ಬೆಂಗಳೂರು: ಇಂಡಿಯಾ ಬಾಸ್ಕೆಟ್ಬಾಲ್ ಲೀಗ್ನ (IBL) ಪ್ರತಿಭೆ ಗುರುತಿಸುವಿಕೆ ಮತ್ತು ಅಭಿವೃದ್ಧಿ ಟೂರ್ನಿಯಾದ ಐಬಿಎಲ್ ಒರಿಜಿನ್ಸ್ನ ಮೊದಲ ಆವೃತ್ತಿ, ಬೆಂಗಳೂರಿನ IBL ಹೈ-ಪರ್ಫಾರ್ಮೆನ್ಸ್ ಸೆಂಟರ್ (HPC)ನಲ್ಲಿ ರೋಚಕ ಫೈನಲ್ ಪಂದ್ಯದೊಂದಿಗೆ ಮುಕ್ತಾಯಗೊಂಡಿತು. ಟೀಮ್ ರೆಡ್, ಟೀಮ್ ವೈಟ್ ವಿರುದ್ಧ 81-79 ಅಂತರದಲ್ಲಿ ಓವರ್ಟೈಮ್ ಗೆಲುವು ಸಾಧಿಸಿ, ಐಬಿಎಲ್ ಒರಿಜಿನ್ಸ್ನ ಮೊದಲ ಚಾಂಪಿಯನ್ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.
ಕಳೆದ ಒಂದು ತಿಂಗಳ ಅವಧಿಯಲ್ಲಿ ನಡೆದ ಐಬಿಎಲ್ ಒರಿಜಿನ್ಸ್ನಲ್ಲಿ ಐದು ಪುರುಷರ ಮತ್ತು ನಾಲ್ಕು ಮಹಿಳಾ ತಂಡಗಳು ಭಾಗವಹಿಸಿದ್ದು, ಭಾರತದ ಅತ್ಯಂತ ಪ್ರತಿಭಾವಂತ ಬಾಸ್ಕೆಟ್ಬಾಲ್ ಆಟಗಾರರಿಗೆ ತೀವ್ರ ಸ್ಪರ್ಧಾತ್ಮಕ ವಾತಾವರಣದಲ್ಲಿ ತಮ್ಮ ಸಾಮರ್ಥ್ಯ ಪ್ರದರ್ಶಿಸಲು ವೇದಿಕೆ ಕಲ್ಪಿಸಿತು. ಟೂರ್ನಿಯ ಜೊತೆಗೆ, ಆಟಗಾರರು HPCಯಲ್ಲಿ ವರ್ಷಪೂರ್ತಿ ಪಡೆಯುತ್ತಿರುವ ತರಬೇತಿಯನ್ನು ಮತ್ತಷ್ಟು ಬಲಪಡಿಸುವಂತಹ ಕೇಂದ್ರೀಕೃತ ತರಬೇತಿಯನ್ನೂ ಪಡೆದರು. ಟೂರ್ನಿಯಲ್ಲಿ ಒಟ್ಟಾರೆ ₹50 ಲಕ್ಷಕ್ಕೂ ಅಧಿಕ ಬಹುಮಾನ ಮೊತ್ತವಿದ್ದು, ಆಟಗಾರರ ಪ್ರದರ್ಶನ ವನ್ನು IBL ಕೋಚ್ಗಳು, ತಾಂತ್ರಿಕ ಸಿಬ್ಬಂದಿ ಮತ್ತು ಲೀಗ್ ಅಧಿಕಾರಿಗಳು ನಿರಂತರವಾಗಿ ಗಮನಿಸಿದರು.
ಇದನ್ನೂ ಓದಿ: IND-A vs SL-A:ಮತ್ತೊಮ್ಮೆ ದೊಡ್ಡ ಮೊತ್ತವನ್ನು ಕಲೆ ಹಾಕುವಲ್ಲಿ ಎಡವಿದ ವೈಭವ್ ಸೂರ್ಯವಂಶಿ!
IBL ಹೈ-ಪರ್ಫಾರ್ಮೆನ್ಸ್ ಸೆಂಟರ್ ಈ ಕಾರ್ಯಕ್ರಮದ ಪ್ರಮುಖ ಆಧಾರವಾಗಿದ್ದು, ವಿಶ್ವದ ಪ್ರಮುಖ ಬಾಸ್ಕೆಟ್ಬಾಲ್ ಲೀಗ್ಗಳಿಗೆ ಸಮಾನವಾದ ವೃತ್ತಿಪರ ತರಬೇತಿ ವಾತಾವರಣವನ್ನು ಆಟಗಾರರಿಗೆ ಒದಗಿಸಿತು. ರಚನಾತ್ಮಕ ಕೋಚಿಂಗ್, ಶಕ್ತಿ ಮತ್ತು ಕಂಡೀಷನಿಂಗ್, ಪ್ರದರ್ಶನ ವಿಶ್ಲೇಷಣೆ ಹಾಗೂ ಕ್ರೀಡಾ ವಿಜ್ಞಾನ ಬೆಂಬಲದೊಂದಿಗೆ ನಿರಂತರ ಸ್ಪರ್ಧಾತ್ಮಕ ಪಂದ್ಯಗಳಿಗೆ ಅವಕಾಶ ಕಲ್ಪಿಸಲಾ ಯಿತು. ಈ ಮೂಲಕ HPC ಮತ್ತು IBL ಒರಿಜಿನ್ಸ್, ಆಟಗಾರರ ಅಭಿವೃದ್ಧಿಯೇ IBLನ ಪ್ರಮುಖ ಆದ್ಯತೆ ಎಂಬುದನ್ನು ಮತ್ತೊಮ್ಮೆ ದೃಢಪಡಿಸಿವೆ.
ACG Sportsನ ಮಾಲೀಕ ಮತ್ತು ವ್ಯವಸ್ಥಾಪಕ ನಿರ್ದೇಶಕ ಕರಣ್ ಸಿಂಗ್ ಮಾತನಾಡಿ, “ಭಾರತದಲ್ಲಿ ಬಾಸ್ಕೆಟ್ಬಾಲ್ ಅನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವ ನಮ್ಮ ಪ್ರಯತ್ನದಲ್ಲಿ IBL ಒರಿಜಿನ್ಸ್ ಮಹತ್ವದ ಮೈಲಿಗಲ್ಲಾಗಿದೆ. ದೇಶದಾದ್ಯಂತ ಇರುವ ಅದ್ಭುತ ಪ್ರತಿಭೆಗಳು ಕೋರ್ಟ್ನಲ್ಲಿ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸುವುದನ್ನು ನಾವು ಕಂಡಿದ್ದೇವೆ. ವಿಶ್ವಮಟ್ಟದ ತರಬೇತಿ, ಸೌಲಭ್ಯಗಳು ಮತ್ತು ಅವಕಾಶಗಳು ಆಟಗಾರರಿಗೆ ದೊರೆತಾಗ ಏನು ಸಾಧಿಸಬಹುದು ಎಂಬುದಕ್ಕೆ ಇದು ಸಾಕ್ಷಿಯಾಗಿದೆ. ಚಾಂಪಿಯನ್ಗಳು, ಫೈನಲಿಸ್ಟ್ಗಳು ಹಾಗೂ ಈ ಪ್ರಯಾಣದ ಭಾಗವಾಗಿದ್ದ ಪ್ರತಿಯೊಬ್ಬ ಆಟಗಾರ ಮತ್ತು ಕೋಚಿಂಗ್ ಸಿಬ್ಬಂದಿಗೆ ಅಭಿನಂದನೆಗಳು. ಅವರು ಭಾರತೀಯ ಬಾಸ್ಕೆಟ್ಬಾಲ್ನ ಭವಿಷ್ಯಕ್ಕೆ ಬಲವಾದ ಅಡಿಪಾಯ ಹಾಕಿದ್ದಾರೆ,” ಎಂದರು.
ಇಂಡಿಯಾ ಬಾಸ್ಕೆಟ್ಬಾಲ್ ಲೀಗ್ನ CEO ಜೇಕ್ ಲಷ್ ಮೆಕ್ಕ್ರಮ್ ಮಾತನಾಡಿ, “ಅದ್ಭುತ ಫೈನಲ್ನೊಂದಿಗೆ ಇದು ನಿಜಕ್ಕೂ ರೋಚಕ ಟೂರ್ನಿಯಾಗಿತ್ತು. ಭಾರತದ ಬಾಸ್ಕೆಟ್ಬಾಲ್ ಪ್ರತಿಭೆಯ ಆಳ ಮತ್ತು ಸಾಮರ್ಥ್ಯವನ್ನು ಈ ಪಂದ್ಯಾವಳಿ ಅತ್ಯಂತ ಪರಿಣಾಮಕಾರಿಯಾಗಿ ಪ್ರದರ್ಶಿಸಿದೆ. ಆಟಗಾರರ ಪ್ರದರ್ಶನ ಅತ್ಯುತ್ತಮವಾಗಿತ್ತು, ಅಭಿಮಾನಿಗಳು ಅದ್ಭುತ ಉತ್ಸಾಹ ತುಂಬಿದರು ಮತ್ತು ನಮ್ಮ ಹೈ-ಪರ್ಫಾರ್ಮೆನ್ಸ್ ಸೆಂಟರ್ನಲ್ಲಿ ಈ ಎಲ್ಲವೂ ಸಾಕಾರಗೊಂಡಿರುವುದನ್ನು ನೋಡುವುದು ವಿಶೇಷ ಅನುಭವ. ಇದು ಕೇವಲ ಆರಂಭ. 2027ರ ಆರಂಭದಲ್ಲಿ ನಡೆಯಲಿರುವ IBL ಸೀಸನ್ 1ರತ್ತ ನಾವು ಸಾಗುತ್ತಿರುವ ಈ ಪ್ರಯಾಣವನ್ನು ಮುಂದುವರಿಸಲು ನಾನು ಉತ್ಸುಕ ನಾಗಿದ್ದೇನೆ,” ಎಂದರು.
ಐಬಿಎಲ್ ಒರಿಜಿನ್ಸ್ನ ಸಮಾರೋಪವು ಇಂಡಿಯಾ ಬಾಸ್ಕೆಟ್ಬಾಲ್ ಲೀಗ್ ಸೀಸನ್ 1ರತ್ತ ಸಾಗುವ ಮತ್ತೊಂದು ಮಹತ್ವದ ಹೆಜ್ಜೆಯಾಗಿದ್ದು, ಮುಂಬರುವ ಲೀಗ್ನ ಭವಿಷ್ಯದ ತಾರೆಗಳಾಗಲಿರುವ ಆಟಗಾರರ ಸಾಮರ್ಥ್ಯದ ಮೊದಲ ನೋಟವನ್ನು ನೀಡಿದೆ.