ನವದೆಹಲಿ, ಜ.3: ಜನವರಿ 11 ರಿಂದ ಆರಂಭವಾಗಲಿರುವ ನ್ಯೂಜಿಲೆಂಡ್ ವಿರುದ್ಧದ ತವರಿನ ಮೂರು(India squad for New Zealand ODI Series) ಪಂದ್ಯಗಳ ಏಕದಿನ ಸರಣಿಗೆ ಬಿಸಿಸಿಐ 15 ಸದಸ್ಯರ ಭಾರತ ತಂಡವನ್ನು ಶನಿವಾರ ಪ್ರಕಟಿಸಿತು. ಶುಭಮನ್ ಗಿಲ್ ತಂಡವನ್ನು ಮುನ್ನಡೆಸಲಿದ್ದು, ಆಸ್ಟ್ರೇಲಿಯಾ ಸರಣಿಯಲ್ಲಿ ಗಾಯಗೊಂಡು ವಿಶ್ರಾಂತಿ ಪಡೆದಿದ್ದ ಶ್ರೇಯಸ್ ಅಯ್ಯರ್ ಮತ್ತೆ ತಂಡ ಸೇರಿದ್ದು ಅವರನ್ನು ಉಪನಾಯಕನನ್ನಾಗಿ ನೇಮಿಸಲಾಗಿದೆ. ಇದು ಭಾರತದ ವರ್ಷದ ಮೊದಲ ಏಕದಿನ ಸರಣಿಯಾಗಿದೆ.
ಹಿರಿಯ ಆಟಗಾರರಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ರವೀಂದ್ರ ಜಡೇಜಾ ಅವರನ್ನು ತಂಡದಲ್ಲಿ ಉಳಿಸಿಕೊಳ್ಳಲಾಗಿದ್ದು, 50 ಓವರ್‌ಗಳ ಮಾದರಿಯಲ್ಲಿ ಭಾರತದ ಅನುಭವಿ ತಂಡವನ್ನು ಬಲಪಡಿಸಲಾಗಿದೆ. ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಕೂಡ ಏಕದಿನ ತಂಡಕ್ಕೆ ಮರಳಿದ್ದಾರೆ. ಆದರೆ ಮೊಹಮ್ಮದ್ ಶಮಿ ತಂಡದಿಂದ ಹೊರಗುಳಿದಿದ್ದಾರೆ. ಮಾರ್ಚ್ 2025 ರಲ್ಲಿ ಚಾಂಪಿಯನ್ಸ್ ಟ್ರೋಫಿಯ ನಂತರ ಶಮಿ ಭಾರತ ತಂಡದಲ್ಲಿ ಕಾಣಿಸಿಕೊಂಡಿಲ್ಲ.
ವಿಜಯ್ ಹಜಾರೆಯಲ್ಲಿ 5 ಇನಿಂಗ್ಸ್‌ನಲ್ಲಿ 4 ಶತಕ ಬಾರಿಸಿದರ ಹೊರತಾಗಿಯೂ ದೇವದತ್ ಪಡಿಕ್ಕಲ್ ಮತ್ತು ಋತುರಾಜ್ ಗಾಯಕ್ವಾಡ್ ಅವರನ್ನು ತಂಡದಿಂದ ಹೊರಗಿಡಲಾಗಿದೆ. ಗಾಯಕ್ವಾಡ್ ಇತ್ತೀಚೆಗೆ ದಕ್ಷಿಣ ಆಫ್ರಿಕಾ ಸರಣಿಯಲ್ಲಿ ಚೊಚ್ಚಲ ಶತಕ ಬಾರಿಸಿ ಮಿಂಚಿದ್ದರು.
ಪಾಂಡ್ಯಗೆ ವಿಶ್ರಾಂತಿ
ಅಯ್ಯರ್ ತಂಡದಲ್ಲಿ ಸ್ಥಾನ ಪಡೆದಿದ್ದರೂ ಬಿಸಿಸಿಐನ ಸೆಂಟರ್ ಆಫ್ ಎಕ್ಸಲೆನ್ಸ್‌ನಿಂದ ಅನುಮತಿ ಪಡೆಯಬೇಕಿದೆ. ಆಯ್ಕೆದಾರರು ಅವರ ಫಿಟ್‌ನೆಸ್ ಅನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಐಸಿಸಿ ಪುರುಷರ ಟಿ20 ವಿಶ್ವಕಪ್‌ಗೆ ಮುಂಚಿತವಾಗಿ ಕೆಲಸದ ಹೊರೆ ನಿರ್ವಹಣೆಯನ್ನು ಗಮನದಲ್ಲಿಟ್ಟುಕೊಂಡು ತೆಗೆದುಕೊಳ್ಳಲಾದ ನಿರ್ಧಾರದ ಆಧಾರದ ಮೇಲೆ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಮತ್ತು ಜಸ್‌ಪ್ರೀತ್ ಬುಮ್ರಾ ಅವರಿಗೆ ವಿಶ್ರಾಂತಿ ನೀಡಲಾಗಿದೆ.
ತಂಡದಲ್ಲಿ ಕೆಎಲ್ ರಾಹುಲ್ ಮತ್ತು ರಿಷಭ್ ಪಂತ್ ವಿಕೆಟ್ ಕೀಪಿಂಗ್ ಆಯ್ಕೆಗಳಾಗಿದ್ದರೆ. ಆಲ್‌ರೌಂಡ್ ಗುಂಪಿನಲ್ಲಿ ಜಡೇಜಾ, ವಾಷಿಂಗ್ಟನ್ ಸುಂದರ್ ಮತ್ತು ನಿತೀಶ್ ಕುಮಾರ್ ರೆಡ್ಡಿ ಇದ್ದಾರೆ.
"ಶ್ರೇಯಸ್ ಅಯ್ಯರ್ ಅವರ ಲಭ್ಯತೆಯು ಬಿಸಿಸಿಐ ಸಿಒಇಯಿಂದ ಫಿಟ್‌ನೆಸ್ ಕ್ಲಿಯರೆನ್ಸ್‌ಗೆ ಒಳಪಟ್ಟಿರುತ್ತದೆ. ಹಾರ್ದಿಕ್ ಪಾಂಡ್ಯ ಅವರಿಗೆ ಪಂದ್ಯದಲ್ಲಿ 10 ಓವರ್‌ಗಳನ್ನು ಬೌಲಿಂಗ್ ಮಾಡಲು ಬಿಸಿಸಿಐ ಸಿಒಇ ಅನುಮತಿ ನೀಡಿಲ್ಲ ಮತ್ತು ಐಸಿಸಿ ಪುರುಷರ ಟಿ20 ವಿಶ್ವಕಪ್ ಇರುವ ಕಾರಣ ಅವರ ಕೆಲಸದ ಹೊರೆಯನ್ನು ನಿರ್ವಹಿಸಲಾಗುತ್ತಿದೆ" ಎಂದು ಬಿಸಿಸಿಐ ಹೇಳಿಕೆಯಲ್ಲಿ ತಿಳಿಸಿದೆ.
ಭಾರತ ತಂಡ
ಶುಭಮನ್ ಗಿಲ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್ (ವಿ.ಕೀ.), ಶ್ರೇಯಸ್ ಅಯ್ಯರ್, ವಾಷಿಂಗ್ಟನ್ ಸುಂದರ್, ರವೀಂದ್ರ ಜಡೇಜಾ, ಮೊಹಮ್ಮದ್. ಸಿರಾಜ್, ಹರ್ಷಿತ್ ರಾಣಾ, ಪ್ರಸಿದ್ಧ್ ಕೃಷ್ಣ, ಕುಲದೀಪ್ ಯಾದವ್, ರಿಷಭ್ ಪಂತ್ (ವಿ.ಕೀ.), ನಿತೀಶ್ ಕುಮಾರ್ ರೆಡ್ಡಿ, ಅರ್ಷದೀಪ್ ಸಿಂಗ್, ಯಶಸ್ವಿ ಜೈಸ್ವಾಲ್.