ಜೈಪುರ, ಎ.26: ಜೈಪುರದಲ್ಲಿ ನಡೆದ 2026ರ ಐಪಿಎಲ್(IPL 2026) ಪಂದ್ಯದ ವೇಳೆ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್(Rajasthan Royals) ತಂಡದ ವೈಭವ್ ಸೂರ್ಯವಂಶಿ(Vaibhav Sooryavanshi injured) ಗಾಯಗೊಂಡು ಕುಂಟುತ್ತಾ ಮೈದಾನದಿಂದ ಹೊರ ನಡೆದಿದ್ದರು. ಫೀಲ್ಡಿಂಗ್ ಮಾಡುವಾಗ ಅಸ್ವಸ್ಥತೆ ಕಾಣಿಸಿಕೊಂಡು ಇನ್ನಿಂಗ್ಸ್ ಮಧ್ಯದಲ್ಲಿ ಆಟ ಮೊಟಕುಗೊಳಿಸಿದ್ದರು. ಇದೀಗ ಅವರ ಗಾಯದ ಬಗ್ಗೆ ತಂಡದ ಕೋಚ್ ಅಪ್‌ಡೇಟ್ ನೀಡಿದ್ದಾರೆ.
ಪಂದ್ಯದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ತಂಡದ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋರ್, "ಸೂರ್ಯವಂಶಿಗೆ ಮಂಡಿರಜ್ಜು ನೋವು ಕಾಣಿಸಿಕೊಂಡಿತ್ತು. ಆದರೆ ಈಗ ಅವರು ಚೆನ್ನಾಗಿ ಕಾಣುತ್ತಿದ್ದಾರೆ. ಅವರಿಗೆ ಚಿಕಿತ್ಸೆ ನೀಡಲಾಗಿದೆ. ಆದ್ದರಿಂದ ಅವರು ಚೇತರಿಕೆ ಕಾಣುತ್ತಿದ್ದಾರೆ. ಒಂದು ದಿನದಲ್ಲಿ ಅವರ ಚೇತರಿಕೆ ಬಗ್ಗೆ ನಮಗೆ ತಿಳಿಯುತ್ತದೆ. ಗಂಭೀರ ಗಾಯಗೊಂಡಂತೆ ಕಾಣುತ್ತಿಲ್ಲ" ಎಂದು ಹೇಳಿದರು.
ಸವಾಯಿ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದ ಎರಡನೇ ಇನ್ನಿಂಗ್ಸ್‌ನ ಆರಂಭದಲ್ಲಿ ಈ ಘಟನೆ ನಡೆದಿತ್ತು. ಎಸ್‌ಆರ್‌ಎಚ್‌ನ ಇನ್ನಿಂಗ್ಸ್‌ನ ನಾಲ್ಕನೇ ಓವರ್‌ನಲ್ಲಿ ಬೌಂಡರಿಯತ್ತ ಚೆಂಡನ್ನು ಬೆನ್ನಟ್ಟುತ್ತಿದ್ದಾಗ, ಸೂರ್ಯವಂಶಿ ಇದ್ದಕ್ಕಿದ್ದಂತೆ ತನ್ನ ಮಂಡಿರಜ್ಜೆಯನ್ನು ಹಿಡಿದಿರುವುದು ಕಂಡುಬಂದಿತು.
ಅಗ್ರಸ್ಥಾನ ಉಳಿಸಿಕೊಂಡ ಪಂಜಾಬ್, ಮೂರಕ್ಕೇರಿದ ಸನ್‌ರೈಸಸರ್ಸ್
ಅವರು ತಕ್ಷಣವೇ ಅಸ್ವಸ್ಥತೆಯನ್ನು ಸೂಚಿಸಿದರು ಮತ್ತು ಫಿಸಿಯೋ ಅವರನ್ನು ನೋಡಿಕೊಳ್ಳುವ ಮೊದಲು ಮೈದಾನದಿಂದ ಹೊರಗೆ ಕರೆತರಲಾಯಿತು. ಇದು ಅವರ ಚಿಕ್ಕ ವಯಸ್ಸು ಮತ್ತು ಹೆಚ್ಚಿನ ಕೆಲಸದ ಹೊರೆಯಿಂದಾಗಿ ಕಳವಳವನ್ನು ಉಂಟುಮಾಡಿತು. ಇದಕ್ಕೂ ಮುನ್ನ ಸ್ಫೋಟಕ ಬ್ಯಾಟಿಂಗ್ ನಡೆಸಿದ್ದ ಸೂರ್ಯವಂಶಿ ಕೇವಲ 36 ಎಸೆತಗಳಲ್ಲಿ ಶತಕದ ಮೈಲಿಗಲ್ಲು ತಲುಪಿದರು. ಇದು ಅವರ ಎರಡನೇ ಐಪಿಎಲ್ ಶತಕವಾಗಿತ್ತು ಮತ್ತು 1000 ಟಿ20 ರನ್‌ಗಳನ್ನು ದಾಟಿದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ 6 ವಿಕೆಟ್‌ಗೆ 228 ರನ್ ಗಳಿಸಿತು. ಸನ್‌ರೈಸರ್ಸ್‌ಗೆ ಅಭಿಷೇಕ್ ಹಾಗೂ ಕಿಶನ್ ಆಸರೆಯಾದರು. ಈ ಮೊತ್ತವನ್ನು ಹೈದರಾಬಾದ್ ತಂಡ ಕೇವಲ 18.3 ಓವರಲ್ಲೇ ಬಾರಿಸಿ 5 ವಿಕೆಟ್ ಜಯದ ನಗೆ ಬೀರಿತು. ತಂಡದ ಪರ ಅಭಿಷೇಕ್ 27 ಎಸೆತದಲ್ಲಿ 57, ಕಿಶನ್ 31 ಎಸೆತದಲ್ಲಿ 74 ರನ್ ಚಚ್ಚಿದರು. ಕ್ಲಾಸೆನ್ 29, ನಿತೀಶ್ 36 ರನ್ ಗಳಿಸಿ ನೆರವಾದರು.