ನವದೆಹಲಿ, ಫೆ.26: ಹಾಲಿ ಆವೃತ್ತಿಯ ಟಿ20 ವಿಶ್ವಕಪ್ ಟೂರ್ನಿ(T20 World Cup 2026) ಅಂತಿಮ ಹಂತಕ್ಕೆ ಬರುತ್ತಿದ್ದಂತೆ ಸೆಮಿಫೈನಲ್ ಲೆಕ್ಕಾಚಾರ ಚುರುಕುಗೊಂಡಿದೆ. ಬುಧವಾರ ರಾತ್ರಿ ಕೊಲಂಬೊದ ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ ಸೂಪರ್-8 ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ 61 ರನ್‌ಗಳ ಹೀನಾಯ ಸೋಲು ಸೋಲು ಕಂಡ ಶ್ರೀಲಂಕಾ ಟೂರ್ನಿಯಿಂದ ಹೊರಬಿದ್ದಿತು. ಇದೀಗ ನ್ಯೂಜಿಲ್ಯಾಂಡ್ ಮತ್ತು ಪಾಕಿಸ್ತಾನ ನಡುವೆ ಸೆಮಿ ಪ್ರವೇಶದ ಪೈಪೋಟಿ ಏರ್ಪಟ್ಟಿದೆ.
ನ್ಯೂಜಿಲೆಂಡ್ ಈಗ ಮೂರು ಅಂಕಗಳು ಮತ್ತು +3.050 ರ ಉತ್ತಮ ರನ್ ರೇಟ್‌ನೊಂದಿಗೆ ಗುಂಪಿನಲ್ಲಿ ಎರಡನೇ ಸ್ಥಾನದಲ್ಲಿದೆ. ಕಿವೀಸ್‌ಗೆ ಸೆಮಿ ಅರ್ಹತೆ ಪಡೆಯಲು ಶುಕ್ರವಾರ ಕೊಲಂಬೊದಲ್ಲಿ ನಡೆಯುವ ತನ್ನ ಕೊನೆಯ ಸೂಪರ್ 8 ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಸೋಲಿಸಿದರೆ, ಅದು ಸೆಮಿಫೈನಲ್‌ಗೆ ಅರ್ಹತೆ ಪಡೆದು ಗುಂಪಿನಲ್ಲಿ ಅಗ್ರಸ್ಥಾನ ಪಡೆಯುತ್ತದೆ. ಇಂಗ್ಲೆಂಡ್‌ಗೆ ಸೋತರೂ ಚಿಂತೆಯಿಲ್ಲ. ಅದು ಈಗಾಗಲೇ ಸೆಮಿಗೆ ಲಗ್ಗೆಯಿಟ್ಟಿದೆ.
ಪಾಕ್ ಲೆಕ್ಕಾಚಾರ
ಪಾಕ್ ತಂಡದ ಸೆಮಿ ಭವಿಷ್ಯ ಇಂಗ್ಲೆಂಡ್ ತಂಡದ ಮೇಲಿದೆ. ನ್ಯೂಜಿಲೆಂಡ್ ತಂಡ ಅಂತಿಮ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಗೆದ್ದರೆ ಪಾಕಿಸ್ತಾನ ಹೊರಬೀಳಲಿದೆ. ಇಂಗ್ಲೆಂಡ್ ತಂಡ ಗೆದ್ದರಷ್ಟೇ ಪಾಕ್ ಒಂದು ಅವಕಾಶ ಸಿಗಲಿದೆ. ಇಲ್ಲೂ ಒಂದು ಲೆಕ್ಕಾಚಾರವಿದೆ. ಪಾಕ್ ತನ್ನ ಕೊನೆಯ ಪಂದ್ಯದಲ್ಲಿ ಲಂಕಾವನ್ನು ದೊಡ್ಡ ಅಂತರದಲ್ಲಿ ಸೋಲಿಸಿ, ನೆಟ್ ರನ್‌ರೇಟ್‌ನಲ್ಲಿ ಕಿವೀಸ್ ತಂಡವನ್ನು ಹಿಂದಿಕ್ಕ ಬೇಕು. ಆಗ ಮಾತ್ರ ಪಾಕ್ ಸೆಮಿ ಅರ್ಹತೆ ಪಡೆಯಲಿದೆ. ನ್ಯೂಜಿಲೆಂ ತಂಡ ಇಂಗ್ಲೆಂಡ್ ವಿರುದ್ಧ 20 ರನ್ ಅಂತರದಿಂದ ಸೋತೆರ ಪಾಕಿಸ್ತಾನ 50 ರನ್ ಅಂತರದಲ್ಲಿ ಗೆಲ್ಲಬೇಕು. ಆತಿಥೇಯ ಶ್ರೀಲಂಕಾಕ್ಕೆ ಇನ್ನೊಂದು ಪಂದ್ಯ ಉಳಿದಿದ್ದರೂ, ಸತತ ಎರಡನೇ ಸೋಲಿನಿಂದಾಗಿ ನಾಲ್ಕರ ಘಟ್ಟದ ರೇಸ್‌ನಿಂದ ಹೊರಬಿತ್ತು.
NZ vs SL: ಶ್ರೀಲಂಕಾ ಟಿ20 ವಿಶ್ವಕಪ್‌ನಿಂದ ಔಟ್, ನ್ಯೂಜಿಲೆಂಡ್‌ಗೆ ಸಂಘಟಿತ ಹೋರಾಟದ ಜಯ!
ಬುಧವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ನ್ಯೂಜಿಲೆಂಡ್ 7 ವಿಕೆಟ್‌ಗೆ 168 ರನ್ ಬಾರಿಸಿತು. ಗುರಿ ಬೆನ್ನಟ್ಟಿದ ಶ್ರೀಲಂಕಾ 107 ರನ್‌ಗೆ ಸರ್ವಪತನ ಕಂಡು ಸೋಲಿಗೆ ತುತ್ತಾಯಿತು. ಚೇಸಿಂಗ್ ವೇಳೆ ಲಂಕಾ ತಂಡ ಉತ್ತಮ ಆರಂಭವನ್ನೇ ಪಡೆಯಲಿಲ್ಲ. ಮ್ಯಾಟ್ ಹೆನ್ರಿ (2–1–3–2), ಇನಿಂಗ್ಸ್‌ನ ಮೊದಲ ಎಸೆತದಲ್ಲೇ ಪಥುಮ್ ನಿಸಾಂಕ ವಿಕೆಟ್ ಪಡೆದರು. ಎರಡನೇ ಓವರಿನಲ್ಲಿ ಚರಿತ್ ಅಸಲಂಕಾ (5) ಅವರ ವಿಕೆಟ್ ಸಹ ಪಡೆದರು. ಹೀಗಾಗಿ ಲಂಕಾ ತೆವಳುತ್ತಾ ಸಾಗಿತು. ಪವರ್‌ಪ್ಲೇ ಅವಧಿಯಲ್ಲಿ 2 ವಿಕೆಟ್‌ಗೆ 20 ರನ್ ಗಳಿಸಿದ್ದ ಆತಿಥೇಯರು ಯಾವ ಹಂತದಲ್ಲೂ ಹೋರಾಟ ತೋರಲಿಲ್ಲ. ನ್ಯೂಜಿಲೆಂಡ್ ಪರ ಮಿಚೆಲ್ ಸ್ಯಾಂಟ್ನರ್ (47, 26 ಎ) ಮತ್ತು ಕೋಲ್ ಮೆಕ್‌ಕೊಂಚಿ (ಅಜೇಯ 31, 23ಎ) ಅವರ ಅಮೋಘ ಆಡವಾಡಿದರು.
ಸಂಕ್ಷಿಪ್ತ ಸ್ಕೋರ್
ನ್ಯೂಜಿಲೆಂಡ್: 20 ಓವರುಗಳಲ್ಲಿ 7 ವಿಕೆಟ್‌ಗೆ 168 (ಫಿನ್ ಅಲೆನ್ 23, ರಚಿನ್ ರವೀಂದ್ರ 32, ಮಿಚೆಲ್ ಸ್ಯಾಂಟ್ನರ್ 47, ಕೋಲ್ ಮೆಕ್‌ಕೊಂಚಿ 31; ಮಹೀಷ ತೀಕ್ಷಣ 30ಕ್ಕೆ3, ದುಷ್ಮಂತ ಚಮೀರ 38ಕ್ಕೆ3); ಶ್ರೀಲಂಕಾ: 20 ಓವರುಗಳಲ್ಲಿ 8 ವಿಕೆಟ್‌ಗೆ 107 (ಕಮಿಂದು ಮೆಂಡಿಸ್ 31, ದುನಿತ್ ವೆಲ್ಲಾಳಗೆ 29; ಮ್ಯಾಟ್ ಹೆನ್ರಿ 3ಕ್ಕೆ2, ರಚಿನ್ ರವೀಂದ್ರ 27ಕ್ಕೆ4).