IND vs ENG: ಲಾರ್ಡ್ಸ್ ಅಂಗಣಕ್ಕೆ ಮೊದಲ ಪ್ರವೇಶದ ಘಟನೆಯನ್ನು ನೆನೆದ ಸಚಿನ್ ತೆಂಡೂಲ್ಕರ್!
ಲಾರ್ಡ್ಸ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ತಮ್ಮ ಕ್ರಿಕೆಟ್ ದಿನಗಳ ಭಾವಚಿತ್ರ ಅನಾವರಣಗೊಂಡ ನಂತರ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ತಮ್ಮ ಎಕ್ಸ್ ಖಾತೆಯಲ್ಲಿ ಹೃದಯಸ್ಪರ್ಶಿ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಮಾಸ್ಟರ್ ಬ್ಲಾಸ್ಟರ್ ತಮ್ಮ ಪೋಸ್ಟ್‌ನಲ್ಲಿ ಈ ಐತಿಹಾಸಿಕ ಅಂಗಣಕ್ಕೆ ತಮ್ಮ ಮೊದಲ ಭೇಟಿಯನ್ನು ನೆನಪಿಸಿಕೊಂಡರು. ಈ ವೇಳೆ ಗಂಟೆ ಬಾರಿಸುವ ಮೂಲಕ ಮೂರನೇ ಟೆಸ್ಟ್ ಪಂದ್ಯಕ್ಕೆ ಚಾಲನೆ ನೀಡಿದ್ದಾರೆ.

ಲಾರ್ಡ್ಸ್ ಅಂಗಣದ ಬಗ್ಗೆ ಹೃದಯಸ್ಪರ್ಶಿ ಪೋಸ್ಟ್ ಹಂಚಿಕೊಂಡ ಸಚಿನ್ ತೆಂಡೂಲ್ಕರ್.

ಲಂಡನ್: ಇಲ್ಲಿನ ಐತಿಹಾಸಿಕ ಲಾರ್ಡ್ಸ್ (Lords Stadium) ಅಂಗಣದಲ್ಲಿ ಗುರುವಾರ ಭಾರತ ಹಾಗೂ ಇಂಗ್ಲೆಂಡ್ (IND vs ENG) ತಂಡಗಳ ನಡುವಣ ಮೂರನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ (Sachin Tendulkar)ಗೆ ಗೌರವವನ್ನು ಸಲ್ಲಿಸಲಾಗಿದೆ. ಎಂಸಿಸಿ ಮ್ಯೂಸಿಯಂನಲ್ಲಿ ಮಾಸ್ಟರ್-ಬ್ಲಾಸ್ಟರ್ ಅವರು ಐದು ನಿಮಿಷಗಳ ಕಾಲ ಗಂಟೆಯನ್ನು ಬಾರಿಸುವ ಮೂಲಕ ಲಾರ್ಡ್ಸ್ ಟೆಸ್ಟ್ ಪಂದ್ಯಕ್ಕೆ ಚಾಲನೆಯನ್ನು ನೀಡಿದ್ದಾರೆ. ಇದಾದ ಬಳಿಕ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಈ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಹೃದಯಸ್ಪರ್ಶಿ ಶೀರ್ಷಿಕೆಯನ್ನು ನೀಡಿದ್ದಾರೆ.
ಸಚಿನ್ ತೆಂಡೂಲ್ಕರ್ ಅವರು 1988ರಲ್ಲಿ ಇಂಗ್ಲೆಂಡ್‌ಗೆ ಚೊಚ್ಚಲ ಪ್ರವಾಸವನ್ನು ಕೈಗೊಂಡಿದ್ದರು. ಈ ವೇಳೆ ಅವರು ಲಾರ್ಡ್ಸ್ ಅಂಗಣಕ್ಕೆ ಪದಾರ್ಪಣೆ ಮಾಡಿದ್ದರು, ಆದರೆ, ಅವರು ಈ ವೇಳೆ ಆಡಲು ಸಾಧ್ಯವಾಗಿರಲಿಲ್ಲ. ಎರಡು ವರ್ಷಗಳ ಬಳಿಕ ಅವರು 1990ರಲ್ಲಿ ಐತಿಹಾಸಿಕ ಲಾರ್ಡ್ಸ್ ಅಂಗಣದಲ್ಲಿ ಚೊಚ್ಚಲ ಟೆಸ್ಟ್ ಪಂದ್ಯವನ್ನು ಆಡಿದ್ದರು. ತಮ್ಮ ಎಕ್ಸ್ ಖಾತೆಯಲ್ಲಿ ಕ್ರಿಕೆಟ್ ದೇವರು ಲಾರ್ಡ್ಸ್‌ಗೆ ಮೊದಲ ಬಾರಿಯ ಪ್ರವೇಶವನ್ನು ಸ್ಮರಿಸಿಕೊಂಡಿದ್ದಾರೆ. ಅವರು 1989 ರಲ್ಲಿ ಸ್ಟಾರ್ ಕ್ರಿಕೆಟ್ ಕ್ಲಬ್‌ನೊಂದಿಗೆ ಐಕಾನಿಕ್ ಸ್ಥಳಕ್ಕೆ ಮರಳಿದ್ದರು. 2011 ರಲ್ಲಿ ಅವರು ಲಾರ್ಡ್ಸ್‌ನಲ್ಲಿ ಕೊನೆಯ ಟೆಸ್ಟ್ ಆಡಿದ್ದರು.
IND vs ENG: ಐತಿಹಾಸಿಕ ಲಾರ್ಡ್ಸ್ ಅಂಗಣದಲ್ಲಿ ಗಂಟೆ ಬಾರಿಸಿ ಪಂದ್ಯಕ್ಕೆ ಚಾಲನೆ ನೀಡಿದ ಕ್ರಿಕೆಟ್ ದೇವರು!
ಎಕ್ಸ್ ಖಾತೆಯಲ್ಲಿ ಹೃದಯಸ್ಪರ್ಶಿ ಪೋಸ್ಟ್ ಹಂಚಿಕೊಂಡ ಸಚಿನ್
"ನಾನು ಬಾಲಕನಿದ್ದಾಗ ಮೊದಲ ಬಾರಿ 1988ರಲ್ಲಿ ಲಾರ್ಡ್ಸ್‌ಗೆ ಪ್ರವೇಶ ಮಾಡಿದ್ದೆ ಹಾಗೂ 1989ರಲ್ಲಿ ಇಲ್ಲಿನ ಸ್ಟಾರ್ ಕ್ರಿಕೆಟ್ ಕ್ಲಬ್‌ಗೆ ಮರಳಿದ್ದೆ. ಪೆವಿಲಿಯನ್ ಬಳಿ ನಿಂತು ಇತಿಹಾಸದಲ್ಲಿ ಮುಳುಗಿ ಸದ್ದಿಲ್ಲದೆ ಕನಸು ಕಂಡಿದ್ದನ್ನು ನಾನು ಈಗಲೂ ನೆನಪಿಸಿಕೊಳ್ಳುತ್ತೇನೆ. ಇಂದು(ಜುಲೈ 10) ಈ ಸ್ಥಳದಲ್ಲಿ ನನ್ನ ಭಾವಚಿತ್ರವನ್ನು ಅನಾವರಣಗೊಳಿಸುವುದನ್ನು ಪದಗಳಲ್ಲಿ ಹೇಳುವುದು ಕಷ್ಟಕರವಾದ ಭಾವನೆ. ಜೀವನವು ನಿಜವಾಗಿಯೂ ಪೂರ್ಣ ವೃತ್ತಕ್ಕೆ ಬಂದಿದೆ. ನಾನು ಕೃತಜ್ಞನಾಗಿದ್ದೇನೆ ಮತ್ತು ಅದ್ಭುತ ನೆನಪುಗಳಿಂದ ತುಂಬಿದ್ದೇನೆ," ಎಂದು ಸಚಿನ್ ತೆಂಡೂಲ್ಕರ್ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
I first visited Lord’s as a teenager in 1988, and returned in 1989 with the Star Cricket Club team.
— Sachin Tendulkar (@sachin_rt) July 10, 2025
I remember standing near the pavilion, soaking in the history and dreaming quietly.
Today, to have my portrait unveiled at this very place is a feeling that’s hard to put into… pic.twitter.com/ZC987eH8oZ
ಐಸಿಸಿ ಹಾಲ್ ಆಫ್ ಫೇಮ್ ಗೌರವ ಹೊಂದಿರುವ ಸಚಿನ್ ತೆಂಡೂಲ್ಕರ್ ಲಾರ್ಡ್ಸ್‌ನಲ್ಲಿ ಐಕಾನಿಕ್ ಗಂಟೆ ಬಾರಿಸಿದರು. ಪಂದ್ಯ ಆರಂಭವಾಗುವ 5 ನಿಮಿಷಗಳ ಮೊದಲು ಇದನ್ನು ಅವರು ಬಾರಿಸಿದ್ದರು. ಸಚಿನ್ ಯುಕೆ ಮಾಜಿ ಪ್ರಧಾನಿ ರಿಷಿ ಸುನಕ್ ಅವರೊಂದಿಗೆ ಆರಂಭಿಕ ದಿನದ ಆಟವನ್ನು ಆನಂದಿಸುತ್ತಿದ್ದರು. ಅವರು ಭಾರತದ ಮಾಜಿ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಫಾರೂಖ್ ಎಂಜಿನಿಯರ್ ಅವರನ್ನು ಲಾರ್ಡ್ಸ್‌ನಲ್ಲಿ ಭೇಟಿಯಾದರು.
ಉಭಯ ತಂಡಗಳ ಪ್ಲೇಯಿಂಗ್ XI
ಭಾರತ: ಶುಭಮನ್ ಗಿಲ್ (ನಾಯಕ), ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ಕರುಣ್ ನಾಯರ್, ರಿಷಭ್ ಪಂತ್, ನಿತೀಶ್ ಕುಮಾರ್ ರೆಡ್ಡಿ, ರವೀಂದ್ರ ಜಡೇಜಾ, ಾಷಿಂಗ್ಟನ್ ಸುಂದರ್, ಆಕಾಶ್ ದೀಪ್, ಜಸ್‌ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್
ಇಂಗ್ಲೆಂಡ್: ಬೆನ್ ಸ್ಟೋಕ್ಸ್ (ನಾಯಕ), ಝ್ಯಾಕ್ ಕ್ರಾವ್ಲಿ, ಬೆನ್ ಡಕೆಟ್, ಒಲ್ಲಿ ಪೋಪ್, ಜೋ ರೂಟ್, ಹ್ಯಾರಿ ಬ್ರೂಕ್, ಜೇಮಿ ಸ್ಮಿತ್, ಕ್ರಿಸ್ ವೋಕ್ಸ್, ಬ್ರೈಡೆನ್ ಕಾರ್ಸ್, ಜೋಫ್ರಾ ಆರ್ಚರ್, ಶೋಯೆಬ್ ಬಶೀರ್