ಕೋಲ್ಕತ್ತಾ, ಡಿ.2: ಇಲ್ಲಿನ ಈಡನ್ ಗಾರ್ಡನ್ಸ್‌ನಲ್ಲಿ ಮಂಗಳವಾರ ನಡೆದ ದೇಶೀಯ ಪ್ರಮುಖ ಟಿ20 ಟೂರ್ನಿಯಾದ ಸೈಯದ್ ಮುಷ್ತಾಕ್ ಅಲಿ ಟ್ರೋಫಿ(Syed Mushtaq Ali Trophy)ಯಲ್ಲಿ ಹದಿನಾಲ್ಕು ವರ್ಷದ ವೈಭವ್ ಸೂರ್ಯವಂಶಿ(Vaibhav Suryavanshi) ತಮ್ಮ ಚೊಚ್ಚಲ ಶತಕವನ್ನು ಬಾರಿಸುವ ಮೂಲಕ ಗಮನಸೆಳೆದರು. ಆದರೆ ಇವರ ಶತಕದ ಹೊರತಾಗಿಯೂ ಬಿಹಾರ ತಂಡ ಮಹಾರಾಷ್ಟ್ರ(Bihar vs Maharashtra) ವಿರುದ್ಧ 3 ವಿಕೆಟ್ ಅಂತರದ ಸೋಲು ಕಂಡಿತು.
ಟಾಸ್ ಸೋತು ಬ್ಯಾಟಿಂಗ್ ಆಹ್ವಾನ ಪಡೆದ ಬಿಹಾರ, ವೈಭವ್ ಸೂರ್ಯವಂಶಿಯ ಅಜೇಯ ಶತಕದ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 3 ವಿಕೆಟ್‌ಗೆ 176 ರನ್ ಕಲೆಹಾಕಿತು. ಜಬಾಬಿತ್ತ ಮಹಾರಾಷ್ಟ್ರ ಐದು ಎಸೆತಗಳು ಬಾಕಿ ಇರುವಂತೆಯೇ 7 ವಿಕೆಟ್‌ಗೆ 182 ರನ್ ಬಾರಿಸಿ ಗೆಲುವು ತನ್ನದಾಗಿಸಿಕೊಂಡಿತು.
ಚೇಸಿಂಗ್ ವೇಳೆ ನಾಯಕ ಪೃಥ್ವಿ ಶಾ(66) ಅರ್ಧಶತಕ ಬಾರಿಸಿ ತಂಡಕ್ಕೆ ನೆರವಾದರು. ಕೆಳ ಕ್ರಮಾಂಕದಲ್ಲಿ ನೀರಜ್ ಜೋಶಿ(30),ರಂಜೀತ್ ನಿಕಮ್(27) ಮತ್ತು ನಿಕೀಲ್ ನಾಯ್ಕ್(22) ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಬಿಹಾರ ತಂಡ ಬೃಹತ್ ಮೊತ್ತ ಪೇರಿಸಿದರೂ ಕಳಪೆ ಬೌಲಿಂಗ್‌ನಿಂ ಪಂದ್ಯವನ್ನು ಕಳೆದುಕೊಂಡಿತು.
ಇದನ್ನೂ ಓದಿ 15 ಸಿಕ್ಸರ್! 32 ಎಸೆತಗಳಲ್ಲಿ ಸ್ಪೋಟಕ ಶತಕ ಬಾರಿಸಿದ ವೈಭವ್ ಸೂರ್ಯವಂಶಿ!
ಸೂರ್ಯವಂಶಿ ಶತಕ ವ್ಯರ್ಥ
ಇದಕ್ಕೂ ಮುನ್ನ ಬ್ಯಾಟಿಂಗ್ ನಡೆಸಿದ ಬಿಹಾರ ಪರ ವೈಭವ್ ಸೂರ್ಯವಂಶಿ ತಮ್ಮ ಎಂದಿನ ಶೈಲಿಯಂತೆ ಬಿರುಸಿನ ಆಟವಾಡಿ ಕೇವಲ 57 ಎಸೆತಗಳಲ್ಲಿ ಶತಕ ಗಳಿಸಿದರು. ಒಟ್ಟು ಏಳು ಸಿಕ್ಸರ್‌ಗಳು ಮತ್ತು ಏಳು ಬೌಂಡರಿಗಳನ್ನು ಸಿಡಿಸಿ ಅಜೇಯ 108 ರನ್ ಚಚ್ಚಿದರು. ಆದರೆ ಪಂದ್ಯ ಸೋತ ಕಾರಣ ಇವರ ಶತಕ ವ್ಯರ್ಥವಾಯಿತು. ಸೂರ್ಯವಂಶಿ ಹೊರತುಪಡಿಸಿ ಆಕಾಶ್ ರಾಜ್(26) ಮತ್ತು ಆಯುಷ್ ಲೋಹರುಕ(25*) ರನ್ ಗಳಿಸಿದರು.ಮಹಾರಾಷ್ಟ್ರ ಪರ ವಿಕಿ ಓಸ್ಟ್ವಾಲ್, ಅರ್ಶಿನ್ ಕುಲಕರ್ಣಿ ಮತ್ತು ಆರ್.ಎಸ್. ಹಂಗರ್ಗೇಕರ್ ತಲಾ ಒಂದು ವಿಕೆಟ್ ಕಿತ್ತರು.
ಈ ಹದಿಹರೆಯದ ಆಟಗಾರ ಅದ್ಭುತ ಫಾರ್ಮ್‌ನಲ್ಲಿದ್ದಾರೆ. ಇತ್ತೀಚೆಗೆ ದೋಹಾದಲ್ಲಿ ನಡೆದ ರೈಸಿಂಗ್ ಸ್ಟಾರ್ಸ್ ಏಷ್ಯಾ ಕಪ್‌ನಲ್ಲಿ ಅವರು ಭಾರತ ಎ ತಂಡದ ಪ್ರಮುಖ ಸದಸ್ಯರಾಗಿದ್ದರು. ಬಾಂಗ್ಲಾದೇಶ ವಿರುದ್ಧ ಭಾರತ ಸೆಮಿಫೈನಲ್‌ನಲ್ಲಿ ಸೋತರೂ, ವೈಭವ್ ಯುಎಇ ವಿರುದ್ಧ 32 ಎಸೆತಗಳಲ್ಲಿ ಶತಕ ಸೇರಿದಂತೆ 239 ರನ್‌ಗಳನ್ನು ಗಳಿಸಿದ್ದರು. ಸರಾಸರಿ 59.75 ಮತ್ತು 243.87 ರ ಅದ್ಭುತ ಸ್ಟ್ರೈಕ್ ರೇಟ್ ಹೊಂದಿದ್ದರು.
ಕೇವಲ 12 ನೇ ವಯಸ್ಸಿನಲ್ಲಿ ರಣಜಿ ಟ್ರೋಫಿಗೆ ಪದಾರ್ಪಣೆ ಮಾಡಿದ ವೈಭವ್, ರಾಜಸ್ಥಾನ ರಾಯಲ್ಸ್ ಜೊತೆ ಐಪಿಎಲ್‌ನಲ್ಲಿ ಮಿಂಚುವ ಚೊಚ್ಚಲ ಋತುವಿನಲ್ಲಿ ಆಡಿದ ನಂತರ ಮನೆಮಾತಾದರು. ಗುಜರಾತ್ ಟೈಟಾನ್ಸ್ ವಿರುದ್ಧ 38 ಎಸೆತಗಳಲ್ಲಿ 101 ರನ್ ಗಳಿಸಿದ ಅವರು, ಐಪಿಎಲ್ ಇತಿಹಾಸದಲ್ಲಿ ಎರಡನೇ ಅತ್ಯಂತ ವೇಗದ ಶತಕವನ್ನು ದಾಖಲಿಸಿದ್ದರು.