ಲಾಹೋರ್: ಪಾಕಿಸ್ತಾನ ಕ್ರಿಕೆಟ್‌ನಲ್ಲಿ ಅಶಾಂತಿ ನೆಲೆಸಿದೆ. ಹೀಗಾಗಿ ಮೊಹ್ಸಿನ್ ನಖ್ವಿ(Mohsin Naqvi) ಅವರು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಅಧ್ಯಕ್ಷ ಸ್ಥಾನದಿಂದ ತಕ್ಷಣ ಕೆಳಗಿಳಿಯುವಂತೆ ಪಾಕಿಸ್ತಾನದ ಮಾಜಿ ನಾಯಕ ಹಾಗೂ ಆಟಗಾರ ಶಾಹಿದ್ ಅಫ್ರಿದಿ(Shahid Afridi) ಒತ್ತಾಯಿಸಿದ್ದಾರೆ. ಪಾಕಿಸ್ತಾನದ ಆಂತರಿಕ ಸಚಿವರಾಗಿರುವ ನಖ್ವಿ ಏಕಕಾಲದಲ್ಲಿ ಎರಡೆರಡು ಜವಾಬ್ದಾರಿಗಳನ್ನು ನಿರ್ವಹಿಸುವುದು ಅವಾಸ್ತವಿಕ ಎಂದು ಅಫ್ರಿದಿ ಹೇಳಿದ್ದಾರೆ.
ನಖ್ವಿಯವರ ಬಹುಮುಖಿ ಕಾರ್ಯದ ವಿರುದ್ಧ ಅಫ್ರಿದಿ ಮಾತನಾಡುತ್ತಿರುವುದು ಇದೇ ಮೊದಲಲ್ಲ. ಚಾಂಪಿಯನ್ಸ್ ಟ್ರೋಫಿಯ ನಂತರ, ಪಿಸಿಬಿ ಅಧ್ಯಕ್ಷ ಸ್ಥಾನವನ್ನು ಪೂರ್ಣಾವಧಿಯ ಬದ್ಧತೆಯಾಗಿ ಪರಿಗಣಿಸುವಂತೆ ಅಫ್ರಿದಿ, ನಖ್ವಿಗೆ ಸಲಹೆ ನೀಡಿದ್ದರು. ಇತ್ತೀಚಿನ ಏಷ್ಯಾ ಕಪ್ ಸೋಲಿನ ನಂತರ, ನಖ್ವಿ ಪಾಕಿಸ್ತಾನ ಕ್ರಿಕೆಟ್‌ನೊಳಗಿನ ಸಮಸ್ಯೆಗಳನ್ನು ಪರಿಹರಿಸಲು ವಿಫಲರಾಗಿದ್ದಾರೆ ಎಂದು ಟೀಕಿಸಿದ್ದಾರೆ. ಟಿ20 ವಿಶ್ವಕಪ್ ವಿಜೇತ ಅಫ್ರಿದಿ, ನಖ್ವಿಗೆ ಆಟದ ಬಗ್ಗೆ ಜ್ಞಾನವಿಲ್ಲ ಮತ್ತು ಕಳಪೆ ಸಲಹೆಗಾರರೊಂದಿಗೆ ತನ್ನನ್ನು ಸುತ್ತುವರೆದಿದ್ದಾರೆ ಎಂದು ಹೇಳಿಕೊಂಡಿದ್ದಾರೆ.
"ನಖ್ವಿ ಸಾಹೇಬರಿಗೆ ನನ್ನ ವಿನಂತಿ ಅಥವಾ ಸಲಹೆ ಏನೆಂದರೆ ಇವು ಎರಡು ಬಹಳ ಮುಖ್ಯವಾದ ಹುದ್ದೆಗಳು ಮತ್ತು ಅವು ಸಮಯ ಕೊಡಬೇಕಾದ ದೊಡ್ಡ ಕೆಲಸಗಳು. ಹೀಗಾಗಿ ಒಂದು ಹುದ್ದೆಯನ್ನಷ್ಟೇ ಆಯ್ಕೆ ಮಾಡಿ. ನಿಮ್ಮ ಅಧಕಾರದ ಜಿದ್ದಿನಿಂದ ಪಾಕಿಸ್ತಾನ ಕ್ರಿಕೆಟ್ ನಾಶವಾಗುತ್ತಿದೆ" ಎಂದು ಅಫ್ರಿದಿ ಹೇಳಿರುವುದಾಗಿ ಟೆಲಿಕಾಂ ಏಷ್ಯಾ ಸ್ಪೋರ್ಟ್ ವರದಿ ಮಾಡಿದೆ.
"ಪಿಸಿಬಿ, ಆಂತರಿಕ ಸಚಿವಾಲಯಕ್ಕಿಂತ ಸಂಪೂರ್ಣವಾಗಿ ಭಿನ್ನವಾಗಿದೆ. ಆದ್ದರಿಂದ ಅದನ್ನು ಪ್ರತ್ಯೇಕವಾಗಿ ಇಡಬೇಕು. ಇದು ಒಂದು ದೊಡ್ಡ ನಿರ್ಧಾರವಾಗಿರುತ್ತದೆ ಮತ್ತು ಸಾಧ್ಯವಾದಷ್ಟು ಬೇಗ ಅದನ್ನು ತೆಗೆದುಕೊಳ್ಳಬೇಕು. ಪಾಕಿಸ್ತಾನ ಕ್ರಿಕೆಟ್‌ಗೆ ವಿಶೇಷ ಗಮನ ಮತ್ತು ಸಮಯ ಬೇಕಾಗುತ್ತದೆ. ನಖ್ವಿ ಸಂಪೂರ್ಣವಾಗಿ ಸಲಹೆಗಾರರನ್ನು ಅವಲಂಬಿಸಲು ಸಾಧ್ಯವಿಲ್ಲ. ಆಟದ ಬಗ್ಗೆ ತಿಳಿದಿರುವ ಉತ್ತಮ ಮತ್ತು ಸಮರ್ಥ ಸಲಹೆಗಾರರನ್ನು ಶೀಘ್ರದಲ್ಲೇ ನೇಮಿಸಬೇಕಾಗಿದೆ" ಎಂದು ಅಫ್ರಿದಿ ಹೇಳಿದರು.
ಇದನ್ನೂ ಓದಿ Mohsin Naqvi: ಬಿಸಿಸಿಐಗೆ ಕ್ಷಮೆಯಾಚಿಸಿದ ಮೊಹ್ಸಿನ್ ನಖ್ವಿ; ಟ್ರೋಫಿ ನೀಡಲು ನಿರಾಕರಣೆ