Virat Kohli: ಭಾವುಕ ಪೋಸ್ಟ್ ಶೇರ್ ಮಾಡಿ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ ವಿರಾಟ್ ಕೊಹ್ಲಿ
ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಬೆನ್ನಲ್ಲೇ ವಿರಾಟ್ ಕೊಹ್ಲಿಕೂಡ ಟೆಸ್ಟ್‌ಗೆ ನಿವೃತ್ತಿ ಪ್ರಕಟಿಸಿದ್ದಾರೆ. ತಕ್ಷಣವೇ ಜಾರಿಗೆ ಬರುವಂತೆ ತಮ್ಮ ನಿವೃತ್ತಿಯನ್ನು ಘೋಷಿಸಿದ್ದಾರೆ. ಈ ಬಗ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ ಭಾವುಕ ಪೋಸ್ಟ್ ಹಂಚಿಕೊಂಡಿದ್ದು, ಆ ಮೂಲಕ ಸುಮಾರು 14 ವರ್ಷಗಳ ಟೆಸ್ಟ್ ಮಾದರಿಯಿಂದ ದೂರ ಉಳಿದಿದ್ದಾರೆ.

ವಿರಾಟ್ ಕೊಹ್ಲಿ.

ಹೊಸದಿಲ್ಲಿ: ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ (Rohit Sharma) ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಬೆನ್ನಲ್ಲೇ ಟೀಮ್ ಇಂಡಿಯಾಕ್ಕೆ ಮತ್ತೊಂದು ಆಘಾತ ಎದಿರಾಗಿದೆ. ಇದೀಗ 36 ವರ್ಷದ ವಿರಾಟ್ ಕೊಹ್ಲಿ (Virat Kohli) ಕೂಡ ಟೆಸ್ಟ್‌ಗೆ ವಿದಾಯ ಹೇಳಿದ್ದಾರೆ. ತಕ್ಷಣವೇ ಜಾರಿಗೆ ಬರುವಂತೆ ತಮ್ಮ ನಿವೃತ್ತಿಯನ್ನು ಪ್ರಕಟಿಸಿದ್ದಾರೆ. ಈ ಬಗ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ ಭಾವುಕ ಪೋಸ್ಟ್ ಹಂಚಿಕೊಂಡಿದ್ದು, ಆ ಮೂಲಕ ಸುಮಾರು 14 ವರ್ಷಗಳ ಟೆಸ್ಟ್ ಮಾದರಿಯಿಂದ ದೂರ ಉಳಿಯಲು ನಿರ್ಧಿರಿಸಿದ್ದಾರೆ.
ವಿರಾಟ್ ಕೊಹ್ಲಿ ಅವರ ಇನ್‌ಸ್ಟಾಗ್ರಾಮ್ ಪೋಸ್ಟ್:
ಹಲವು ದಿನಗಳ ಊಹಾಪೋಹಗಳ ನಂತರ ಭಾರತೀಯ ಕ್ರಿಕೆಟ್ ದಿಗ್ಗಜ ವಿರಾಟ್ ಕೊಹ್ಲಿ ಇನ್‌ಸ್ಟಾಗ್ರಾಮ್‌ನಲ್ಲಿ ಭಾವನಾತ್ಮಕ ಪೋಸ್ಟ್ ಮೂಲಕ ಟೆಸ್ಟ್ ಕ್ರಿಕೆಟ್‌ನಿಂದ ತಕ್ಷಣದಿಂದಲೇ ಜಾರಿಗೆ ಬರುವಂತೆ ನಿವೃತ್ತಿ ಘೋಷಿಸಿದ್ದಾರೆ. ತಮ್ಮ ನಿರ್ಧಾರ ಹಿಂಪಡೆಯುವಂತೆ ಕೊಹ್ಲಿ ಅವರಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಮನವಿ ಮಾಡಿದ್ದು, ಅವರ ಇದನ್ನು ಒಪ್ಪಿಕೊಂಡಿಲ್ಲ ಎನ್ನಲಾಗಿದೆ. 2011ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಕಣಕ್ಕಿಳಿಯುವ ಮೂಲಕ ಟೆಸ್ಟ್‌ಗೆ ಕಾಲಿಟ್ಟಿದ್ದ ವಿರಾಟ್ ಕೊಹ್ಲಿ 2014ರಲ್ಲಿ ಭಾರತ ಟೆಸ್ಟ್ ತಂಡದ ನಾಯಕರಾಗಿ ಆಯ್ಕೆಯಾಗಿದ್ದರು.
ವಿರಾಟ್ ಕೊಹ್ಲಿ ಪೋಸ್ಟ್‌ನಲ್ಲಿ ಏನಿದೆ?
ʼʼಟೆಸ್ಟ್ ಕ್ರಿಕೆಟ್‌ಗೆ ಕಾಲಿಟ್ಟು 14 ವರ್ಷಗಳು ಕಳೆದಿವೆ. ಪ್ರಾಮಾಣಿಕವಾಗಿ ಹೇಳಬೇಕೆಂದರೆ ಇದು (ಟೆಸ್ಟ್) ನನ್ನನ್ನು ಇಷ್ಟು ದೂರ ಕರೆದೊಯ್ಯುತ್ತದೆ ಎಂದು ನಾನು ಎಂದಿಗೂ ಊಹಿಸಿರಲಿಲ್ಲ. ಇದು ನನ್ನನ್ನು ಪರೀಕ್ಷಿಸಿದೆ, ನನ್ನನ್ನು ರೂಪಿಸಿದೆ ಮತ್ತು ಪಾಠಗಳನ್ನು ಕಲಿಸಿದೆ. ಬಿಳಿ ಸಮವಸ್ತ್ರ ಧರಿಸಿ ಆಡುವುದು ಖುಷಿ ಕೊಟ್ಟಿದೆ. ದೀರ್ಘ ದಿನಗಳು, ಯಾರೂ ನೋಡದ ಸಣ್ಣ ಕ್ಷಣಗಳು...ಇವೆಲ್ಲವೂ ಶಾಶ್ವತವಾಗಿ ಉಳಿಯಲಿದೆ. ನಾನು ಟೆಸ್ಟ್‌ನಿಂದ ದೂರ ಸರಿಯುತ್ತಿರುವುದು ಸುಲಭದ ನಿರ್ಧಾರವಾಗಿರಲಿಲ್ಲ. ಆದರೆ ಇದುವೇ ಸರಿ ಎಂದೆನಿಸುತ್ತದೆʼʼ ಎಂದು ತಿಳಿಸಿದ್ದಾರೆ.
ನಾನು ಎಲ್ಲವನ್ನೂ ಟೆಸ್ಟ್ ಕ್ರಿಕೆಟ್‌ಗೆ ನೀಡಿದ್ದೇನೆ. ಅಲ್ಲದೆ ನಾನು ನಿರೀಕ್ಷಿಸಿದ್ದಕ್ಕಿಂತ ಹೆಚ್ಚಿನದನ್ನು ಪಡೆದಿದ್ದೇನೆ. ನನ್ನೊಂದಿಗೆ ಆಡಿದ ಪ್ರತಿಯೊಬ್ಬರಿಗೂ ಕೃತಜ್ಞತೆ ಅರ್ಪಿಸುತ್ತೇನೆ. ಅಲ್ಲದೆ ಯಾವತ್ತಿದ್ದರೂ ನಾನು ನನ್ನ ಟೆಸ್ಟ್ ವೃತ್ತಿಜೀವನವನ್ನು ನಗುವಿನೊಂದಿಗೆ ಹಿಂದಿರುಗಿ ನೋಡುತ್ತೇನೆ #269, ಸೈನ್ ಆಫ್ʼʼ ಎಂದು ವಿರಾಟ್ ಕೊಹ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಸದ್ಯ ಕೊಹ್ಲಿ ಐಪಿಎಲ್‌ನಲ್ಲಿ ಆರ್‌ಸಿಬಿ ಪರ ಆಡುತ್ತಿದ್ದಾರೆ.
ಕಳಪೆ ಪ್ರದರ್ಶನ
2024-25ರ ಟೆಸ್ಟ್ ಋತುವಿನಲ್ಲಿ ವಿರಾಟ್ ಕೊಹ್ಲಿ ಕಳಪೆ ಪ್ರದರ್ಶನ ನೀಡಿದ್ದರು. ಆಸ್ಟ್ರೇಲಿಯಾದಲ್ಲಿ ನಡೆದ ಐದು ಪಂದ್ಯಗಳ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ಕೊಹ್ಲಿ ರನ್ ಗಳಿಸಲು ಹೆಣಗಾಡಿದ್ದರು. ಐದು ಪಂದ್ಯಗಳಿಂದ ಕೇವಲ 190 ರನ್ ಮಾತ್ರ ಗಳಿಸಿದ್ದರು. ಪರ್ತ್‌ನಲ್ಲಿ ನಡೆದ ಸರಣಿಯ ಮೊದಲ ಟೆಸ್ಟ್‌ನಲ್ಲಿ ಶತಕ ಗಳಿಸಿದರೂ, ಆ ಬಳಿಕದ ನಾಲ್ಕು ಪಂದ್ಯಗಳಲ್ಲಿ ಅವರು ಕೇವಲ 85 ರನ್ ಗಳಿಸಿದ್ದರು. ಕೊಹ್ಲಿ ಒಟ್ಟಾರೆ 123 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 30 ಶತಕಗಳು ಸೇರಿದಂತೆ 9,230 ರನ್ ಗಳಿಸಿದ್ದಾರೆ.