ದುಬೈ, ಸೆ.4: ಟೀಮ್ ಇಂಡಿಯಾದ ಎಡಗೈ ಬ್ಯಾಟರ್ ಸ್ಮೃತಿ ಮಂಧಾನ ಏಷ್ಯಾ ಕಪ್ ಟೂರ್ನಿಯಲ್ಲಿ 5 ಪ್ರಮುಖ ದಾಖಲೆ ನಿರ್ಮಿಸಿದರು. ಗುರುವಾರ ನಡೆದಿದ್ದ ಹಾಂಗ್‌ಕಾಂಗ್ ವಿರುದ್ಧದ ಪಂದ್ಯದಲ್ಲಿ ಸ್ಮೃತಿ 124 ರನ್ ಗಳಿಸಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ತೋರಿದ್ದರು.
ಟಿ20ಯಲ್ಲಿಅತ್ಯಧಿಕ ವೈಯಕ್ತಿಕ ಸ್ಕೋರ್(ಭಾರತೀಯ ಆಟಗಾರ್ತಿ)
ಮಂಧಾನ ಅವರ 124 ರನ್ ಈಗ ಟಿ20 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಭಾರತೀಯ ಮಹಿಳೆಯೊಬ್ಬರು ಗಳಿಸಿದ ಅತ್ಯಧಿಕ ಸ್ಕೋರ್ ಆಗಿದೆ. ಈ ಹಿಂದೆ ಅವರು 2025 ರಲ್ಲಿ ಟ್ರೆಂಟ್ ಬ್ರಿಡ್ಜ್‌ನಲ್ಲಿ ಇಂಗ್ಲೆಂಡ್ ವಿರುದ್ಧ 112 ರನ್ ಗಳಿಸುವ ಮೂಲಕ ಮಾನದಂಡವನ್ನು ಸ್ಥಾಪಿಸಿದ್ದರು. ಅವರು 57 ಎಸೆತಗಳಲ್ಲಿ ತಮ್ಮ ಶತಕವನ್ನು ತಲುಪಿದರು ಮತ್ತು ಎರಡು ಟಿ20ಐ ಶತಕಗಳನ್ನು ಗಳಿಸಿದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಜಂಟಿ ಅತಿ ಹೆಚ್ಚು ಐವತ್ತು ಪ್ಲಸ್ ಸ್ಕೋರ್‌ಗಳು
ಮಂಧಾನ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 93ನೇ ಐವತ್ತು ಪ್ಲಸ್ ಸ್ಕೋರ್ ದಾಖಲಿಸಿದರು. ಈ ಮೂಲಕ ಮಹಿಳಾ ಅಂತರರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ಐವತ್ತು ಪ್ಲಸ್ ಸ್ಕೋರ್‌ಗಳನ್ನು ಗಳಿಸಿದ ಭಾರತದ ಮಾಜಿ ನಾಯಕಿ ಮಿಥಾಲಿ ರಾಜ್ ಅವರ ಜೊತೆ ಜಂಟಿ ದಾಖಲೆ ಹಂಚಿಕೊಂಡರು. ಷಾರ್ಲೆಟ್ ಎಡ್ವರ್ಡ್ಸ್(80) ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಟಿ20ಐಗಳಲ್ಲಿ ಮಂಧಾನಾ ಅವರ 37ನೇ ಐವತ್ತು ಪ್ಲಸ್ ಸ್ಕೋರ್ ಇದಾಗಿದೆ. ಆಸ್ಟ್ರೇಲಿಯಾದ ಬೆತ್ ಮೂನಿ(33) ಎರಡನೇ ಸ್ಥಾನದಲ್ಲಿದ್ದಾರೆ.
ತಮ್ಮ ದೊಡ್ಡ ದಾಖಲೆ ಮುರಿದ ಸ್ಮೃತಿ ಮಂಧಾನಾಗೆ ಮಿಥಾಲಿ ರಾಜ್ ವಿಶೇಷ ಸಂದೇಶ!
ಮಹಿಳಾ ಟಿ20ಯಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳು(ಭಾರತೀಯ ಆಟಗಾರ್ತಿ)
ಹಾಂಗ್‌ಕಾಂಗ್ ಎದುರಿನ ಪಂದ್ಯದಲ್ಲಿ 7 ಸಿಕ್ಸರ್ ಬಾರಿಸಿದ ಮಂಧಾನ ಟಿ20ಐ ಸಿಕ್ಸರ್‌ಗಳ ಸಂಖ್ಯೆಯನ್ನು 95 ಕ್ಕೆ ಏರಿಸಿದರು. ಇದು ಈ ಸ್ವರೂಪದಲ್ಲಿ ಭಾರತೀಯ ಆಟಗಾರ್ತಿ ಬಾರಿಸಿದ ಅತ್ಯಧಿಕ ಸಿಕ್ಸರ್. ಹರ್ಮನ್‌ಪ್ರೀತ್ ಕೌರ್(89) ಎರಡನೇ ಸ್ಥಾನದಲ್ಲಿದ್ದಾರೆ.
ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು
ಅಂತಾರಾಷ್ಟ್ರೀಯ ಕ್ರಿಕೆಟ್‌ನ ಎಲ್ಲಾ ಮಾದರಿಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ್ತಿ ಎಂಬ ಹಿರಿಮೆಗೂ ಮಂಧಾನ ಪಾತ್ರರಾದರು. ಮೂರು ಮಾದರಿ ಸೇರಿ 10,880 ರನ್ ಗಳಿಸಿ ಅಗ್ರಸ್ಥಾನಕ್ಕೇರಿದರು. ಮಿಥಾಲಿ ರಾಜ್ (10,868) ಅವರನ್ನು ಹಿಂದಿಕ್ಕಿದರು.
ಮಹಿಳಾ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕಗಳು
ಮಹಿಳಾ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮಂದಾನ ಅವರು 18ನೇ ಶತಕ ಗಳಿಸುವ ಮೂಲಕ ಆಸ್ಟ್ರೇಲಿಯಾದ ದಂತಕಥೆ ಮೆಗ್ ಲ್ಯಾನಿಂಗ್ ಮತ್ತು ದಕ್ಷಿಣ ಆಫ್ರಿಕಾದ ಲಾರಾ ವೋಲ್ವಾರ್ಟ್ (ತಲಾ 17 ಶತಕ) ಅವರನ್ನು ಹಿಂದಿಕ್ಕಿದರು.