ಮೌಂಟ್ ಮೌಂಗನುಯಿ, ನ.14: ಭಾರತ ಮತ್ತು ನ್ಯೂಜಿಲೆಂಡ್ ನಡುವೆ ನಡೆಯುತ್ತಿರುವ ಐದು ಪಂದ್ಯಗಳ ಸರಣಿಯ ಐದನೇ ಹಾಗೂ ಅಂತಿಮ ಏಕದಿನ ಪಂದ್ಯವು, ಭಾನುವಾರದಂದು ಮೌಂಟ್ ಮೌಂಗನುಯಿಯ 'ಬೇ ಓವಲ್' ಮೈದಾನದಲ್ಲಿ ನಡೆಯಲಿದೆ. ಇದೇ ಮೈದಾನದಲ್ಲಿ ಶುಕ್ರವಾರ ನಡೆದಿದ್ದ ನಾಲ್ಕನೇ ಪಂದ್ಯದಲ್ಲಿ ಭಾರತ ತಂಡ 244 ರನ್ ಅಂತರದ ಹೀನಾಯ ಸೋಲು ಕಂಡಿತ್ತು. ಸರಣಿಯನ್ನು 3-1 ಅಂತರದಿಂದ ಗೆಲ್ಲಲು ಶ್ರೇಯಸ್ ಅಯ್ಯರ್ ಪಡೆಗೆ ನಾಳಿನ ಪಂದ್ಯದಲ್ಲಿ ಗೆಲುವು ಅತ್ಯಗತ್ಯ.
ಶುಕ್ರವಾರ ನಡೆದ ಪಂದ್ಯದಲ್ಲಿ, ಪ್ರಸ್ತುತ ಪ್ರವಾಸದಲ್ಲಿ ಇದೇ ಮೊದಲ ಬಾರಿಗೆ ಸ್ಟಾರ್ ಸ್ಪಿನ್ನರ್ ಕುಲದೀಪ್ ಯಾದವ್ ಅವರನ್ನು ಭಾರತದ ಆಡುವ ಹನ್ನೊಂದರ ಬಳಗದಲ್ಲಿ ಸೇರಿಸಿಕೊಳ್ಳಲಾಯಿತು. ಆದರೆ, ಅವರು ಒಂದೂ ವಿಕೆಟ್ ಪಡೆಯಲು ವಿಫಲರಾದರು ಮತ್ತು ತಮ್ಮ 8 ಓವರ್ಗಳ ಕೋಟಾದಲ್ಲಿ 73 ರನ್ಗಳನ್ನು ಬಿಟ್ಟುಕೊಟ್ಟರು. ವೇಗದ ಬೌಲರ್ಗಳ ಪ್ರಾಬಲ್ಯವಿದ್ದ ಈ ಪಂದ್ಯದಲ್ಲಿ, ಕುಲದೀಪ್ ಅವರ ಪ್ರದರ್ಶನವು ನಿರೀಕ್ಷಿತ ಮಟ್ಟದಲ್ಲಿ ಇಲ್ಲದಿದ್ದರಿಂದ, ಐದನೇ ಏಕದಿನ ಪಂದ್ಯಕ್ಕಾಗಿ ಭಾರತದ ಆಡುವ ಬಳಗದಲ್ಲಿ ಅವರು ತಮ್ಮ ಸ್ಥಾನವನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ.
ಸರಣಿಯ ನಿರ್ಣಾಯಕ ಪಂದ್ಯದಲ್ಲಿ ಕುಲ್ದೀಪ್ ಬದಲಿಗೆ ಮೊಹಮ್ಮದ್ ಸಿರಾಜ್ ತಂಡಕ್ಕೆ ಸೇರ್ಪಡೆಗೊಳ್ಳುವ ಸಾಧ್ಯತೆಯಿದೆ. ಭಾರತದ ಏಕದಿನ ತಂಡದಲ್ಲಿ ಸಿರಾಜ್ ಅತ್ಯಂತ ಅನುಭವಿ ವೇಗದ ಬೌಲರ್ ಆಗಿದ್ದರೂ, ಆಶ್ಚರ್ಯಕರವೆಂಬಂತೆ ಅವರು ಮೊದಲ ನಾಲ್ಕು ಪಂದ್ಯಗಳಲ್ಲಿ ಆಡುವ ಅವಕಾಶ ಪಡೆಯದೆ ಹೊರಗುಳಿದಿದ್ದಾರೆ. ಸತತ ನಾಲ್ಕು ಪಂದ್ಯಗಳಲ್ಲಿ ಸಿರಾಜ್ ಅವರನ್ನು ಆಡುವ ಹನ್ನೊಂದರ ಬಳಗದಿಂದ ಕೈಬಿಟ್ಟಿರುವುದು, ಭಾರತೀಯ ತಂಡದ ಆಡಳಿತ ಮಂಡಳಿಯ ನಿರ್ಧಾರಗಳು ಮತ್ತು ಆಯ್ಕೆ ಪ್ರಕ್ರಿಯೆಗಳ ಬಗ್ಗೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ವಿರಾಟ್ ಕೊಹ್ಲಿ, ಶುಭಮನ್ ಗಿಲ್ ಜತೆ ಅನಪೇಕ್ಷಿತ ದಾಖಲೆ ಪಟ್ಟಿ ಸೇರಿದ ಶ್ರೇಯಸ್ ಅಯ್ಯರ್
ಭಾರತವು ಕುಲದೀಪ್ ಅವರನ್ನು ತಂಡದಲ್ಲಿ ಉಳಿಸಿಕೊಳ್ಳಲು ನಿರ್ಧರಿಸಿದರೆ, ಗುರ್ನೂರ್ ಬ್ರಾರ್, ಆಕಿಬ್ ನಬಿ ಅಥವಾ ಅರ್ಷದೀಪ್ ಸಿಂಗ್ ಅವರ ಪೈಕಿ ಒಬ್ಬರ ಬದಲಿಗೆ ಸಿರಾಜ್ ಅವರು ಐದನೇ ಏಕದಿನ ಪಂದ್ಯದಲ್ಲಿ ಆಡುವ ಅವಕಾಶ ಪಡೆಯಬಹುದು. ಪ್ರಸ್ತುತ ಸರಣಿಯಲ್ಲಿ ಭಾರತ ಆಡಿರುವ ನಾಲ್ಕೂ ಪಂದ್ಯಗಳಲ್ಲಿ ಈ ಮೂವರು ವೇಗದ ಬೌಲರ್ಗಳು ಕಣಕ್ಕಿಳಿದಿದ್ದಾರೆ.
ನಾಲ್ಕನೇ ಏಕದಿನ ಪಂದ್ಯದಲ್ಲಿ ಋತುರಾಜ್ ಗಾಯಕ್ವಾಡ್ ಅವರು ರೋಹಿತ್ ಶರ್ಮಾ ಅವರೊಂದಿಗೆ ಇನ್ನಿಂಗ್ಸ್ ಆರಂಭಿಸಿದ್ದರು. ಮಹಾರಾಷ್ಟ್ರದ ಈ ಕ್ರಿಕೆಟಿಗ ಐದನೇ ಪಂದ್ಯದಲ್ಲೂ ಆರಂಭಿಕ ಆಟಗಾರನಾಗಿ ತಮ್ಮ ಸ್ಥಾನವನ್ನು ಉಳಿಸಿಕೊಳ್ಳುವ ಸಾಧ್ಯತೆಯಿದೆ.
ಒಂದೊಮ್ಮೆ ಎಡಗೈ ಮತ್ತು ಬಲಗೈ ಸಂಯೋಜನೆಯನ್ನು ತಂಡ ಬಯಸಿದರೆ, ಆಗ ಇಶಾನ್ ಕಿಶನ್ ಓಪನಿಂಗ್ ಮಾಡುವ ಮತ್ತು ಗಾಯಕ್ವಾಡ್ ಅವರನ್ನು ನಂ. 5 ಕ್ಕೆ ಇಳಿಸುವ ಸಾಧ್ಯತೆಯಿದೆ. ಆದರೆ ಕೇವಲ ಒಂದು ಪಂದ್ಯದ ನಂತರ ಅಂತಹ ಬದಲಾವಣೆಯ ಸಾಧ್ಯತೆ ಹೆಚ್ಚು ಅಸಂಭವವಾಗಿದೆ.
ಅಂತಿಮ ಪಂದ್ಯದಕ್ಕೆ ಭಾರತ ಸಂಭಾವ್ಯ ತಂಡ
ರೋಹಿತ್ ಶರ್ಮಾ, ರುತುರಾಜ್ ಗಾಯಕ್ವಾಡ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್ (ನಾಯಕ), ಇಶಾನ್ ಕಿಶನ್ (ವಿ.ಕೀ.), ಅಕ್ಷರ್ ಪಟೇಲ್, ನಮನ್ ಧೀರ್, ಔಕಿಬ್ ನಬಿ, ಗುರ್ನೂರ್ ಬ್ರಾರ್, ಅರ್ಷದೀಪ್ ಸಿಂಗ್, ಮೊಹಮ್ಮದ್ ಸಿರಾಜ್.