ಬೆಂಗಳೂರು, ಎ.5: ಶನಿವಾರ ನಡೆದ ಎರಡು ಐಪಿಎಲ್(IPL 2026) ಪಂದ್ಯಗಳ ನಂತರ ಅಂಕಪಟ್ಟಿಯಲ್ಲಿ ಮಹತ್ವದ(Updated IPL 2026 Points Table) ಬದಲಾವಣೆಗಳಾಗಿವೆ. ಗುಜರಾತ್ ಟೈಟಾನ್ಸ್ ವಿರುದ್ಧ ರೋಚಕ 6 ರನ್ ಅಂತರದ ಗೆಲುವು ಸಾಧಿಸಿದ ರಾಜಸ್ಥಾನ್ ರಾಯಲ್ಸ್ ಮತ್ತೆ ಅಗ್ರಸ್ಥಾನಕ್ಕೇರಿದೆ. ಮುಂಬೈ ಇಂಡಿಯನ್ಸ್ ವಿರುದ್ಧ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ಎರಡನೇ ಸ್ಥಾನ ಪಡೆದಿದೆ. ಪಂಜಾಬ್ ಕಿಂಗ್ಸ್ ಮೂರನೇ ಸ್ಥಾನಿಯಾಗಿದೆ.
ಟೂರ್ನಿಯಲ್ಲಿ ಮೊದಲ ಸೋಲು ಕಂಡ ಮುಂಬೈ 6ನೇ ಸ್ಥಾನಕ್ಕೆ ಕುಸಿಯಿತು. ಸತತ ಎರಡು ಸೋಲು ಕಂಡ ಗುಜರಾತ್ 7ನೇ ಸ್ಥಾನದಲ್ಲಿದೆ. ಆರ್‌ಸಿಬಿ ನಾಲ್ಕನೇ ಸ್ಥಾನದಲ್ಲಿದೆ. ಇಂದು ನಡೆಯುವ ಚೆನ್ನೈ ವಿರುದ್ಧದ ಪಂದ್ಯದಲ್ಲಿ ಗೆದ್ದರೆ ಆರ್‌ಸಿಬಿ ಅಗ್ರಸ್ಥಾನ ಪಡೆಯಲಿದೆ. ತಂಡದ ರನ್‌ರೇಟ್ ಕೂಡ ಉತ್ತಮವಾಗಿದೆ. ಇಂದು ಕೂಡ ಎರಡು ಪಂದ್ಯಗಳು ನಡೆಯಲಿವೆ. ದಿನ ಮೊದಲ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ಮುಖಾಮುಖಿಯಾದರೆ, ರಾತ್ರಿ ಆರ್‌ಸಿಬಿ ಮತ್ತು ಚೆನ್ನೈ ಕಾದಾಟ ನಡೆಸಲಿವೆ.
ಆರೆಂಜ್ ಕ್ಯಾಪ್
ಅತ್ಯಧಿಕ ರನ್ ಗಳಿಸಿದ ಬ್ಯಾಟರ್‌ಗೆ ನೀಡುವ ಆರೆಂಜ್ ಕ್ಯಾಪ್ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಯುವ ಬ್ಯಾಟರ್ ಸಮೀರ್ ರಿಝ್ವಿ ಪಾಲಾಗಿದೆ. ಅವರು ಆಡಿದ 2 ಪಂದ್ಯಗಳಿಂದ 160 ರನ್ ಬಾರಿಸಿದ್ದಾರೆ. 113 ರನ್ ಗಳಿಸಿರುವ ರೋಹಿತ್ ಶರ್ಮ ಎರಡನೇ ಸ್ಥಾನದಲ್ಲಿದ್ದಾರೆ.
ಪರ್ಪಲ್ ಕ್ಯಾಪ್
5 ವಿಕೆಟ್ ಕಿತ್ತಿರುವ ರಾಜಸ್ಥಾನ್ ತಂಡದ ಸ್ಪಿನ್ನರ್ ರವಿ ಬಿಷ್ಣೋಯ್ ಪರ್ಪಲ್ ಕ್ಯಾಪ್ ಪಡೆದಿದ್ದಾರೆ. ಪಂಜಾಬ್ ತಂಡದ ವಿಜಯಕುಮಾರ್ ವೈಶಾಕ್ ಕೂಡ 5 ವಿಕೆಟ್ ಕಿತ್ತು ಈ ರೇಸ್‌ನಲ್ಲಿ ಎರಡನೇ ಸ್ಥಾನಿಯಾಗಿದೆ.
ರಾಯಲ್ಸ್‌ಗೆ ರೋಚಕ ಗೆಲುವು
ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಶನಿವಾರ ರಾತ್ರಿ ನಡೆದಿದ್ದ ರೋಚಕ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ ಗುಜರಾತ್ ಟೈಟಾನ್ಸ್ ವಿರುದ್ಧ 6 ರನ್ ಅಂತರದ ಗೆಲುವು ಸಾಧಿಸಿತು. ಕೊನೆಯ ಎಸೆತದ ತನಕ ಸಾಗಿದ ಈ ರೋಚಕ ಪಂದ್ಯ ಅಭಿಮಾನಿಗಳನ್ನು ತುದಿಗಾಲಲ್ಲಿ ನಿಲ್ಲುವಂತೆ ಮಾಡಿತು.
ಪಂದ್ಯದಲ್ಲಿ ಟಾಸ್ ಗೆದ್ದ ರಾಜಸ್ಥಾನ ರಾಯಲ್ಸ್ ತಂಡವು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು ಆರಂಭಿಕ ಜೋಡಿ ಯಶಸ್ವಿ ಜೈಸ್ವಾಲ್ (55) ಮತ್ತು ವೈಭವ್ ಸೂರ್ಯವಂಶಿ (31) ಪವರ್ ಪ್ಲೇನಲ್ಲಿ 70 ರನ್ ಸೇರಿಸಿದರು. ಬಳಿಕ ಧ್ರುವ ಜುರೇಲ್ (75) ಅರ್ಧಶತಕದ ನೆರವು ಪಡೆದ ತಂಡ 20 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 210 ರನ್ ಗಳಿಸಿತು. ಕಠಿಣ ಗುರಿ ಬೆನ್ನಟ್ಟಿದ ಗುಜರಾತ್ ತಂಡ ಗೆಲುವಿನಂಚಿಗೆ ಬಂದು 8 ವಿಕೆಟ್‌ಗೆ 204 ರನ್ ಗಳಿಸಲಷ್ಟೇ ಶಕ್ತವಾಯಿತು.