ತಿರುವನಂತಪುರಂ, ಸೆ.27: ವಿರಾಟ್ ಕೊಹ್ಲಿ ಭಾನುವಾರ (ಸೆಪ್ಟೆಂಬರ್ 27) ಟೀಮ್ ಇಂಡಿಯಾ ಪರ ಮತ್ತೆ ಕಣಕ್ಕಿಳಿಯಲಿದ್ದು, ವೆಸ್ಟ್ ಇಂಡೀಸ್ ವಿರುದ್ಧದ ಮೂರು ಪಂದ್ಯಗಳ ಸರಣಿಯ ಮೊದಲ ಏಕದಿನ ಪಂದ್ಯದಲ್ಲಿ ದಾಖಲೆಗಳ ಪುಟದಲ್ಲಿ ತಮ್ಮ ಹೆಸರು ಸೇರಿಸುವ ಅವಕಾಶವನ್ನು ಪಡೆಯಲಿದ್ದಾರೆ.
ಪುರುಷರ ಏಕದಿನ ಕ್ರಿಕೆಟ್‌ನಲ್ಲಿ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿರುವ ಕೊಹ್ಲಿ, ಸರಣಿಯ ಮೊದಲ ಪಂದ್ಯದಲ್ಲಿ ಕನಿಷ್ಠ 59 ರನ್ ಗಳಿಸಿದರೆ, ದಂತಕಥೆ ಸಚಿನ್ ತೆಂಡೂಲ್ಕರ್ ನಂತರ ಏಕದಿನ ಕ್ರಿಕೆಟ್‌ನಲ್ಲಿ 15,000 ರನ್ ಪೂರೈಸಿದ ವಿಶ್ವದ ಎರಡನೇ ಆಟಗಾರ ಎನಿಸಿಕೊಳ್ಳಲಿದ್ದಾರೆ.
ಪ್ರಸ್ತುತ, ಕೊಹ್ಲಿ 314 ಏಕದಿನ ಪಂದ್ಯಗಳ 302 ಇನ್ನಿಂಗ್ಸ್‌ಗಳಲ್ಲಿ 14,941* ರನ್‌ಗಳನ್ನು ಗಳಿಸಿದ್ದಾರೆ. ಏಕದಿನ ಪಂದ್ಯಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿರುವ ತೆಂಡೂಲ್ಕರ್, 1989 ರಿಂದ 2012 ರವರೆಗೆ ಭಾರತಕ್ಕಾಗಿ 463 ಪಂದ್ಯಗಳಲ್ಲಿ 18,426 ರನ್ ಗಳಿಸುವ ಮೂಲಕ ತಮ್ಮ ಅಂತಾರಾಷ್ಟ್ರೀಯ ವೃತ್ತಿಜೀವನವನ್ನು ಮುಕ್ತಾಯಗೊಳಿಸಿದರು.
ಕೊಹ್ಲಿ ಇಲ್ಲಿಯವರೆಗೆ ವೆಸ್ಟ್ ಇಂಡೀಸ್ ವಿರುದ್ಧ 43 ಏಕದಿನ ಪಂದ್ಯಗಳನ್ನು ಆಡಿದ್ದು, 2,261 ರನ್ ಗಳಿಸಿದ್ದಾರೆ. 'ಮೆನ್ ಇನ್ ಮೆರೂನ್' (ವೆಸ್ಟ್ ಇಂಡೀಸ್ ತಂಡ) ವಿರುದ್ಧ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಅವರು ಅಗ್ರಸ್ಥಾನದಲ್ಲಿದ್ದಾರೆ. ಆದರೆ, ಸರಣಿಯ ಮೊದಲ ಪಂದ್ಯದಲ್ಲಿ ಅವರು 150 ರನ್ ಗಳಿಸಿದರೆ, ವೆಸ್ಟ್ ಇಂಡೀಸ್ ವಿರುದ್ಧ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ (ಎಲ್ಲಾ ಮಾದರಿಗಳನ್ನು ಸೇರಿಸಿ) 4,000 ರನ್‌ಗಳ ಮೈಲಿಗಲ್ಲನ್ನು ತಲುಪಲಿದ್ದಾರೆ.
Asian Games 2026: ಬ್ಯಾಡ್ಮಿಂಟನ್ ಕ್ವಾರ್ಟರ್‌ಫೈನಲ್ಸ್‌ಗೆ ಪಿವಿ ಸಿಂಧೂ, ಆಯುಷ್ ಶೆಟ್ಟಿ ಔಟ್!
ಪ್ರಸ್ತುತ, ಅವರು ಕೆರಿಬಿಯನ್ ತಂಡದ ವಿರುದ್ಧ 73 ಪಂದ್ಯಗಳ 75 ಇನ್ನಿಂಗ್ಸ್‌ಗಳಲ್ಲಿ ಒಟ್ಟು 3,850 ರನ್‌ಗಳನ್ನು ಗಳಿಸಿದ್ದಾರೆ. ಇಲ್ಲಿಯವರೆಗೆ, ವಿಶ್ವದಲ್ಲಿ ಕೇವಲ ಒಬ್ಬ ಆಟಗಾರ, ಜಾಕ್ವೆಸ್ ಕಾಲಿಸ್ ಮಾತ್ರ ವೆಸ್ಟ್ ಇಂಡೀಸ್ ವಿರುದ್ಧ 4,000ಕ್ಕೂ ಹೆಚ್ಚು ರನ್‌ಗಳನ್ನು ಗಳಿಸಿದ್ದಾರೆ.
ಮೊದಲ ಏಕದಿನ ಪಂದ್ಯದಲ್ಲಿ ಕೊಹ್ಲಿಗೆ ತವರಿನ ಪಂದ್ಯಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ಮುರಿಯುವ ಅವಕಾಶವೂ ಇದೆ. ಸದ್ಯಕ್ಕೆ ಭಾರತದಲ್ಲಿ ಆಡಿದ 130 ಏಕದಿನ ಪಂದ್ಯಗಳಲ್ಲಿ 6,867 ರನ್ ಗಳಿಸಿದ್ದಾರೆ. ತವರಿನ ಏಕದಿನ ಪಂದ್ಯಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ ವಿಶ್ವದಾಖಲೆ ತೆಂಡೂಲ್ಕರ್ ಹೆಸರಿನಲ್ಲಿದೆ. ತಂಡುಲ್ಕರ್ ತಮ್ಮ ಎರಡು ದಶಕಗಳ ಸುದೀರ್ಘ ಏಕದಿನ (ODI) ವೃತ್ತಿಜೀವನದಲ್ಲಿ ಭಾರತಕ್ಕಾಗಿ 164 ತವರು ಪಂದ್ಯಗಳನ್ನು ಆಡಿ 6,976 ರನ್ ಗಳಿಸಿದರು.
ತೆಂಡೂಲ್ಕರ್ ಅವರ ದಾಖಲೆಯನ್ನು ಮೀರಿಸಲು ಕೊಹ್ಲಿಗೆ 110 ರನ್‌ಗಳ ಅಗತ್ಯವಿದೆ. ಒಂದು ವೇಳೆ ಅವರು 133 ರನ್‌ಗಳನ್ನು ಗಳಿಸಿದರೆ, ತವರು ಮೈದಾನದ ಪಂದ್ಯಗಳಲ್ಲಿ 7,000 ಏಕದಿನ ರನ್‌ಗಳನ್ನು ಗಳಿಸಿದ ವಿಶ್ವದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗುತ್ತಾರೆ.