರುದ್ದೀನ್‌ 179, ಸಂಜಯ್‌ ಮಂಜ್ರೇಕರ್‌ 93 ಮತ್ತು ಸಚಿನ್‌ 68 ರನ್ ಬಾರಿಸಿದ್ದರು 87 ರನ್‌ ಮುನ್ನಡೆಯೊಂದಿಗೆ ಎರಡನೇ ಇನಿಂಗ್ಸ್‌ ಆರಂಭಿಸಿದ ಆಂಗ್ಲರು 4 ವಿಕೆಟ್‌ ನಷ್ಟಕ್ಕೆ 320 ರನ್‌ ಗಳಿಸಿ ಡಿಕ್ಲೇರ್‌ ಮಾಡಿಕೊಂಡಿದ್ದರು. 408 ರನ್‌ಗಳ ಗುರಿ ಬೆನ್ನತ್ತಿದ ಭಾರತ ಪರ ಆರಂಭಿಕ ನವಜೋತ್‌ ಸಿಧು (0) ಮತ್ತು ರವಿ ಶಾಸ್ತ್ರಿ (12) ಇಬ್ಬರೂ ಅಲ್ಪ ಮೊತ್ತಕ್ಕೆ ನಿರ್ಗಮಿಸಿದ್ದರು ಜೊತೆಯಾಟದಲ್ಲಿ ಸಂಜಯ್‌ ಮಂಜ್ರೇಕರ್ (32) ಮತ್ತು ದಿಲೀಪ್‌ ವೆಂಗ್‌ಸರ್ಕರ್ (50)‌‌‌ ಕ್ರಮಾಂಕದಲ್ಲಿ 74 ರನ್‌ ಜೊತೆಯಾಟವಾಡಿದ್ದರು.



ಆದಾಗ್ಯೂ ಅಜರುದ್ಧೀನ್‌ ಪಡೆ 109 ರನ್‌ ಗಳಿಸುವಷ್ಟರಲ್ಲಿ ನಾಲ್ಕು ವಿಕೆಟ್‌ ಕಳೆದುಕೊಂಡಿತ್ತು. ಈ ವೇಳೆ ಆರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಸಚಿನ್,‌ ನಾಯಕನ ಜೊತೆಗೂಡಿ ಐದನೇ ವಿಕೆಟ್‌ ಜೊತೆಯಾಟದಲ್ಲಿ 18 ರನ್‌, ಆರನೇ ವಿಕೆಟ್‌ಗೆಕಪಿಲ್‌ ದೇವ್‌ ಜೊತೆಗೆ 56ರನ್‌ ಗಳಿಸಿದರು. ಐದನೇ ದಿನದಾಟ ಮುಗಿಯುವವರೆಗೂ ಅಜೇಯವಾಗಿ ಉಳಿದ ಸಚಿನ್,‌‌ ಪಂದ್ಯ ಡ್ರಾ ಆಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಏಕದಿನ ಕ್ರಿಕೆಟ್‌ನಲ್ಲಿ ಒಟ್ಟು 463 ಪಂದ್ಯಗಳನ್ನು ಆಡಿರುವ ಸಚಿನ್‌ 18,426 ರನ್‌ ಗಳಿಸಿದ್ದು, 49 ಶತಕ ಬಾರಿಸಿದ್ದಾರೆ. ಟೆಸ್ಟ್‌ ಕ್ರಿಕೆಟ್‌ನಲ್ಲಿ200 ಪಂದ್ಯಗಳ ಪೈಕಿ 15,921 ರನ್‌ ಕಲೆಹಾಕಿದ್ದು, 51 ಶತಕ ಸಿಡಿಸಿದ್ದಾರೆ. ಒಟ್ಟಾರೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ100 ಶತಕಗಳನ್ನು ಬಾರಿಸಿದ ಏಕೈಕ ಬ್ಯಾಟ್ಸ್‌ಮನ್‌ ಎನಿಸಿಕೊಂಡಿದ್ದಾರೆ.

ಇದನ್ನೂ ಓದಿ IND vs ENG: ಲಾರ್ಡ್ಸ್‌ ಅಂಗಣಕ್ಕೆ ಮೊದಲ ಪ್ರವೇಶದ ಘಟನೆಯನ್ನು ನೆನೆದ ಸಚಿನ್‌ ತೆಂಡೂಲ್ಕರ್‌!