ಕೊಲಂಬೊ, ಆ. 27: ಸೋನಲ್ ದಿನುಶಾ(133) ಅವರ ಅಜೇಯ ಶತಕದ ಮುಂದೆ ಮಂಕಾದ ಭಾರತ ತಂಡ ಶ್ರೀಲಂಕಾ ವಿರುದ್ಧದ 2ನೇ ಟೆಸ್ಟ್ ಪಂದ್ಯವನ್ನು ಡ್ರಾ ಮಾಡಿಕೊಂಡಿದೆ. ಆದ್ಯಾಗೂ 1-0 ಮುನ್ನಡೆಯೊಂದಿಗೆ ಸರಣಿ ಗೆಲುವು ಸಾಧಿಸಿದೆ. ಮೊದಲ ಇನಿಂಗ್ಸ್‌ನಲ್ಲಿ ಶಿಸ್ತುಬದ್ಧ ಬೌಲಿಂಗ್ ದಾಳಿ ನಡೆಸಿದ ಭಾರತೀಯ ಬೌಲರ್‌ಗಳು ಆತಿಥೇಯ ತಂಡದ ಮೇಲೆ ಫಾಲೋ-ಅನ್ ಹೇರಿ ಗೆಲ್ಲುವ ನಿರೀಕ್ಷೆಯಲ್ಲಿದ್ದರು. ಆದರೆ ತಾಳ್ಮೆಯುತ ಬ್ಯಾಟಿಂಗ್ ಮೂಲಕ ಭಾರತದ ಎಲ್ಲ ಲೆಕ್ಕಚಾರವನ್ನು ಲಂಕಾ ಬ್ಯಾಟರ್‌ಗಳು ತಲೆಕೆಳಗಾಗಿಸಿದರು.
ಭಾರತ 9 ವಿಕೆಟ್‌ಗೆ 503 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತ್ತು. ಇದಕ್ಕೆ ಉತ್ತರವಾಗಿ ಶ್ರೀಲಂಕಾ 3ನೇ ದಿನದಂತ್ಯಕ್ಕೆ 8 ವಿಕೆಟ್‌ಗೆ 265 ರನ್ ಗಳಿಸಿ, 238 ರನ್ ಹಿನ್ನಡೆಯಲ್ಲಿತ್ತು. ಪಂದ್ಯದ 4ನೇ ದಿನವಾದ ಬುಧವಾರ ಮತ್ತೆ ಬ್ಯಾಟಿಂಗ್ ಆರಂಭಿಸಿದ ಲಂಕಾ ತಂಡ 290 ರನ್‌ಗೆ ಆಲೌಟಾಯಿತು. ಸೋನಲ್ ದಿನುಶಾ(103 ರನ್) ಶತಕ ಪೂರೈಸಿದರೂ, ತಂಡವನ್ನು ಫಾಲೋ ಆನ್‌ನಿಂದ ತಪ್ಪಿಸಲು ಸಾಧ್ಯವಾಗಿರಲಿಲ್ಲ.
ಮೊದಲ ಇನ್ನಿಂಗ್ಸ್‌ನಲ್ಲಿ 213 ರನ್ ಮುನ್ನಡೆ ಪಡೆದ ಭಾರತ ತಂಡ, ಲಂಕಾ ಮೇಲೆ ಫಾಲೋ ಆನ್ ಹೇರಿ ಆತಿಥೇಯರನ್ನು ಮತ್ತೆ ಬ್ಯಾಟಿಂಗ್‌ಗೆ ಆಹ್ವಾನಿಸಿತ್ತು. ಬುಧವಾರ ದಿನದಾಟದ ಅಂತ್ಯಕ್ಕೆ 6 ವಿಕೆಟ್ ನಷ್ಟದಲ್ಲಿ 229 ರನ್ ಗಳಿಸಿ 16 ರನ್ ಮುನ್ನಡೆ ಗಳಿಸಿದ್ದ ಶ್ರೀಲಂಕಾ ತಂಡ ಅಂತಿಮ ದಿನವಾದ ಗುರುವಾರ ಬೇಗನೆ ಆಲೌಟ್ ಆಗಬಹುದೆಂದು ಭಾರತ ನಿರೀಕ್ಷೆ ಮಾಡಿತ್ತು.
ಗುರುವಾರದ ಕ್ಲೈಮ್ಯಾಕ್ಸ್ ಮಾತ್ರ ಬಾಕಿ ಇತ್ತು. ಆದರೆ ಈ ಎಲ್ಲ ನಿರೀಕ್ಷೆಯನ್ನು ಸೋನಲ್ ದಿನುಶಾ ಹುಸಿ ಮಾಡಿದರು. ಕ್ರೀಸ್‌ನಲ್ಲಿ ಬೇರೂರಿ ನಿಂತ ಅವರು ಸ್ಪಿನ್, ವೇಗದ ಬೌಲಿಂಗ್‌ಗೆ ತಡೆಯೊಡ್ಡಿ ಅಜೇಯ ಶತಕ ಬಾರಿಸಿ ತಂಡವನ್ನು ಸೋಲಿನಿಂದ ಪಾರು ಮಾಡಿದರು. 264 ಎಸೆತ ಎದುರಿಸಿದ ದಿನುಶಾ 133ರನ್ ಗಳಿಸಿದರು. ಪಂದ್ಯ ಗೆಲ್ಲಲು ಸಾಧ್ಯವಿಲ್ಲ ಎಂದು ತಿಳಿದ ಭಾರತ ದಿನದಾಟ ಅಂತ್ಯಕ್ಕೂ ಮುನ್ನವೇ ಹಸ್ತಲಾಘವ ಮಾಡುವ ಮೂಲಕ ಪಂದ್ಯವನ್ನು ಡ್ರಾ ಮಾಡಿಕೊಂಡಿತು. ಶ್ರೀಲಂಕಾ 9 ವಿಕೆಟ್‌ಗೆ 429 ರನ್ ಬಾರಿಸಿತು.
ಭಾರತ vs ಪನಾಮ ಸ್ನೇಹಪರ ಪಂದ್ಯಕ್ಕೆ ಶ್ರೀ ಕಂಠೀರವ ಸ್ಟೇಡಿಯಂ ಆತಿಥ್ಯ
ದಿನುಶಾ ಅವರಿಗೆ ಕೇಶರ ನುವಂಥ ಉತ್ತಮ ಸಾಥ್ ನೀಡಿದರು. ಬರೋಬ್ಬರಿ 150 ಎಸೆತ ಎದುರಿಸಿ ನಿಂತು 46 ರನ್ ಬಾರಿಸಿದರು. ಮತ್ತೊಂದೆಡೆ ಲಹಿರು ಕುಮಾರ 12 ರನ್ ಬಾರಿಸಿದರೂ 90 ಎಸೆತ ಎದುರಿಸಿ ನಿಂತು ಸಮಯ ವ್ಯರ್ಥ ಮಾಡುವ ಮೂಲಕ ತಂಡಕ್ಕೆ ನೆರವಾದರು.
ತಂಡದ ಮೊತ್ತ 5 ರನ್ ಆಗುವಷ್ಟರಲ್ಲೇ ಸಿರಾಜ್ ಆಘಾತ ನೀಡಿದರು. ಬಳಿಕ ಲಂಕಾ ಚೇತರಿಕೆಯ ಆಟವಾಡಿತು. ಕಮಿಲ್ ಮಿಶಾರಾ(32) ಹಾಗೂ ಪಸಿಂದು ಸೂರ್ಯಬಂಡಾರ 2ನೇ ವಿಕೆಟ್‌ಗೆ 58 ರನ್ ಜೊತೆಯಾಟವಾಡಿದರು. 3ನೇ ವಿಕೆಟ್‌ಗೆ ಕಮಿಂಡು ಮೆಂಡಿಸ್ ಜೊತೆಗೂಡಿ ಪಸಿಂದು 115 ರನ್ ಸೇರಿಸಿದರು. ಭಾರತ ಪರ ಮಾನವ್ ಸುತಾರ್ ಮತ್ತು ರವೀಂದ್ರ ಜಡೇಜಾ ತಲಾ ಮೂರು ವಿಕೆಟ್ ಕೆಡವಿದರು.
ದಾಖಲೆ ಬರೆದ ಸೋನಲ್ ದಿನುಶಾ
ಮೊದಲ ಇನಿಂಗ್ಸ್‌ನಲ್ಲಿಯೂ ಶತಕ ಬಾರಿಸಿದ್ದ ಯುವ ಬ್ಯಾಟರ್ ಸೋನಲ್ ದಿನುಶಾ ಎರಡನೇ ಇನಿಂಗ್ಸ್‌ನಲ್ಲಿಯೂ ಶತಕ ಬಾರಿಸಿ ಹಲವು ದಾಖಲೆ ನಿರ್ಮಿಸಿದರು. ಟೆಸ್ಟ್ ಪಂದ್ಯದಲ್ಲಿ 6ನೇ ಅಥವಾ ಅದಕ್ಕಿಂತ ಕಡಿಮೆ ಕ್ರಮಾಂಕದಿಂದ ಅವಳಿ ಶತಕ ಬಾರಿಸಿದ ವಿಶ್ವದ 5ನೇ ಹಾಗೂ ಶ್ರೀಲಂಕಾದ ನಾಲ್ಕನೇ ಬ್ಯಾಟರ್ ಎನಿಸಿದರು.
ಸಂಕ್ಷಿಪ್ತ ಸ್ಕೋರ್
ಭಾರತ 503/9 ಡಿಕ್ಲೇರ್, ಶ್ರೀಲಂಕಾ ಮೊದಲ ಇನ್ನಿಂಗ್ಸ್ 290/10 (ಸೋನಲ್ 103, ಪ್ರಸಿದ್ಧ್ 3-52, ಮಾನವ್ 3-85) ಮತ್ತು ಎರಡನೇ ಇನ್ನಿಂಗ್ಸ್ 429 /6 (ಸೋನಲ್ ದಿನುಶಾ ಔಟಾಗದೆ 133, ಪಸಿಂದು 92, ಕಮಿಂಡು 55, ಕೇಶರ ನುವಂಥ 46, ಕಮಿಲ್ 32, ಮಾನವ್ ಸುತಾರ್ 3-121,ರವೀಂದ್ರ ಜಡೇಜಾ 3- 94)