ರಾಯ್ಪುರ, ಅ.19: ಸ್ಮೃತಿ ಮಂಧಾನ ಮತ್ತು ಶಫಾಲಿ ವರ್ಮಾ ಅವರು ಮಹಿಳಾ ಟಿ20 ಅಂತರರಾಷ್ಟ್ರೀಯ (T20I) ಕ್ರಿಕೆಟ್ನಲ್ಲಿ, ಒಂದು ಕ್ಯಾಲೆಂಡರ್ ವರ್ಷದಲ್ಲಿ ಯಾವುದೇ ವಿಕೆಟ್ಗೆ 50ಕ್ಕೂ ಹೆಚ್ಚು ರನ್ಗಳ ಜೊತೆಯಾಟವನ್ನು ದಾಖಲಿಸುವ ಮೂಲಕ ವಿಶ್ವ ದಾಖಲೆಯನ್ನು ಮುರಿದರು.
ಭಾನುವಾರ ರಾಯ್ಪುರದ ಶಹೀದ್ ವೀರ್ ನಾರಾಯಣ್ ಸಿಂಗ್ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಜಿಂಬಾಬ್ವೆ ವಿರುದ್ಧ ನಡೆದ ಎರಡನೇ ಟಿ20 ಪಂದ್ಯದಲ್ಲಿ, ಇವರಿಬ್ಬರೂ 96 ರನ್ಗಳ ಜೊತೆಯಾಟವನ್ನು ನೀಡಿದರು. ಇದು ಈ ವರ್ಷದಲ್ಲಿ ಅವರ ಒಂಬತ್ತನೇ 50 ಪ್ಲಸ್ ಜೊತೆಯಾಟವಾಗಿದ್ದು, ಈ ಮೂಲಕ ಅವರು ಹಾಂಗ್ಕಾಂಗ್ನ ಯಾಸ್ಮಿನ್ ದಾಸ್ವಾನಿ ಮತ್ತು ನತಾಶಾ ಮೈಲ್ಸ್ ಅವರ ದಾಖಲೆಯನ್ನು (ಈ ವರ್ಷ ಎಂಟು ಬಾರಿ ಇಂತಹ ಜೊತೆಯಾಟ ನಡೆಸಿದ್ದರು) ಹಿಂದಿಕ್ಕಿದರು.
ಅವರ ಜೊತೆಯಾಟವು ಭಾರತಕ್ಕೆ 8.5 ಓವರ್ಗಳಲ್ಲಿ 103 ರನ್ಗಳ ಗುರಿಯನ್ನು ಬೆನ್ನಟ್ಟಿ ಒಂಬತ್ತು ವಿಕೆಟ್ಗಳ ಜಯ ಸಾಧಿಸಲು ನೆರವಾಯಿತು. ಇದರೊಂದಿಗೆ, ಸರಣಿಯಲ್ಲಿ ಇನ್ನೂ ಒಂದು ಪಂದ್ಯ ಬಾಕಿ ಇರುವಂತೆಯೇ ಭಾರತ 2-0 ಅಂತರದ ಸರಣಿ ಗೆಲುವನ್ನು ಖಚಿತಪಡಿಸಿಕೊಂಡಿತು.
ಪೂರ್ಣ ಸದಸ್ಯ ರಾಷ್ಟ್ರಗಳ ಪೈಕಿ, 2024ರಲ್ಲಿ ಏಳು ಬಾರಿ 50ಕ್ಕೂ ಹೆಚ್ಚು ರನ್ಗಳ ಜೊತೆಯಾಟವನ್ನು ದಾಖಲಿಸುವ ಮೂಲಕ ಮಂಧನಾ ಮತ್ತು ಶಫಾಲಿ ಈ ಪಟ್ಟಿಯಲ್ಲಿ ಅತ್ಯುತ್ತಮ ದಾಖಲೆಯನ್ನು ಹೊಂದಿದ್ದರು. ನ್ಯೂಜಿಲೆಂಡ್ನ ಸೂಜಿ ಬೇಟ್ಸ್-ಸೋಫಿ ಡಿವೈನ್ ಮತ್ತು ಆಸ್ಟ್ರೇಲಿಯಾದ ಬೆತ್ ಮೂನಿ-ಅಲಿಸ್ಸಾ ಹೀಲಿ ಅವರ ಜೋಡಿಗಳು ತಲಾ ಆರು ಬಾರಿ ಇಂತಹ ಜೊತೆಯಾಟಗಳನ್ನು ಹೊಂದಿವೆ.
ಈ ಪಂದ್ಯದಲ್ಲಿ, ಮಂಧನಾ ಮತ್ತು ಶಫಾಲಿ ಜೋಡಿಯು ಒಂದು ಕ್ಯಾಲೆಂಡರ್ ವರ್ಷದಲ್ಲಿ ಜೊತೆಯಾಟದಲ್ಲಿ 1,000ಕ್ಕೂ ಹೆಚ್ಚು ರನ್ಗಳನ್ನು ಗಳಿಸಿದ ಮೊದಲ ಬ್ಯಾಟಿಂಗ್ ಜೋಡಿಯಾಗಿ ಹೊರಹೊಮ್ಮಿತು. ಈ ವರ್ಷದ ಅಂಕಿಅಂಶಗಳ ಪಟ್ಟಿಯಲ್ಲಿ ಅವರು ಈಗಾಗಲೇ ಅಗ್ರಸ್ಥಾನದಲ್ಲಿದ್ದರು.
ZIMW vs INDW: ಜಿಂಬಾಬ್ವೆ ವಿರುದ್ಧ ಟೀಮ್ ಇಂಡಿಯಾ ವನಿತೆಯರಿಗೆ ಭರ್ಜರಿ ಜಯ; ಸರಣಿ ಗೆದ್ದ ಸ್ಮೃತಿ ಮಂಧನಾ ಪಡೆ
ಪಂದ್ಯದಲ್ಲಿ ಟಾಸ್ ಗೆದ್ದ ಜಿಂಬಾಬ್ವೆ ತಂಡವು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ನಿಕಿ ಪ್ರಸಾದ್ (7ಕ್ಕೆ2) ಅವರ ಚಾಣಾಕ್ಷ ಬೌಲಿಂಗ್ ಮುಂದೆ ಜಿಂಬಾಬ್ವೆ ತಂಡವು 20 ಓವರ್ಗಳಲ್ಲಿ 8 ವಿಕೆಟ್ಗಳಿಗೆ 102 ರನ್ ಗಳಿಸಿತು.
ಈ ಸಾಧಾರಣ ಗುರಿಯನ್ನು ಭಾರತ ತಂಡವು ಕೇವಲ 8.5 ಓವರ್ಗಳಲ್ಲಿ 1 ವಿಕೆಟ್ ನಷ್ಟಕ್ಕೆ 104 ರನ್ ಗಳಿಸಿ ಜಯಿಸಿತು. ಇದಕ್ಕೆ ಕಾರಣವಾಗಿದ್ದು ಶಫಾಲಿ ವರ್ಮಾ (55) ಮತ್ತು ಸ್ಮೃತಿ ಮಂದಾನ (ಔಟಾಗದೇ 47) ಅವರ ಅಬ್ಬರದ ಬ್ಯಾಟಿಂಗ್ ನಡೆಸಿದರು.
ಸಂಕ್ಷಿಪ್ತ ಸ್ಕೋರು
ಜಿಂಬಾಬ್ವೆ: 20 ಓವರ್ಗಳಲ್ಲಿ 8ಕ್ಕೆ102 (ಚಿಪೊ ಮುಗೇರಿ ತಿರಿಪಾನೊ 34, ಜೋಸೆಫೈನ್ ನಿಕೊಮೊ ಔಟಾಗದೆ 27, ಕ್ರಾಂತಿ ಗೌಡ್ 15ಕ್ಕೆ1, ನಂದನಿ ಶರ್ಮಾ 17ಕ್ಕೆ1, ನಿಕಿ ಪ್ರಸಾದ್ 7ಕ್ಕೆ2, ಶ್ರೀ ಚರಣಿ 21ಕ್ಕೆ1) ಭಾರತ: 8.5 ಓವರ್ಗಳಲ್ಲಿ 1 ವಿಕೆಟ್ಗೆ 104 (ಶಫಾಲಿ ವರ್ಮಾ 55, ಸ್ಮೃತಿ ಮಂದಾನ ಔಟಾಗದೆ 47, ಬಿಲೊವೆಡ್ ಬಿಝಾ 9ಕ್ಕೆ1).