ದುಬೈ: ಭಾರತದ ಸ್ಪಿನ್ನರ್ ವರುಣ್ ಚಕ್ರವರ್ತಿ(Varun Chakravarthy) ಅವರು ನೂತನ ಟಿ20 ಬೌಲಿಂಗ್(T20I Ranking) ಶ್ರೇಯಾಂಕದಲ್ಲಿ ಇದೇ ಮೊದಲ ಬಾರಿಗೆ ನಂ.1 ಬೌಲರ್ ಆಗಿ ಹೊರಹೊಮ್ಮಿದ್ದಾರೆ. ಬುಧವಾರ ಪ್ರಕಟಗೊಂಡ ಶ್ರೇಯಾಂಕ ಪಟ್ಟಿಯಲ್ಲಿ ವರುಣ್ ಮೂರು ಸ್ಥಾನ ಏರಿಕೆ ಕಂಡು ಅಗ್ರಸ್ಥಾನ ಅಲಂಕರಿಸಿದರು. ಈ ಹಿಂದೆ ಅಗ್ರಸ್ಥಾನಿಯಾಗಿದ್ದ ಜಾಕೋಬ್ ಡಫ್ಫಿ ದ್ವಿತೀಯ ಸ್ಥಾನ ಪಡೆದರು.
ವರುಣ್, ಐಸಿಸಿ ಟಿ20 ಬೌಲಿಂಗ್ ಶ್ರೇಯಾಂಕದಲ್ಲಿ ಅಗ್ರಸ್ಥಾನ ಪಡೆದ ಮೂರನೇ ಭಾರತೀಯ ಬೌಲರ್ ಎನಸಿಕೊಂಡರು. ಇದಕ್ಕೂ ಮುನ್ನ ಜಸ್‌ಪ್ರೀತ್ ಬುಮ್ರಾ ಮತ್ತು ಲೆಗ್ ಸ್ಪಿನ್ನರ್ ರವಿ ಬಿಷ್ಣೋಯ್ ಅಗ್ರಸ್ಥಾನಕ್ಕೇರಿದ್ದರು.
ಯುಎಇಯಲ್ಲಿ ನಡೆದ 2021 ರ ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡ ಹೀನಾಯವಾಗಿ ಸೋತ ನಂತರ ವರುಣ್ ಅವರನ್ನು ತಂಡದಿಂದ ಹೊರಗಿಡಲಾಗಿತ್ತು. ಆದರೆ ಕಳೆದ ವರ್ಷದ ಐಪಿಎಲ್‌ನಲ್ಲಿ ತೋರಿದ ಪ್ರದರ್ಶನದ ಬಳಿಕ ಅವರು ಭಾರತ ಟಿ20 ತಂಡದಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ. 34 ವರ್ಷದ ವರುಣ್ ತಮ್ಮ ಶ್ರೇಷ್ಠ ಪ್ರದರ್ಶನದ ಮೂಲಕ ತಂಡಕ್ಕೆ ನೆರವಾಗುತ್ತಿದ್ದಾರೆ.
2025ರ ವರ್ಷದ ಆರಂಭದಲ್ಲಿ ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ T20I ಸರಣಿಯಲ್ಲಿ, ವರುಣ್ ಒಟ್ಟು 14 ವಿಕೆಟ್‌ಗಳನ್ನು ಕಬಳಿಸಿದ್ದರು. ಚಾಂಪಿಯನ್ಸ್ ಟ್ರೋಫಿಯಲ್ಲೂ ಕಮಾಲ್ ಮಾಡಿದ್ದರು. ಪ್ರಸ್ತುತ ಅವರು ಏಷ್ಯಾ ಕಪ್‌ನಲ್ಲೂ ಉತ್ತಮ ಪ್ರದರ್ಶನ ನೀಡಿದ್ದಾರೆ. ಯುಎಇ ಮತ್ತು ಪಾಕಿಸ್ತಾನ ವಿರುದ್ಧದ ಎರಡು ಪಂದ್ಯಗಳಿಂದ ಎರಡು ವಿಕೆಟ್‌ಗಳನ್ನು ಪಡೆದಿದ್ದಾರೆ.
ಇದನ್ನೂ ಓದಿ ODI ranking: ಮತ್ತೆ ಅಗ್ರಸ್ಥಾನಕ್ಕೇರಿದ ಸ್ಮೃತಿ ಮಂಧಾನ
ಬ್ಯಾಟಿಂಗ್ ಶ್ರೇಯಾಂಕದಲ್ಲಿ ಅಭಿಷೇಕ್ ಶರ್ಮ ಅವರು(884) ಅಗ್ರಸ್ಥಾನ ಉಳಿಸಿಕೊಂಡಿದ್ದರೂ, ತಿಲಕ್ ವರ್ಮಾ(792) ಎರಡು ಸ್ಥಾನಗಳ ಕುಸಿತದೊಂದಿಗೆ 4ನೇ ಸ್ಥಾನ ಪಡೆದಿದ್ದಾರೆ. ನಾಯಕ ಸೂರ್ಯಕುಮಾರ್ ಯಾದವ್ ಕೂಡ ಒಂದು ಸ್ಥಾನ ನಷ್ಟ ಕಂಡು 7ನೇ ಸ್ಥಾನದಲ್ಲಿದ್ದಾರೆ.