ನವದೆಹಲಿ, ಮಾ.26: ರಾಜಸ್ಥಾನ ರಾಯಲ್ಸ್(Rajasthan Royals' Sale) ತಂಡವನ್ನು ಕಾಲ್ ಸೊಮಾನಿ ಸಮೂಹದ ಒಕ್ಕೂಟವು ₹ 15,290 ಕೋಟಿಗೆ ಖರೀದಿಸಿದ ಬೆನ್ನಲ್ಲೇ, ತಂಡದ ಮಾಜಿ ಹಾಗೂ ದಿವಂಗತ ಆಟಗಾರ ಶೇನ್ ವಾರ್ನ್(Shane Warne) ಕುಟುಂಬಕ್ಕೆ ಸುಮಾರು ₹450 ಕೋಟಿ ರೂಪಾಯಿ ಸಿಗಲಿದೆ ಎಂದು ವರದಿಯಾಗಿದೆ.
ಹೌದು, 2008ರಲ್ಲಿ ಐಪಿಎಲ್‌ನ ಮೊದಲ ಸೀಸನ್‌ನಲ್ಲಿ ವಾರ್ನ್ ರಾಜಸ್ಥಾನ ರಾಯಲ್ಸ್ ತಂಡವನ್ನು ಮುನ್ನಡೆಸಿದ್ದರು. ಆಗ ಅವರು ಫ್ರಾಂಚೈಸಿ ಜತೆ ಕೇವಲ ಆಟಗಾರನಾಗಿ ಮಾತ್ರವಲ್ಲದೆ, ವ್ಯವಹಾರಿಕವಾಗಿಯೂ ಒಪ್ಪಂದವೊಂದನ್ನು ಮಾಡಿದ್ದರು. ಈ ಒಪ್ಪಂದದ ಪ್ರಕಾರ, ಅವರು ತಂಡಕ್ಕಾಗಿ ಆಡುವ ಪ್ರತಿ ವರ್ಷಕ್ಕೆ ₹6 ಕೋಟಿ ಸಂಭಾವನೆಯ ಜೊತೆಗೆ ತಂಡದ ಮಾಲೀಕತ್ವದಲ್ಲೂ ಶೇ 0.75ರಷ್ಟು ಪಾಲು ಪಡೆದುಕೊಂಡಿದ್ದರು.
ಮೊದಲ ಸೀಸನ್‌ನಲ್ಲೇ ತಂಡವನ್ನು ಚಾಂಪಿಯನ್ ಮಾಡಿದ ವಾರ್ನ್, ರಾಜಸ್ಥಾನ್ ಪರ ಒಟ್ಟು ನಾಲ್ಕು ಸೀಸನ್‌ಗಳನ್ನು ಆಡಿದರು. ಇದರಿಂದ ತಂಡದಲ್ಲಿ ಅವರ ಒಟ್ಟು ಪಾಲು 3%ಗೆ ಏರಿತು. ಈಗ ರಾಜಸ್ಥಾನ್ ರಾಯಲ್ಸ್ ತಂಡ ಮಾರಾಟವಾಗುತ್ತಿರುವುದರಿಂದ, ವಾರ್ನ್ ಹೊಂದಿದ್ದ ಈ 3% ಶೇರಿನ ಮೌಲ್ಯ ಸುಮಾರು ₹450 ರಿಂದ ₹460 ಕೋಟಿ ಆಗಲಿದೆ. ಇದೀಗ ಅವರ ಮಕ್ಕಳು ಇಕ್ವಿಟಿ ವರ್ಗಾವಣೆಯ ಮೂಲಕ ₹450 ಕೋಟಿ ಹಣವನ್ನು ಫ್ರಾಂಚೈಸಿಯಿಂದ ಕೇಳುವ ಸಾಧ್ಯತೆ ಇದೆ.
2008ರಲ್ಲಿ ಮನೋಜ್ ಬದಾಲೆ ನೇತೃತ್ವದ ಎಮರ್ಜಿಂಗ್ ಮೀಡಿಯಾ ಸಂಸ್ಥೆ, ರಾಜಸ್ಥಾನ್ ತಂಡವನ್ನು ಕೇವಲ 67 ಮಿಲಿಯನ್ ಡಾಲರ್‌ಗೆ ಖರೀದಿಸಿತ್ತು. ಆಗ ತಂಡದ ಕ್ಯಾಪ್ಟನ್, ಕೋಚ್ ಮತ್ತು ಕ್ರಿಕೆಟ್ ಕಾರ್ಯಾಚರಣೆಗಳ ಮುಖ್ಯಸ್ಥ ಎಲ್ಲವೂ ವಾರ್ನ್ ಅವರೇ ಆಗಿದ್ದರು. 2019ರಲ್ಲಿ ಸಂದರ್ಶನವೊಂದರಲ್ಲಿ, ವಾರ್ನ್ ಅವರು ತಾವು ಆಡಿದ ಪ್ರತಿ ಋತುವಿನಲ್ಲಿ ರಾಜಸ್ಥಾನ ರಾಯಲ್ಸ್‌ನ 0.75% ಮಾಲೀಕತ್ವದ ಪಾಲು ನೀಡುವ ಒಪ್ಪಂದ ಆಗಿದೆ ಎಂದಿದ್ದರು.
ಐಪಿಎಲ್ 2026: ಈ ಋತುವಿನಲ್ಲಿ ಪದಾರ್ಪಣೆ ಮಾಡಬಹುದಾದ ಐದು ಆಟಗಾರರು
ರಾಜಸ್ಥಾನ ರಾಯಲ್ಸ್ ಖರೀದಿಯನ್ನು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯು ಇನ್ನಷ್ಟೇ ಅನುಮೋದನೆ ನೀಡಬೇಕಿದೆ. ಪ್ರಸ್ತುತ ಐಪಿಎಲ್ ಟೂರ್ನಿ ನಂತರ ಬಿಸಿಸಿಐ ಅನುಮೋದನೆ ನೀಡುವ ಸಾಧ್ಯತೆ ಇದೆ.
ಸೊಮಾನಿ ಸಮೂಹದ ಒಕ್ಕೂಟದಲ್ಲಿ ವಾಲ್‌ಮಾರ್ಟ್ ಬಳಗದ ರಾಬ್ ವಾಲ್ಟನ್ ಮತ್ತು ಫೋರ್ಡ್ ಮೋಟಾರ್ ಕಂಪೆನಿಯ ಹ್ಯಾಂಪ್ ಕುಟುಂಬ ಸಹಭಾಗಿತ್ವ ಹೊಂದಿವೆ. ಸೊಮಾನಿ ಅವರು ತಂತ್ರಜ್ಞಾನ ಕ್ಷೇತ್ರದ ನವೋದ್ಯಮಿಯಾಗಿದ್ದಾರೆ. ಇಂಟ್ರಾಎಡ್ಜ್ (ಟೆಕ್ನಾಲಜಿ ಸರ್ವಿಸಸ್ ಮತ್ತು ಸಲ್ಯೂಷನ್ಸ್), ಟ್ರುಯೊ ಡಾಟ್ ಎಐ (ಡಾಟಾ ಪ್ರೈವೆಸಿ ರೈಟ್ಸ್ ಮತ್ತು ಎಐ ಗವರ್ನೆನ್ಸ್) ಹಾಗೂ ಅಕಾಡೆಮಿಯನ್ (ಎಡ್‌ಟೆಕ್ ಸರ್ವಿಸಸ್) ಸಂಸ್ಥಾಪಕರಾಗಿದ್ದಾರೆ.