ಮುಂಬಯಿ, ಎ.13: ಭಾನುವಾರ (ಎಪ್ರಿಲ್ 12) ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್(IPL 2026) 2026 ಪಂದ್ಯದಲ್ಲಿ ಭಾರತದ ಹಿರಿಯ ಕ್ರಿಕೆಟಿಗರಾದ ವಿರಾಟ್ ಕೊಹ್ಲಿ(Virat Kohli) ಮತ್ತು ರೋಹಿತ್ ಶರ್ಮಾ(Rohit Sharma) ಗಾಯದಿಂದ ಬಳಲಿದರು. ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB vs MI) ತಂಡದ ಮೊದಲ ಇನ್ನಿಂಗ್ಸ್ ನಂತರ ಕೊಹ್ಲಿ ಕಣಕಾಲಿನ ಸಮಸ್ಯೆಯಿಂದಾಗಿ ಮೈದಾನಕ್ಕೆ ಇಳಿಯಲಿಲ್ಲ. ಮುಂಬೈ ಬ್ಯಾಟಿಂಗ್ ಇನಿಂಗ್ಸ್ ವೇಳೆ ಬ್ಯಾಟಿಂಗ್ ಮಾಡುವಾಗ ರೋಹಿತ್ ಮಂಡಿರಜ್ಜು ಗಾಯದಿಂದ ನಿವೃತ್ತರಾದರು.
ಕೊಹ್ಲಿ 38 ಎಸೆತಗಳಲ್ಲಿ 50 ರನ್ ಗಳಿಸಿದರು. ಇದು ಅವರ ಇತ್ತೀಚಿನ ಮಾನದಂಡಗಳಿಗೆ ಹೋಲಿಸಿದರೆ ನಿಧಾನಗತಿಯ ಆಟ. ಎರಡನೇ ಇನ್ನಿಂಗ್ಸ್‌ನಲ್ಲಿ ಅವರು ಡಗೌಟ್‌ನಲ್ಲಿ ಕುಳಿತಿರುವುದು ಕಂಡುಬಂದಿತು. ಏತನ್ಮಧ್ಯೆ, ರೋಹಿತ್ 19 ರನ್ ಗಳಿಸಿದ ವೇಳೆ ನೋವಿನಿಂದ ಮೈದಾನ ತೊರೆದರು. ಭುಜದ ಗಾಯದಿಂದಾಗಿ ಕೊಹ್ಲಿ ಕೊನೆಯ ಬಾರಿಗೆ 2017 ರ ಋತುವಿನಲ್ಲಿ ಐಪಿಎಲ್ ಪಂದ್ಯಗಳನ್ನು ತಪ್ಪಿಸಿಕೊಂಡಿದ್ದರು. ರೋಹಿತ್ ತಮ್ಮ ಒಟ್ಟಾರೆ ಫಿಟ್ನೆಸ್ ಅನ್ನು ಸಾಕಷ್ಟು ಸುಧಾರಿಸಿದ್ದರೂ ಸಹ, ಕೊಹ್ಲಿಗೆ ಹೋಲಿಸಿದರೆ ಹೆಚ್ಚಿನ ತೊಂದರೆಗಳನ್ನು ಎದುರಿಸಿದ್ದಾರೆ.
ಆರ್‌ಸಿಬಿಯಲ್ಲಿ ಕೊಹ್ಲಿ ಬದಲಿಗೆ ಯಾರು ಸ್ಥಾನ ಪಡೆಯಬಹುದು?
ಒಂದೊಮ್ಮೆ ಕೊಹ್ಲಿ ಮುಂದಿನ ಕೆಲ ಪಂದ್ಯಗಳಿಗೆ ವಿಶ್ರಾಂತಿ ಪಡೆದರೆ ಆರ್‌ಸಿಬಿ ತಂಡದಲ್ಲಿ ಕೊಹ್ಲಿ ಬದಲಿಗೆ ಎರಡು ಭಾರತೀಯ ಆಯ್ಕೆಗಳಿವೆ. ಆಲ್‌ರೌಂಡರ್ ವೆಂಕಟೇಶ್ ಅಯ್ಯರ್ ಅವರು ಫಿಲ್ ಸಾಲ್ಟ್ ಜೊತೆಗೆ ಆರಂಭಿಕರಾಗಿ ಆಡಬಹುದು. ಮಾತ್ರವಲ್ಲದೆ ಅಂಡರ್-19 ಬ್ಯಾಟ್ಸ್‌ಮನ್ ವಿಹಾನ್ ಮಲ್ಹೋತ್ರಾ ಕೂಡ ರೇಸ್‌ನಲ್ಲಿದ್ದಾರೆ.
IPL 2026: ಪರ್ಪಲ್ ಕ್ಯಾಪ್ ಪಡೆದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ರೋಹಿತ್ ಶರ್ಮಾ ಸ್ಥಾನವನ್ನು ಯಾರು ತುಂಬಬಹುದು?
ಮುಂಬೈನಲ್ಲಿಯೂ ಸಹ, ತಂಡವು ವಿಲ್ ಜ್ಯಾಕ್ಸ್ ಮತ್ತು ಕ್ವಿಂಟನ್ ಡಿ ಕಾಕ್ ಅವರಂತಹ ಆಟಗಾರರನ್ನು ಮೊದಲ ಆಯ್ಕೆಯಾಗಿ ಬಯಸುತ್ತದೆ. ಆದರೆ ತಂಡವನ್ನು ಅಸಮತೋಲನಗೊಳಿಸುವುದನ್ನು ತಪ್ಪಿಸಲು ರಾಬಿನ್ ಮಿಂಜ್ ಅವರಂತಹ ಆಟಗಾರರನ್ನು ಆಯ್ಕೆ ಮಾಡಬೇಕಾಗಬಹುದು.
ಮುಂಬೈಗೆ ಹ್ಯಾಟ್ರಿಕ್ ಸೋಲು
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಆರ್‌ಸಿಬಿ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 240 ರನ್ ಗಳಿಸಿತು. ಗೆಲ್ಲಲು ಕಠಿಣ ಗುರಿ ಬೆನ್ನಟ್ಟಿದ ಮುಂಬೈ ತಂಡವು 5 ವಿಕೆಟ್ ನಷ್ಟಕ್ಕೆ 222 ರನ್ ಗಳಿಸಿ ಶರಣಾಯಿತು. ಮುಂಬೈ ಶೆರ್ಫಾನ್ ರುದರ್ಫೋರ್ಡ್ (ಔಟಾಗದೆ 71, 31 ಎಸೆತ, 1 ಬೌಂಡರಿ, 9 ಸಿಕ್ಸರ್) ಸರ್ವಾಧಿಕ ಸ್ಕೋರ್ ಗಳಿಸಿದರು.