ಲಕ್ನೋ, ಫೆ.20: ಉತ್ತರ ಪ್ರದೇಶದ ಉನ್ನಾವೊದ ಸಪ್ರು ಕ್ರೀಡಾಂಗಣದಲ್ಲಿ ನಡೆದ ಕ್ರಿಕೆಟ್ ಪಂದ್ಯದ ವೇಳೆ ಜೇನುನೊಣಗಳ ದಾಳಿಯಿಂದ ಅನುಭವಿ ಕ್ರಿಕೆಟ್ ಅಂಪೈರ್ ಮಾಣಿಕ್ ಗುಪ್ತಾ(Manik Gupta) ಸಾವನ್ನಪ್ಪಿದ ದುರಂತ ನಡೆದಿದೆ. ಮಾಣಿಕ್ ಕಾನ್ಪುರ ಕ್ರಿಕೆಟ್ ಸರ್ಕ್ಯೂಟ್‌ನಲ್ಲಿ ಗಣ್ಯ ಅಂಪೈರ್ ಆಗಿದ್ದರು ಮತ್ತು ಕಾನ್ಪುರ ಕ್ರಿಕೆಟ್ ಅಸೋಸಿಯೇಷನ್‌ನೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು.
ಪಂದ್ಯ ಮುಗಿಸಿದ ನಂತರ, ಮಾಣಿಕ್ ಪಾನೀಯ ವಿರಾಮದ ಸಮಯದಲ್ಲಿ ಸಹ ಅಂಪೈರ್ ಅವರನ್ನು ಭೇಟಿ ಮಾಡಲು ಹೋದಾಗ, ಜೇನುನೊಣಗಳ ಹಿಂಡು ಇದ್ದಕ್ಕಿದ್ದಂತೆ ಅಲ್ಲಿದ್ದ ಎಲ್ಲರ ಮೇಲೆ ದಾಳಿ ಮಾಡಿತು ಎಂದು ಮಾಣಿಕ್ ಅವರ ಸಹೋದರ ಅಮಿತ್ ಕುಮಾರ್ ಗುಪ್ತಾ ANI ಗೆ ತಿಳಿಸಿದರು.
ಜೇಣುನೊಣಗಳ ದಾಳಿಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುವಾಗ, ಮಾಣಿಕ್ ಸಮತೋಲನ ಕಳೆದುಕೊಂಡು ಬಿದ್ದರು ಮತ್ತು ಜೇನುನೊಣಗಳು ಅವರ ಮೇಲೆ ಮುತ್ತಿಕೊಂಡವು ಎಂದು ಅವರ ಸಹೋದರ ಹೇಳಿದರು. ಮಾಣಿಕ್ ಸುಮಾರು 30 ವರ್ಷಗಳಿಂದ ಅಂಪೈರ್ ಆಗಿದ್ದರು ಮತ್ತು ರಾಜ್ಯ ಸಮಿತಿಯ ಅಂಪೈರ್ ಆಗಿದ್ದರು.
"ಪಾನೀಯ ವಿರಾಮದ ಸಮಯದಲ್ಲಿ ಜೇನುನೊಣಗಳ ಹಿಂಡು ನಮ್ಮ ಮೇಲೆ ದಾಳಿ ಮಾಡಿತು. ನಾವು ಓಡಿದೆವು, ಆದರೆ ಮಾಣಿಕ್ ಭಾಯ್‌ಗೆ ಬೇಗನೆ ಓಡಲು ಸಾಧ್ಯವಾಗಲಿಲ್ಲ. ಎಲ್ಲರೂ ನೆಲದ ಮೇಲೆ ಮಲಗಿದ್ದಾಗ, ಜೇನುನೊಣಗಳು ಅಲ್ಲಿದ್ದ ಎಲ್ಲರ ಮೇಲೆ ದಾಳಿ ಮಾಡಿದವು. ಮಾಣಿಕ್ ಮೇಲೆ ತೀವ್ರ ದಾಳಿ ನಡೆಯಿತು" ಎಂದು ಸಹ ಅಂಪೈರ್ ಜಗದೀಶ್ ಶರ್ಮಾ ಹೇಳಿದರು.
"ಮಾಣಿಕ್ ತಮ್ಮ ಇಡೀ ಜೀವನವನ್ನು ಅಂಪೈರಿಂಗ್ ಮಾಡುದರಲ್ಲೇ ಕಳೆದಿದ್ದರು. ಅವರು ಸಂಪೂರ್ಣವಾಗಿ ಕ್ರಿಕೆಟ್‌ಗೆ ಸಮರ್ಪಿತರಾಗಿದ್ದರು. ಇದು ದುರದೃಷ್ಟಕರ ಘಟನೆ. ಅವರು ಕಾನ್ಪುರ ಕ್ರಿಕೆಟ್ ಅಸೋಸಿಯೇಷನ್‌ನ ಸದಸ್ಯರಾಗಿದ್ದರು ಮತ್ತು ಕಾನ್ಪುರದಲ್ಲಿ ಒಬ್ಬ ವಿಶಿಷ್ಟ ಅಂಪೈರ್ ಆಗಿದ್ದರು" ಎಂದು ಮಾಣಿಕ್ ಅವರ ಆಪ್ತ ಭರತೇಂದು ಪುರಿ ANI ಗೆ ತಿಳಿಸಿದರು.
ಜೋನುನೊಣದ ಏಕಾಏಕಿ ದಾಳಿಯಲ್ಲಿ ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. 10 ನಿಮಿಷದ ದಾಳಿಯಲ್ಲಿ ದುರಂತವೇ ನಡೆದು ಹೋಗಿದೆ. ಗಾಯಗೊಂಡಿರುವ ಕ್ರಿಕೆಟಿಗರು ಸೇರಿ ಅಂಪೈರ್ ಜಗದೀಶ್ ಶರ್ಮಾ ಕಾನ್ಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಟೆನಿಸ್ ಪಂದ್ಯದ ವೇಳೆಯೂ ಜೇನುಹುಳಗಳ ದಾಳಿ!
ಪ್ರತ್ಯೇಕ ಘಟನೆಯಲ್ಲಿ ಗುರುವಾರ ಬೆಂಗಳೂರಿನ ಕಬ್ಬನ್ ಪಾರ್ಕ್‌ನಲ್ಲಿ ನಡೆದ ಐಟಿಎಫ್ (ITF) ಮಹಿಳಾ ಓಪನ್ ಟೆನ್ನಿಸ್ ಪಂದ್ಯಾವಳಿಯ ವೇಳೆ ಜೇನು ಹುಳುಗಳ ಹಿಂಡು ದಿಢೀರ್ ದಾಳಿ ಮಾಡಿ ಕ್ರೀಡಾಂಗಣದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಮೈದಾನದ ಆವರಣದಲ್ಲಿದ್ದ ಜೇನುಗೂಡಿನಿಂದ ಸಾವಿರಾರು ಜೇನು ನೊಣಗಳು ಆಟಗಾರರು ಮತ್ತು ಪ್ರೇಕ್ಷಕರ ಮೇಲೆ ದಾಳಿ ನಡೆಸಿದ್ದವು.