ಅಹಮದಾಬಾದ್, ಮೇ 1: ವಿರಾಟ್ ಕೊಹ್ಲಿ(Virat Kohli) ತಮ್ಮ ಭಾರತದ ತಂಡದ ಸಹ ಆಟಗಾರ ಶುಭಮನ್ ಗಿಲ್(Shubman Gill) ಜೊತೆ ಆತ್ಮೀಯ ಬಾಂಧವ್ಯವನ್ನು ಹೊಂದಿದ್ದಾರೆ. ಆದರೆ ಅನುಭವಿ ಬ್ಯಾಟ್ಸ್‌ಮನ್ ಗುರುವಾರ ನಡೆದಿದ್ದ ಐಪಿಎಲ್(IPL 2026) ಪಂದ್ಯದಲ್ಲಿ ಸುಮಾರು 90,000 ಪ್ರೇಕ್ಷಕರ ಸಮ್ಮುಖದಲ್ಲಿ ಗಿಲ್ ವಿಕೆಟ್ ಪತನಗೊಂಡ ಆಕ್ರೋಶಭರಿತ ಬೀಳ್ಕೊಡುಗೆ ನೀಡಿದರು. ಪಂದ್ಯದ ಬಳಿಕ ಶುಭಮನ್ ಗಿಲ್ ಕೂಡ ತಕ್ಕ ತಿರುಗೇಟು ನೀಡಿದ್ದಾರೆ.
ಐಪಿಎಲ್‌ನಲ್ಲಿ ಗುಜರಾತ್ ಟೈಟಾನ್ಸ್ ತಂಡದ ನಾಯಕರಾಗಿರುವ ಗಿಲ್, ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ನೀಡಿದ್ದ 156 ರನ್‌ಗಳ ಸಾಧಾರಣ ಗುರಿಯನ್ನು ಬೆನ್ನಟ್ಟುವ ಮೂಲಕ ತಮ್ಮ ತಂಡಕ್ಕೆ ಅದ್ಭುತ ಆರಂಭ ನೀಡಿದರು. ಕೇವಲ 17 ಎಸೆತಗಳಲ್ಲಿ 43 ರನ್ ಗಳಿಸಿದ್ದರು. ಈ ವೇಳೆ ಭುವನೇಶ್ವರ್ ಕುಮಾರ್ ಅವರ ಎಸೆತವನ್ನು ಕವರ್ ಡ್ರೈವ್ ಮಾಡುವ ಪ್ರಯತ್ನದಲ್ಲಿ ವಿರಾಟ್ ಕೊಹ್ಲಿಗೆ ಕ್ಯಾಚ್ ನೀಡಿದರು. ಗಿಲ್ ಕ್ಯಾಚ್ ಪಡೆದ ಕೊಹ್ಲಿ ಆಕ್ರೋಶಭರಿತವಾಗಿ ಚೆಂಡನ್ನು ನೆಲಕ್ಕೆ ಎಸೆದು ಸಂಭ್ರಮಾಚರಣೆ ಮಾಡಿದರು.
ಪಂದ್ಯದ ಗೆಲುವಿನ ಬಳಿಕ ಶುಭಮನ್ ಗಿಲ್ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ತಂಡದ ಕೆಲವು ಫೋಟೊಗಳ ಜತೆ ವಿರಾಟ್ ಕೊಹ್ಲಿ ದಿಟ್ಟಿಸಿ ನೋಡುತ್ತಿರುವ ಫೋಟೊವನ್ನು ಹಂಚಿಕೊಂಡು "ಪ್ಲೇ ಹೋಲ್ಡ್ ಜೇಸನ್ ಹೋಲ್ಡರ್, ತಂಡದಿಂದ ದಿಟ್ಟ ಪ್ರದರ್ಶನ," ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ಆರ್‌ಸಿಬಿ ಘೋಷ ವಾಕ್ಯವಾದ ಪ್ಲೇ ಬೋಲ್ಡ್ ಎನ್ನುವ ಪದಕ್ಕೆ ಗಿಲ್ ಪ್ಲೇ ಹೋಲ್ಡ್ ಎಂದು ಕೊಹ್ಲಿ ಹಾಗೂ ಆರ್‌ಸಿಬಿಗೆ ತಕ್ಕ ತಿರುಗೇಟು ನೀಡಿದ್ದಾರೆ.
ಆರ್‌ಸಿಬಿ ನಾಯಕ ರಜತ್ ಪಟೀದಾರ್ ಅವರ ಔಟ್ ಆದ ರೀತಿ ಮತ್ತು ಜೇಸನ್ ಹೋಲ್ಡರ್ ಹಿಡಿದ ವಿವಾದಾತ್ಮಕ ಕ್ಯಾಚ್ ಈಗ ಭಾರಿ ಚರ್ಚೆಗೆ ಗ್ರಾಸವಾಗಿದೆ. ಈ ತೀರ್ಪಿನಿಂದ ಆಕ್ರೋಶಗೊಂಡ ವಿರಾಟ್ ಕೊಹ್ಲಿ ಮೈದಾನದ ಹೊರಗಿನ ಅಧಿಕಾರಿಯೊಂದಿಗೆ ವಾಗ್ವಾದ ನಡೆಸಿದ ಘಟನೆಯೂ ನಡೆಯಿತು.
GT vs RCB: ಬ್ಯಾಟಿಂಗ್ ವೈಫಲ್ಯವೇ ಸೋಲಿಗೆ ಕಾರಣ ಎಂದ ಆರ್‌ಸಿಬಿ ನಾಯಕ
ಆರ್‌ಸಿಬಿ ಪರ ಬ್ಯಾಟಿಂಗ್‌ನಲ್ಲಿ ವಿರಾಟ್ ಕೊಹ್ಲಿ (28)ಹಾಗೂ ದೇವದತ್ತ ಪಡಿಕ್ಕಲ್ (40) ನಿರೀಕ್ಷೆ ಮೂಡಿಸಿದರೂ ಪ್ರಯೋಜನವಾಗಲಿಲ್ಲ. ಜೇಕಬ್ ಬೆಥೆಲ್ (5), ನಾಯಕ ರಜತ್ ಪಾಟೀದಾರ್ (19), ಜಿತೇಶ್ ಶರ್ಮಾ (1), ಟಿಮ್ ಡೇವಿಡ್ (9) ಹಾಗೂ ಕೃಣಾಲ್ ಪಾಂಡ್ಯ (4) ವೈಫಲ್ಯ ಅನುಭವಿಸಿದರು. ಕೆಳ ಕ್ರಮಾಂಕದಲ್ಲಿ ರೊಮರಿಯೊ ಶೆಫರ್ಡ್ (17), ವೆಂಕಟೇಶ್ ಐಯ್ಯರ್ (12) ಹಾಗೂ ಭುವನೇಶ್ವರ್ ಕುಮಾರ್ (15*) ಉಪಯುಕ್ತ ಇನಿಂಗ್ಸ್ ಕಟ್ಟಿ ತಂಡವು ಸವಾಲಿನ ಮೊತ್ತ ಪೇರಿಸಲು ನೆರವಾದರು.