ನವದೆಹಲಿ, ಫೆ. 24: ವಿಶ್ವದ ನಂ. 1 ಟಿ20ಐ ತಂಡ ಭಾರತ, ಐಸಿಸಿ ಪುರುಷರ ಟಿ20 ವಿಶ್ವಕಪ್ 2026(T20 World Cup 2026) ರ ಸೂಪರ್ 8 ಹಂತದ ಉಳಿದ ಎರಡು ಪಂದ್ಯಗಳಲ್ಲಿ ಜಿಂಬಾಬ್ವೆ ಮತ್ತು ವೆಸ್ಟ್ ಇಂಡೀಸ್ ತಂಡಗಳನ್ನು ಎದುರಿಸಲಿದೆ. ಭಾರತ ಮತ್ತು ಜಿಂಬಾಬ್ವೆ ನಡುವಿನ ಪಂದ್ಯ ಗುರುವಾರ (ಫೆಬ್ರವರಿ 26) ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಭಾನುವಾರ (ಮಾರ್ಚ್ 1) ಭಾರತ-ವೆಸ್ಟ್ ಇಂಡೀಸ್ ಪಂದ್ಯದ ಆತಿಥ್ಯವನ್ನು ಈಡನ್ ಗಾರ್ಡನ್ಸ್ ವಹಿಸಲಿದೆ.
ಐಸಿಸಿ ಪುರುಷರ ಟಿ20 ವಿಶ್ವಕಪ್ 2026 ರ ತನ್ನ ಮೊದಲ ಸೂಪರ್ 8 ರ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 76 ರನ್‌ಗಳ ಹೀನಾಯ ಸೋಲನ್ನು ಅನುಭವಿಸಿದ ಭಾರತ ತಂಡಕ್ಕೆ ಜಿಂಬಾಬ್ವೆ ಮತ್ತು ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯಗಳು ಗೆಲ್ಲಲೇಬೇಕಾದ ಅನಿವಾರ್ಯತೆಯಲ್ಲಿದೆ. ಇದಕ್ಕೂ ಮುನ್ನ ಜಿಂಬಾಬ್ವೆ ಮತ್ತು ವಿಂಡೀಸ್ ವಿರುದ್ಧ ಭಾರತದ ಟಿ20 ದಾಖಲೆ ಹೇಗಿದೆ ಎಂಬ ವರದಿ ಇಲ್ಲಿದೆ.
ಜಿಂಬಾಬ್ವೆ ವಿರುದ್ಧ...
ಭಾರತ ತಂಡವು 20 ಓವರ್‌ಗಳ ಮಾದರಿಯ ಕ್ರಿಕೆಟ್‌ನಲ್ಲಿ ಇದುವರೆಗೆ 13 ಬಾರಿ ಜಿಂಬಾಬ್ವೆಯನ್ನು ಎದುರಿಸಿದ್ದು, 10 ಬಾರಿ ಗೆಲುವು ಸಾಧಿಸಿದೆ. ಭಾರತ ತಂಡವು ಜುಲೈ 14, 2024 ರಂದು ಹರಾರೆಯಲ್ಲಿ ಜಿಂಬಾಬ್ವೆ ವಿರುದ್ಧ ಕೊನೆಯ ಬಾರಿಗೆ T20I ಪಂದ್ಯವನ್ನು ಆಡಿತ್ತು. 42 ರನ್‌ಗಳ ಜಯ ಸಾಧಿಸಿತ್ತು. ಇನ್ನು ಟಿ20 ವಿಶ್ವಕಪ್‌ನಲ್ಲಿ ಭಾರತ ಇದುವರೆಗೆ ಒಮ್ಮೆ ಮಾತ್ರ ಜಿಂಬಾಬ್ವೆಯನ್ನು ಎದುರಿಸಿದೆ. ನವೆಂಬರ್ 6, 2022 ರಂದು ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ರೋಹಿತ್ ಶರ್ಮಾ ನೇತೃತ್ವದ ತಂಡ ಜಿಂಬಾಬ್ವೆಯನ್ನು 71 ರನ್‌ಗಳಿಂದ ಸೋಲಿಸಿತ್ತು.
ವಿಂಡೀಸ್ ವಿರುದ್ಧ...
ಭಾರತ ಇದುವರೆಗೆ ವೆಸ್ಟ್ ಇಂಡೀಸ್ ವಿರುದ್ಧ 30 ಟಿ20 ಪಂದ್ಯಗಳನ್ನು ಎದುರಿಸಿದ್ದು, 19 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಆಗಸ್ಟ್ 13, 2023 ರಂದು ಲಾಡರ್‌ಹಿಲ್‌ನಲ್ಲಿ ಉಭಯ ತಂಡಗಳ ನಡುವೆ ನಡೆದ ಕೊನೆಯ ಟಿ20ಐ ಪಂದ್ಯದಲ್ಲಿ, ಭಾರತ 8 ವಿಕೆಟ್‌ಗಳಿಂದ ಹೀನಾಯ ಸೋಲನ್ನು ಅನುಭವಿಸಿತ್ತು. ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡವು ವೆಸ್ಟ್ ಇಂಡೀಸ್ ವಿರುದ್ಧ ನಾಲ್ಕು ಬಾರಿ ಮುಖಾಮುಖಿಯಾಗಿದೆ. ಆದರೆ ಒಂದು ಪಂದ್ಯದಲ್ಲಿ ಮಾತ್ರ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದೆ.
ವಿಂಡೀಸ್ ಭರ್ಜರಿ ಗೆಲುವಿನ ಬಳಿಕ ಭಾರತದ ಸೆಮಿಫೈನಲ್ ಲೆಕ್ಕಾಚಾರ ಹೇಗಿದೆ?
ಎರಡು ಬಾರಿಯ ಚಾಂಪಿಯನ್‌ಗಳಾದ ಭಾರತ ತಂಡವು ಮಾರ್ಚ್ 23, 2014 ರಂದು ಮಿರ್ಪುರದಲ್ಲಿ ನಡೆದ ಪಂದ್ಯದಲ್ಲಿ ಗೆದ್ದಿತು. ಆ ಪಂದ್ಯದಲ್ಲಿ ಭಾರತ 7 ವಿಕೆಟ್‌ಗಳಿಂದ ಗೆದ್ದಿತ್ತು. ಆದರೆ ಲಾರ್ಡ್ಸ್, ಬ್ರಿಡ್ಜ್‌ಟೌನ್ ಮತ್ತು ಮುಂಬೈ (ವಾಂಖೆಡೆ ಕ್ರೀಡಾಂಗಣ)ದಲ್ಲಿ ನಡೆದ ಇತರ ಮೂರು ಪಂದ್ಯಗಳಲ್ಲಿ ಭಾರತ ಕ್ರಮವಾಗಿ 7 ವಿಕೆಟ್‌ಗಳು, 14 ರನ್‌ಗಳು ಮತ್ತು 7 ವಿಕೆಟ್‌ಗಳಿಂದ ಸೋತಿತ್ತು.