ಬೆಂಗಳೂರು, ಎ.6: ಭಾನುವಾರ ತವರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿದ್ದ ಚೆನ್ನೈ ಸೂಪರ್ ಕಿಂಗ್ಸ್(RCB vs CSK) ವಿರುದ್ಧದ ಪಂದ್ಯದಲ್ಲಿ 43 ರನ್ ಅಂತರದ ಗೆಲುವು ಸಾಧಿಸಿದ ಆರ್‌ಸಿಬಿ ಈ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ(Updated IPL 2026 Points Table) ಅಗ್ರಸ್ಥಾನಕ್ಕೇರಿದೆ. ಪಂದ್ಯಕ್ಕೂ ಮುನ್ನ ಆರ್‌ಸಿಬಿ ಮೂರನೇ ಸ್ಥಾನಿಯಾಗಿತ್ತು. ರಾಜಸ್ಥಾನ್ ಅಗ್ರಸ್ಥಾನ ಪಡೆದಿತ್ತು. ಇದೀಗ ರಾಜಸ್ಥಾನ್ ಎರಡನೇ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಮೂರನೇ ಸ್ಥಾನಿಯಾಗಿದೆ.
ಉಳಿದಂತೆ ಪಂಜಾಬ್ ಕಿಂಗ್ಸ್, ಸನ್‌ರೈಸರ್ಸ್ ಹೈದರಾಬಾದ್ ಮತ್ತು ಮಂಬೈ ಇಂಡಿಯನ್ಸ್ ಕ್ರಮವಾಗಿ 4, 5 ಮತ್ತು 6ನೇ ಸ್ಥಾನದಲ್ಲಿದೆ. ಆರೆಂಜ್ ಕ್ಯಾಪ್ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಯುವ ಬ್ಯಾಟರ್ ಸಮೀರ್ ರಿಝ್ವಿ ಬಳಿ ಇದ್ದರೆ, 5 ವಿಕೆಟ್ ಕಿತ್ತಿರುವ ರಾಜಸ್ಥಾನ್ ತಂಡದ ಸ್ಪಿನ್ನರ್ ರವಿ ಬಿಷ್ಣೋಯ್ ಪರ್ಪಲ್ ಕ್ಯಾಪ್ ಪಡೆದಿದ್ದಾರೆ. ಆರೆಂಜ್ ಕ್ಯಾಪ್ ಹೋಲ್ಡರ್ ರಿಝ್ವಿ 2 ಪಂದ್ಯಗಳಿಂದ 160 ರನ್ ಬಾರಿಸಿದ್ದಾರೆ. 145 ರನ್ ಗಳಿಸಿರುವ ಸನ್‌ರೈಸರ್ಸ್ ಹೈದರಾಬಾದ್ ತಂಡದ ಹೆನ್ರಿಚ್ ಕ್ಲಾಸೆನ್ ಎರಡನೇ ಸ್ಥಾನದಲ್ಲಿದ್ದಾರೆ.
ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಲಿಳಿದ ಆರ್‌ಸಿಬಿ ತಂಡಕ್ಕೆ ಎಲ್ಲಾ ಬ್ಯಾಟರ್‌ಗಳು ಉಪಯುಕ್ತ ರನ್ ಕಾಣಿಕೆ ನೀಡಿದರು. ಚೆನ್ನೈ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದ ಆರ್‌ಸಿಬಿ ನಿಗದಿತ 20 ಓವರ್‌ಗಳಲ್ಲಿ 3 ವಿಕೆಟ್‌ನಷ್ಟಕ್ಕೆ 250 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಚೆನ್ನೈ ಆರಂಭಿಕ ಆಘಾತದ ಹೊರತಾಗಿಯೂ 19.4 ಓವರ್‌ಗಳಲ್ಲಿ 207 ರನ್‌ಗೆ ಸರ್ವಪತನ ಕಂಡಿತು.
ಆರ್‌ಸಿಬಿ ಪರ ಆರಂಭದಲ್ಲಿ ವಿರಾಟ್ ಕೊಹ್ಲಿ 28 ರನ್ ಸಿಡಿಸಿದರೆ, ಫಿಲ್ ಸಾಲ್ಟ್ 46 ರನ್ ಬಾರಿಸಿ ಕೇವಲ 4 ರನ್ ಅಂತರದಲ್ಲಿ ಅರ್ಧಶತಕ ವಂಚಿತರಾದರು. ಆದರೆ ದೇವದತ್ ಪಡಿಕ್ಕಲ್ ಕೇವಲ 29 ಎಸೆತಗಳಲ್ಲಿ 5 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 50 ರನ್ ಸಿಡಿಸಿ ಜೇಮಿ ಓವರ್‌ಟನ್‌ಗೆ ವಿಕೆಟ್ ಒಪ್ಪಿಸಿದರು.
RCB vs CSK: ಐಪಿಎಲ್ ಟೂರ್ನಿಯಲ್ಲಿ 200 ವಿಕೆಟ್‌ಗಳನ್ನು ಪಡೆದ ಭುವನೇಶ್ವರ್ ಕುಮಾರ್!
ನಾಲ್ಕನೇ ವಿಕೆಟ್‌ಗೆ ಜತೆಯಾದ ನಾಯಕ ರಜತ್ ಪಾಟೀದಾರ್ ಹಾಗೂ ಟಿಮ್ ಡೇವಿಡ್ ಕೇವಲ 35 ಎಸೆತಗಳಲ್ಲಿ ಮುರಿಯದ 99 ರನ್ ಸಿಡಿಸುವ ಮೂಲಕ ತಂಡದ ಮೊತ್ತ 250ರ ಗಡಿ ದಾಟಿಸುವಲ್ಲಿ ಯಶಸ್ವಿಯಾದರು. ರಜತ್ ಪಾಟೀದಾರ್ ಕೇವಲ 19 ಎಸೆತಗಳಲ್ಲಿ ಒಂದು ಬೌಂಡರಿ ಆರು ಸಿಕ್ಸರ್ ಸಹಿತ ಅಜೇಯ 48 ರನ್ ಬಾರಿಸಿದರು. ಟಿಮ್ ಡೇವಿಡ್ ಕೇವಲ 25 ಎಸೆತಗಳಲ್ಲಿ 3 ಬೌಂಡರಿ ಹಾಗೂ 8 ಸೊಗಸಾದ ಸಿಕ್ಸರ್‌ಗಳ ನೆರವಿನಿಂದ ಅಜೇಯ 70 ರನ್ ಬಾರಿಸಿದರು.