ಚಂಢೀಗಢ: ರಾಷ್ಟ್ರಮಟ್ಟದ ಕಬಡ್ಡಿ ಆಟಗಾರನೋರ್ವನನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ ಘಟನೆ ಪಂಜಾಬ್‌ನ ಲೂಧಿಯಾನದಲ್ಲಿ ನಡೆದಿದೆ. ಮೃತ ಆಟಗಾರನನ್ನು 26 ವರ್ಷದ ತೇಜ್‌ಪಾಲ್ ಸಿಂಗ್(Tejpal Singh) ಎಂದು ಗುರುತಿಸಲಾಗಿದೆ. ಶುಕ್ರವಾರ ಹಾಡಹಗಲೇ ಈ ಘಟನೆ ನಡೆದಿತ್ತು. ತೇಜ್‌ಪಾಲ್ ಸಿಂಗ್ ಜಗ್ರಾಂವ್ ಬಳಿಯ ಗಿಡ್ಡರ್‌ವಿಂಡಿ ಗ್ರಾಮದವರಾಗಿದ್ದು, ರಾಷ್ಟ್ರೀಯ ಮಟ್ಟದ ಕಬಡ್ಡಿ ಆಟಗಾರರಾಗಿದ್ದರು. ಹರಿ ಸಿಂಗ್ ಆಸ್ಪತ್ರೆ ರಸ್ತೆಯಲ್ಲಿ ಇಬ್ಬರು ಸ್ನೇಹಿತರೊಂದಿಗೆ ನಡೆದುಕೊಂಡು ಹೋಗುತ್ತಿದ್ದಾಗ ಈ ಘಟನೆ ನಡೆದಿದೆ.
ಸ್ನೇಹಿತರ ಜೊತೆಗೆ ನಡೆದುಕೊಂಡು ಹೋಗುತ್ತಿದ್ದಾಗ ಇವರನ್ನು ಅಡ್ಡಗಟ್ಟಿದ್ದ ಗುಂಪೊಂದು ದೊಣ್ಣೆಯಿಂದ ಥಳಿಸಿದ್ದಾರೆ. ನಂತರ ಆ ದುಷ್ಕರ್ಮಿಗಳ ತಂಡದಲ್ಲಿದ್ದ ಓರ್ವ ತನ್ನ ಬಳಿ ಇದ್ದ ರಿವಾಲ್ವರ್‌ನಿಂದ ತೇಜ್‌ಪಾಲ್ ಎದೆಗೆ ಗುಂಡಿಕ್ಕಿದ್ದು, ಬಳಿಕ ಅಲ್ಲಿಂದ ಪರಾರಿಯಾಗಿದ್ದಾರೆ. ಕೂಡಲೇ ತೇಜ್‌ಪಾಲ್ ಅವರ ಸ್ನೇಹಿತರು ಅವರನ್ನು ಸಮೀಪದ ಆಸ್ಪತ್ರೆಗೆ ಕರೆತಂದಿದ್ದಾರೆ. ಆದರೆ ಅಷ್ಟರಲ್ಲೇ ಅವರು ಪ್ರಾಣಬಿಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಹತ್ಯೆಗೆ ಹಳೆಯ ದ್ವೇಷವೇ ಕಾರಣ
ತೇಜ್‌ಪಾಲ್ ಸಿಂಗ್ ಹತ್ಯೆಗೆ ಹಳೆಯ ದ್ವೇಷವೇ ಕಾರಣ ಎಂದು ಹೇಳಲಾಗಿದೆ. ಕೃತ್ಯವೆಸಗಿದ ಆರೋಪಿಗಳನ್ನು ಗುರುತಿಸಲಾಗಿದ್ದು, ಅವರನ್ನು ಬಂಧಿಸಲು ವಿಶೇಷ ತಂಡ ರಚಿಸಲಾಗಿದೆ ಎಂದು ಎಸ್‌ಎಸ್‌ಪಿ ಅಂಕುರ್ ಗುಪ್ತಾ ಹೇಳಿದ್ದಾರೆ. ಅಪರಾಧ ನಡೆದ ಸ್ಥಳವೂ ಜಿಲ್ಲಾಕೇಂದ್ರದಿಂದ 45 ಕಿಲೋ ಮೀಟರ್ ದೂರದಲ್ಲಿದೆ. ಪೊಲೀಸರು ಮತ್ತು ಪ್ರತ್ಯಕ್ಷದರ್ಶಿಗಳ ಪ್ರಕಾರ, ತೇಜ್‌ಪಾಲ್ ವೈಯಕ್ತಿಕ ಕಾರಣಗಳಿಗಾಗಿ ಜಗ್ರಾಂವ್‌ಗೆ ಬಂದಿದ್ದರು ಎನ್ನಲಾಗಿದೆ.