ಕೋಲ್ಕತಾ: ಭಾರತ ವಿರುದ್ಧದ ಮೊದಲ ಟೆಸ್ಟ್(IND vs SA) ಪಂದ್ಯದಲ್ಲಿ ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ತಂಡದ ನಾಯಕ ಟೆಂಬ ಬವುಮಾ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ್ದಾರೆ. ಪಂದ್ಯ ಐತಿಹಾಸಿಕ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆಯುತ್ತಿದೆ. 2015 ರಿಂದೀಚೆಗೆ ಭಾರತದಲ್ಲಿ ನಡೆದ ಎಂಟು ಟೆಸ್ಟ್ ಪಂದ್ಯಗಳಲ್ಲಿ ದಕ್ಷಿಣ ಆಫ್ರಿಕಾ ಮೊದಲ ಬಾರಿಗೆ ಟಾಸ್ ಗೆದ್ದಿದು. ಕೊನೆಯ ಬಾರಿಗೆ ಹರಿಣ ಪಡೆ 2010 ರಲ್ಲಿ ಇದೇ ಸ್ಥಳದಲ್ಲಿ ಟಾಸ್ ಗೆದ್ದಿದ್ದರು.
ಟಾಸ್ ಬಳಿಕ ಮಾತನಾಡಿದ ಟೆಂಬ ಬವುಮಾ, ನಮ್ಮ ಹುಡುಗರು ಪಾಕಿಸ್ತಾನ ಸರಣಿ ಮುಗಿಸಿ ಬಂ ಜೋಶ್‌ನಲ್ಲಿದ್ದಾರೆ. ತಯಾರಿಯ ದೃಷ್ಟಿಯಿಂದ, ನಾವು ಸಾಧ್ಯವಾದಷ್ಟು ಉತ್ತಮವಾಗಿ ಮಾಡಿದ್ದೇವೆ. ಸವಾಲನ್ನು ಎದುರು ನೋಡುತ್ತಿದ್ದೇವೆ. ಪಿಚ್ ಒಣಗಿ ಕಾಣುತ್ತದೆ, ಮೊದಲ ಇನ್ನಿಂಗ್ಸ್‌ನಲ್ಲಿ ರನ್‌ಗಳು ಮುಖ್ಯ. ಕಾಗಿಸೊ ರಬಾಡ ಮೊದಲ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಅವರ ಬಲು ಕಾರ್ಬಿನ್ ಸ್ಥಾನ ಪಡೆದಿದ್ದಾರೆ ಎಂದರು.
ಟೀಮ್ ಇಂಡಿಯಾ ನಾಯಕ ಶುಭಮನ್ ಗಿಲ್ ಮಾತನಾಡಿ, ಪಿಚ್ ಉತ್ತಮ ಮೇಲ್ಮೈಯಂತೆ ಕಾಣುತ್ತಿದೆ. ವೇಗದ ಬೌಲರ್‌ಗಳಿಗೆ ಇದು ನೆರವಾಗುವಂತಿದೆ. ಈ ಟೆಸ್ಟ್ ಸರಣಿ ಬಹಳ ಮುಖ್ಯ. ಆಟ ಮುಂದುವರೆದಂತೆ ಸ್ವಲ್ಪ ತಿರುವು ಇರುತ್ತದೆ. ರೆಡ್ಡಿ ಬದಲಿಗೆ ರಿಷಭ್ ಮತ್ತು ಅಕ್ಷರ್ ತಂಡಕ್ಕೆ ಮರಳಿದ್ದಾರೆ ಎಂದರು. ನಿರೀಕ್ಷೆಯಂತೆ ಜುರೇಲ್‌ಗೆ ಸ್ಥಾನ ನೀಡಲಾಗಿದೆ.
ಇದುವರೆಗೆ ಟೆಸ್ಟ್‌ನಲ್ಲಿ ಉಭಯ ತಂಡಗಳು ಒಟ್ಟು 44 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಈ ಪೈಕಿ ಭಾರತ 16 ಪಂದ್ಯ ಗೆದ್ದರೆ, ದಕ್ಷಿಣ ಆಫ್ರಿಕಾ 18 ಪಂದ್ಯ ಜಯಿಸಿದೆ. 10 ಪಂದ್ಯಗಳು ಡ್ರಾಗೊಂಡಿದೆ. ಕೊನೆಯ ಬಾರಿಗೆ 2024ರಲ್ಲಿ ಕೇಪ್‌ಟೌನ್‌ನಲ್ಲಿ ಆಡಿದ್ದ ಪಂದ್ಯದಲ್ಲಿ ಭಾರತ 7 ವಿಕೆಟ್ ಅಂತರದ ಗೆಲುವು ಸಾಧಿಸಿತ್ತು. ಕೊನೆಯ ಐದು ಪಂದ್ಯಗಳ ಫಲಿತಾಂಶ ನೋಡುವುದಾದರೆ ಭಾರತ 2, ದಕ್ಷಿಣ ಆಫ್ರಿಕಾ 3 ಪಂದ್ಯ ಗೆದ್ದಿದೆ.
ಇದನ್ನೂ ಓದಿ IPL 2026 Mini Auction: 23 ಕೋಟಿಯ ಆಟಗಾರನನ್ನು ಕೈಬಿಡಲು ನಿರ್ಧರಿಸಿದ ಹೈದರಾಬಾದ್
ಸರಣಿ ಗೆದ್ದು ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವುದು ಭಾರತದ ಗುರಿ. ಸದ್ಯ 52 ಅಂಕಗಳೊಂದಿಗೆ ಭಾರತ ಮೂರನೇ ಸ್ಥಾನದಲ್ಲಿದೆ. ಟೆಸ್ಟ್ ಚಾಂಪಿಯನ್‌ಶಿಪ್‌ನ ಹಾಲಿ ಚಾಂಪಿಯನ್ ದಕ್ಷಿಣ ಆಫ್ರಿಕಾ, ಭಾರತದ ನೆಲದಲ್ಲಿ ಮೊದಲ ಸರಣಿ ಗೆಲುವಿನ ಗುರಿಯೊಂದಿಗೆ ಕಣಕ್ಕಿಳಿಯುತ್ತಿದೆ.
ಉಭಯ ಆಡುವ ಬಳಗ
ಭಾರತ: ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ವಾಷಿಂಗ್ಟನ್ ಸುಂದರ್, ಶುಭಮನ್ ಗಿಲ್(ನಾಯಕ), ರಿಷಭ್ ಪಂತ್(ವಿ.ಕೀ.), ರವೀಂದ್ರ ಜಡೇಜಾ, ಧ್ರುವ್ ಜುರೆಲ್, ಅಕ್ಸರ್ ಪಟೇಲ್, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.
ದಕ್ಷಿಣ ಆಫ್ರಿಕಾ: ಐಡೆನ್ ಮಾರ್ಕ್ರಾಮ್, ರಿಯಾನ್ ರಿಕೆಲ್ಟನ್, ವಿಯಾನ್ ಮುಲ್ಡರ್, ಟೆಂಬಾ ಬಾವುಮಾ(ನಾಯಕ), ಟೋನಿ ಡಿ ಝೋರ್ಜಿ, ಟ್ರಿಸ್ಟಾನ್ ಸ್ಟಬ್ಸ್, ಕೈಲ್ ವೆರ್ರಿನ್ನೆ(ವಿ.ಕೀ.), ಸೈಮನ್ ಹಾರ್ಮರ್, ಮಾರ್ಕೊ ಜಾನ್ಸೆನ್, ಕಾರ್ಬಿನ್ ಬಾಷ್, ಕೇಶವ್ ಮಹಾರಾಜ್.