ಕ್ರೈಸ್ಟ್ಚರ್ಚ್, ಅ.23: ಗುರುವಾರ ಹ್ಯಾಗ್ಲಿ ಓವಲ್ನಲ್ಲಿ ನಡೆದ ಸರಣಿಯ ಮೊದಲ ಟಿ 20 ಪಂದ್ಯದಲ್ಲಿ, 226 ರನ್ಗಳ ಗುರಿಯನ್ನು ಬೆನ್ನಟ್ಟಿ ನಾಲ್ಕು ವಿಕೆಟ್ ಅಂತರದ ಜಯ ಸಾಧಿಸಿದ್ದ ಭಾರತ ತಂಡ ಇದೀಗ ಅದೇ ಮೈದಾನದಲ್ಲಿ ಶನಿವಾರ ನಡೆಯಲಿರುವ ಎರಡನೇ ಪಂದ್ಯದಲ್ಲೂ ಮತ್ತೊಂದು ಭರ್ಜರಿ ಪ್ರದರ್ಶನ ನೀಡುವ ಮೂಲಕ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಲು ಎದುರು ನೋಡುತ್ತಿದೆ.
ಆದರೆ, ಎರಡನೇ ಟಿ20 ಪಂದ್ಯದಲ್ಲಿ ಭಾರತ ತಂಡಕ್ಕೆ ಇಶಾನ್ ಕಿಶನ್ ಅವರ ಸೇವೆ ಲಭ್ಯವಿರುವುದಿಲ್ಲ. ಮೊದಲ ಟಿ20 ಪಂದ್ಯದ ವೇಳೆ ಬಲ ತೊಡೆಯ ಸ್ನಾಯುವಿನಲ್ಲಿ ಉಂಟಾದ ಸಣ್ಣ ಮಟ್ಟದ ಸೆಳೆತದ ಕಾರಣದಿಂದಾಗಿ, ಕಿಶನ್ ಅವರು ಎರಡನೇ ಟಿ20 ಪಂದ್ಯದಿಂದ ಹೊರಗುಳಿದಿದ್ದಾರೆ. ಅವರ ಅನುಪಸ್ಥಿತಿಯಲ್ಲಿ, 15 ವರ್ಷದ ವೈಭವ್ ಸೂರ್ಯವಂಶಿ ಭಾರತದ ಆಡುವ ಹನ್ನೊಂದರ ಬಳಗದಲ್ಲಿಇರುವುದು ಖಚಿತ.
ಬಿಹಾರದ ಈ ಎಡಗೈ ಬ್ಯಾಟರ್, ಜುಲೈ 4 ರಂದು ಮ್ಯಾಂಚೆಸ್ಟರ್ನಲ್ಲಿ ಇಂಗ್ಲೆಂಡ್ ವಿರುದ್ಧ ಭಾರತಕ್ಕಾಗಿ ಅಂತರರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದರು. ಅವರು ಕೊನೆಯದಾಗಿ 2026ರ ಏಷ್ಯನ್ ಗೇಮ್ಸ್ನ ಪುರುಷರ ಕ್ರಿಕೆಟ್ ಸ್ಪರ್ಧೆಯ ಚಿನ್ನದ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಭಾರತ ತಂಡಕ್ಕಾಗಿ ಆಡಿದ್ದರು.
ಕೆ.ಎಲ್. ರಾಹುಲ್ ಬದಲಿಗೆ 'ಇಂಡಿಯಾ ಎ' ತಂಡಕ್ಕೆ ಆಯ್ಕೆಯಾದ ಶಿಖರ್ ಮೋಹನ್
ಒಂದು ವೇಳೆ ವೈಭವ್ ಅವರು ಆಡುವ ಹನ್ನೊಂದರ ಬಳಗದಲ್ಲಿ ಇಶಾನ್ ಅವರ ಸ್ಥಾನವನ್ನು ಪಡೆದರೆ, ಅವರು ಅಭಿಷೇಕ್ ಶರ್ಮಾ ಅವರೊಂದಿಗೆ ಇನ್ನಿಂಗ್ಸ್ ಆರಂಭಿಸಲಿದ್ದಾರೆ. ಆಗ ಸಂಜು ಸ್ಯಾಮ್ಸನ್ ಮೂರನೇ ಕ್ರಮಾಂಕದಲ್ಲಿ ಆಡಬೇಕಾದೀತು. ಉಳಿದಂತೆ ತಂಡದಲ್ಲಿ ಯಾವುದೇ ಬದಲಾವಣೆ ಕಷ್ಟ ಸಾಧ್ಯ. ದುಬಾರಿಯಾಗಿದ್ದ ಭುವನೇಶ್ವರ್ ಕುಮಾರ್, ಅಕ್ಷರ್ ಪಟೇಲ್, ಮಯಾಂಕ್ ಯಾದವ್, ಅರ್ಶ್ದೀಪ್ ಸಿಂಗ್, ನಿತೀಶ್ ಕುಮಾರ್ ರೆಡ್ಡಿ ತಮ್ಮ ಸ್ಥಾನಗಳನ್ನು ಉಳಿಸಿಕೊಳ್ಳುವುದು ಖಚಿತ.
ತಂಡದಲ್ಲಿ ಕುಲದೀಪ್ ಯಾದವ್ ಮತ್ತು ವರುಣ್ ಚಕ್ರವರ್ತಿಯಂತಹ ಆಟಗಾರರಿದ್ದರೂ, ಭಾರತವು ಯಾವುದೇ ವಿಶೇಷ ಸ್ಪಿನ್ನರ್ ಅನ್ನು ಮೊದಲ ಪಂದ್ಯದಲ್ಲಿ ಕಣಕ್ಕಿಳಿಸಲಿಲ್ಲ. ಶನಿವಾರ ನಡೆಯಲಿರುವ ಪಂದ್ಯದ ಆಡುವ ಬಳಗದಲ್ಲಿಯೂ ಇವರು ಸ್ಥಾನ ಪಡೆಯುವ ಸಾಧ್ಯತೆಗಳು ಕಡಿಮೆ ಇವೆ.
2ನೇ ಪಂದ್ಯಕ್ಕೆ ಭಾರತ ಸಂಭಾವ್ಯ ತಂಡ
ಅಭಿಷೇಕ್ ಶರ್ಮಾ, ವೈಭವ್ ಸೂರ್ಯವಂಶಿ, ಸಂಜು ಸ್ಯಾಮ್ಸನ್ (ವಿ.ಕೀ.), ಶ್ರೇಯಸ್ ಅಯ್ಯರ್ (ನಾಯಕ), ತಿಲಕ್ ವರ್ಮಾ, ನಿತೀಶ್ ಕುಮಾರ್ ರೆಡ್ಡಿ, ನಮನ್ ಧೀರ್, ಅಕ್ಷರ್ ಪಟೇಲ್, ಭುವನೇಶ್ವರ್ ಕುಮಾರ್, ಅರ್ಶ್ದೀಪ್ ಸಿಂಗ್, ಮಯಾಂಕ್ ಯಾದವ್.