ನವದೆಹಲಿ, ಜೂ.19: 2026ರ ಐಸಿಸಿ ಮಹಿಳಾ ಟಿ20 ವಿಶ್ವಕಪ್(Women's T20 World Cup)ನಲ್ಲಿ ಭಾರತಕ್ಕೆ ದೊಡ್ಡ ಹಿನ್ನಡೆಯಾಗಿದೆ, ಆಫ್-ಸ್ಪಿನ್ನರ್ ಶ್ರೇಯಾಂಕಾ ಪಾಟೀಲ್(Shreyanka Patil) ಪಾದದ ಗಾಯದಿಂದಾಗಿ ಪಂದ್ಯಾವಳಿಯ ಉಳಿದ ಪಂದ್ಯಗಳಿಂದ ಹೊರಗುಳಿದಿದ್ದಾರೆ. ಬುಧವಾರ ನೆದರ್ಲ್ಯಾಂಡ್ಸ್ ವಿರುದ್ಧದ ಭಾರತದ ಗ್ರೂಪ್ ಎ ಮುಖಾಮುಖಿಯ ಸಂದರ್ಭದಲ್ಲಿ ಅವರು ಗಾಯಗೊಂಡಿದ್ದರು. ಶ್ರೇಯಾಂಕಗೆ ಬದಲಿಯಾಗಿ, 24 ವರ್ಷದ ಪ್ರೇಮಾ ರಾವತ್(Prema Rawat) ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.
ಬುಧವಾರ ನಡೆದಿದ್ದ ನೆದರ್ಲೆಂಡ್ಸ್ ತಂಡ ವಿರುದ್ಧದ ಪಂದ್ಯಲ್ಲಿ ಆರನೇ ಓವರ್‌ನ ಮೊದಲನೇ ಎಸೆತದಲ್ಲಿ ಶ್ರೇಯಾಂಕ ಗಾಯಕ್ಕೆ ತುತ್ತಾಗಿದ್ದರು. ಬೌಲಿಂಗ್ ನಡೆಸುತ್ತಿದ್ದ ಶ್ರೇಯಾಂಕ ಮಿಡ್ ವಿಕೆಟ್‌ನಲ್ಲಿದ್ದ ಫೀಲ್ಡರ್ ಚೆಂಡನ್ನು ಹಿಡಿಯಲು ಪ್ರಯತ್ನಿಸಿ ವಿಫಲರಾದಾಗ ಸ್ವತಃ ಶ್ರೇಯಾಂಕ ಅವರೇ ಓಡಿ ಹೋಗಿ ಚೆಂಡನ್ನು ಹಿಡಿಯುವ ವೇಳೆ ಬಲಗಾಲು ಪಾದ ಉಳುಕಿ ನೆಲಕ್ಕೆ ಉರುಳಿದರು. ತೀವ್ರ ನೋವಿನಿಂದ ಬಳಲಿದ ಅವರಿಗೆ ನಡೆಯಾಲಾಗದ ಸ್ಥಿತಿ ಎದುರಾಯಿತು. ಬಳಿಕ ಅವರನ್ನು ಸ್ಟ್ರೆಚರ್ ಮೂಲಕ ಸಾಗಿಸಲಾಯಿತು.
ENG vs NZ: ಸನ್‌ಗ್ಲಾಸ್ ಧರಿಸಿ ಜೋಫ್ರಾ ಆರ್ಚರ್ ರಣತಂತ್ರವನ್ನು ಗೆದ್ದ ಗ್ಲೆನ್ ಫಿಲಿಪ್ಸ್!
ಪ್ರೇಮಾ ರಾವತ್‌ಗೆ ಇದು ಮೊದಲ ರಾಷ್ಟ್ರೀಯ ತಂಡ ಕರೆಯಾಗಿದೆ. ಅವರು WPL (ಮಹಿಳಾ ಪ್ರೀಮಿಯರ್ ಲೀಗ್) ನಲ್ಲಿ ಸ್ಮೃತಿ ಮಂಧಾನ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡಿದ್ದಾರೆ ಮತ್ತು ಜೂನ್ 20 ರಂದು ಪ್ರಾರಂಭವಾಗಲಿರುವ ವೈಟ್ ಬಾಲ್ ಸರಣಿಗಾಗಿ ಇಂಗ್ಲೆಂಡ್‌ನಲ್ಲಿರುವ ಭಾರತ A ತಂಡದ ಭಾಗವಾಗಿದ್ದರು.
"ಐಸಿಸಿ ಮಹಿಳಾ ಟಿ20 ವಿಶ್ವಕಪ್ 2026 ರ ಈವೆಂಟ್ ತಾಂತ್ರಿಕ ಸಮಿತಿಯು ಭಾರತ ತಂಡದಲ್ಲಿ ಶ್ರೇಯಾಂಕಾ ಪಾಟೀಲ್ ಬದಲಿಗೆ ಪ್ರೇಮಾ ರಾವತ್ ಅವರನ್ನು ಆಯ್ಕೆ ಮಾಡಿದೆ" ಎಂದು ಐಸಿಸಿ ಹೇಳಿಕೆಯಲ್ಲಿ ತಿಳಿಸಿದೆ. ಭಾರತ ಎ ತಂಡದ ಭಾಗವಾಗಿ ಈಗಾಗಲೇ ಇಂಗ್ಲೆಂಡ್‌ನಲ್ಲಿದ್ದ ರಾವತ್, ಈಗ ಟೂರ್ನಿಯ ಉಳಿದ ಪಂದ್ಯಗಳಿಗೆ ಹಿರಿಯರ ತಂಡದೊಂದಿಗೆ ಸ್ಥಾನ ಪಡೆಯಲಿದ್ದಾರೆ.
ಪ್ರೇಮಾ ರಾವತ್ ಡಬ್ಲ್ಯೂಪಿಎಲ್‌ನಲ್ಲಿ ಆಡಿರುವ 6 ಪಂದ್ಯಗಳಲ್ಲಿ ಮೂರು ವಿಕೆಟ್‌ಗಳನ್ನು ಪಡೆದಿದ್ದರು. ಹಾಲಿ ವಿಶ್ವಕಪ್‌ನಲ್ಲಿ ಮಹಿಳಾ ತಂಡಕ್ಕಾಗಿ ಅವರು ಹೇಗೆ ಪ್ರದರ್ಶನ ನೀಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ಒಂದೊಮ್ಮೆ ಅವರಿಗೆ ಆಡುವ ಅವಕಾಶ ಸಿಕ್ಕರೆ ಅವರಿಗೆ ಪದಾರ್ಪಣೆ ಪಂದ್ಯವಾಗಲಿದೆ.
ಭಾರತ ತಂಡದ ಪ್ರಸ್ತುತ ಅಭಿಯಾನದ ಬಗ್ಗೆ ಹೇಳುವುದಾದರೆ, ತಂಡವು ಮುಂದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು ಎದುರಿಸಲಿದೆ. ಜೂನ್ 21 ರಂದು ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್‌ನಲ್ಲಿ ಎರಡೂ ತಂಡಗಳು ಮುಖಾಮುಖಿಯಾಗಲಿದೆ. ಸತತ ಎರಡು ಗೆಲುವುಗಳೊಂದಿಗೆ ಅಜೇಯವಾಗಿರುವ ಭಾರತವು ದಕ್ಷಿಣ ಆಫ್ರಿಕಾ ವಿರುದ್ಧವೂ ಗೆಲ್ಲುವ ನಿರೀಕ್ಷೆಯಲ್ಲಿದೆ.