ಲಖನೌ, ಮೇ 8: ಗುರುವಾರ ನಡೆದಿದ್ದ ಐಪಿಎಲ್ 2026(IPL 2026) ರಲ್ಲಿ ಲಖನೌ ಸೂಪರ್ ಜೈಂಟ್ಸ್(Lucknow Super Giants) ತಂಡ ಮಿಚೆಲ್ ಮಾರ್ಷ್ ಅವರ ಭರ್ಜರಿ ಶತಕ ಮತ್ತು ಪ್ರಿನ್ಸ್ ಯಾದವ್ ಅಮೋಘ ಬೌಲಿಂಗ್ ಪ್ರದರ್ಶನ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಒಂಬತ್ತು ರನ್‌ಗಳ ಡಿಎಲ್ಎಸ್ ಜಯ ಸಾಧಿಸಿತು. ಈ ಮೂಲಕ ಪ್ಲೇಆಫ್ ರೇಸ್‌ನಲ್ಲಿ ತಮ್ಮನ್ನು ತಾವು ಜೀವಂತವಾಗಿರಿಸಿಕೊಂಡಿತು. ಪಂದ್ಯದಲ್ಲಿ ವಿರಾಟ್ ಕೊಹ್ಲಿ(Virat Kohli) ಶೂನ್ಯಕ್ಕೆ ಔಟಾದರು. ಕೊಹ್ಲಿಯೇ ನೀಡಿದ ಸಲಹೆಯಿಂದ ಅವರನ್ನು ಔಟ್ ಮಾಡಿದ್ದಾಗಿ ಪ್ರಿನ್ಸ್ ಯಾದವ್ ಹೇಳಿದ್ದಾರೆ.
ಮಳೆಯಿಂದಾಗಿ ಸುಮಾರು ಒಂದು ಗಂಟೆ ವಿಳಂಬವಾದ ಈ ಪಂದ್ಯದವನ್ನು ಅಂತಿಮವಾಗಿ 19 ಓವರ್‌ಗಳಿಗೆ ಇಳಿಸಲಾಯಿತು. ಅದರಂತೆ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಲಖನೌ ತಂಡ ನಿಗದಿತ 19 ಓವರ್‌ಗಳಲ್ಲಿ 3 ವಿಕೆಟ್‌ಗೆ 209 ರನ್ ಬಾರಿಸಿತು. ಸವಾಲಿನ ಮೊತ್ತವನ್ನು ಬೆನ್ನಟ್ಟಿಕೊಂಡು ಬಂದ ಆರ್‌ಸಿಬಿ 6 ವಿಕೆಟ್ ನಷ್ಟಕ್ಕೆ 203 ರನ್ ಗಳಿಸಲಷ್ಟೇ ಶಕ್ತವಾಗಿ ಶರಣಾಯಿತು.
ಪಂದ್ಯದ ಬಳಿಕ ಮಾತನಾಡಿದ ಪಿನ್ಸ್ ಯಾದವ್, ಕೊನೆಯ ಪಂದ್ಯದ ನಂತರ, ನಾನು ವಿರಾಟ್ ಭಯ್ಯಾ ಜೊತೆ ಮಾತನಾಡುತ್ತಿದ್ದೆ ಮತ್ತು ಅವರು ನನಗೆ ಒಂದೇ ಒಂದು ವಿಷಯವನ್ನು ಹೇಳಿದರು. ಲಾಂಗ್ ಆನ್ ನಿಂದ ಬಂದು ಆಫ್ ಲೆಂತ್ ಕಡೆಗೆ ಬೌಲಿಂಗ್ ನಡೆಸುವಂತೆ ಸಲಹೆ ನೀಡಿದ್ದರು. ಅವರ ಸಲಹೆಯಂತೆ ನಾನು ಬೌಲಿಂಗ್ ಮಾಡಿದೆ. ಅದು ಅವರ ವಿಕೆಟ್ ಪತನಕ್ಕೆ ಕಾರಣವಾಯಿತು. ನಾವು ಸತತ ಆರು ಪಂದ್ಯಗಳನ್ನು ಸೋತಿದ್ದೇವೆ ಆದರೆ ಪ್ರಯತ್ನವನ್ನು ಮುಂದುವರಿಸುತ್ತೇವೆ ಎಂದು ಪ್ರಿನ್ಸ್ ಯಾದವ್ ಹೇಳಿದರು.
ಐಪಿಎಲ್‌ನಲ್ಲಿ ಮತ್ತೆ ವಿವಾದದ ಹೊಗೆ; ವಿಮಾನದಲ್ಲಿ ದಮ್ಮು ಎಳೆದ ಚಾಹಲ್
ಗಂಟೆಗೆ 140 ಕಿ.ಮೀ ವೇಗದಲ್ಲಿ ಬಂದ ಚೆಂಡು ಹಿಂದಕ್ಕೆ ಬಿದ್ದು ಕೊಹ್ಲಿಯ ಮಧ್ಯ ಮತ್ತು ಆಫ್ ಸ್ಟಂಪ್‌ಗೆ ಅಪ್ಪಳಿಸಿತು. ಏಪ್ರಿಲ್ 23, 2023 ರಂದು ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಟ್ರೆಂಟ್ ಬೌಲ್ಟ್ ಎಸೆತಕ್ಕೆ ಗೋಲ್ಡನ್ ಡಕ್ ಆಗಿದ್ದರು. ಇದೀಗ 1,110 ದಿನಗಳ ಅಂತರ ಶೂನ್ಯಕ್ಕೆ ವಿಕೆಟ್ ಕಳೆದುಕೊಂಡರು.
2017 ರಂದು ಕೋಲ್ಕತ್ತಾದಲ್ಲಿ ಕೆಕೆಆರ್ ವಿರುದ್ಧ (3301 ದಿನಗಳ ಹಿಂದೆ) ಡಕ್ ಔಟ್ ಆದ ನಂತರ, ಐಪಿಎಲ್ ಪಂದ್ಯದ ರನ್ ಚೇಸ್‌ನಲ್ಲಿ ಕೊಹ್ಲಿ ದಾಖಲಿಸಿದ ಮೊದಲ ಶೂನ್ಯವಾಗಿದೆ. ಐಪಿಎಲ್‌ನಲ್ಲಿ ಕೊಹ್ಲಿಯ 11 ನೇ ಶೂನ್ಯ ಸಂಪಾದನೆ ಇದಾಗಿದೆ. ಬೆಂಗಳೂರು ಮೂಲದ ಫ್ರಾಂಚೈಸಿಗಾಗಿ ಐಪಿಎಲ್‌ನಲ್ಲಿ ಅತಿ ಹೆಚ್ಚು ಶೂನ್ಯ ಸಂಪಾದನೆ ಮಾಡಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಅವರು ಅಗ್ರಸ್ಥಾನದಲ್ಲಿದ್ದಾರೆ. ಆರ್‌ಸಿಬಿ ಪರ ಕೊಹ್ಲಿ 277 ಐಪಿಎಲ್ ಪಂದ್ಯಗಳಲ್ಲಿ 11 ಬಾರಿ ಶೂನ್ಯ ಸಂಪಾದನೆ ಮಾಡಿದ್ದರೆ, ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ಎಬಿ ಡಿವಿಲಿಯರ್ಸ್ ಕ್ರಮವಾಗಿ 52 ಮತ್ತು 156 ಐಪಿಎಲ್ ಪಂದ್ಯಗಳಲ್ಲಿ ತಲಾ 8 ಬಾರಿ ಶೂನ್ಯ ಸಂಪಾದನೆ ಮಾಡಿ ಎರಡನೇ ಸ್ಥಾನದಲ್ಲಿದ್ದಾರೆ.
ಸವಾಲಿನ ಗುರಿ ಬೆನ್ನಟ್ಟಿದ ಆರ್‌ಸಿಬಿ ತಂಡ ಆರಂಭಿಕ ಹಂತದಲ್ಲೇ ಆಘಾತ ಎದುರಿಸಿತು. ಆರಂಭಿಕರಾದ ಜೇಕಬ್ ಬೆಥೆಲ್ (4) ಹಾಗೂ ವಿರಾಟ್ ಕೊಹ್ಲಿ (0) ವಿಕೆಟ್ ಕಳೆದುಕೊಂಡಿತು. ಇವರಿಬ್ಬರು ಔಟಾದಾಗ ತಂಡದ ಮೊತ್ತ ಕೇವಲ 9. ಸಂಕಷ್ಟದಲ್ಲಿದ್ದ ಆರ್‌ಸಿಬಿ ತಂಡಕ್ಕೆ ನಾಯಕ ರಜತ್ ಪಾಟೀದಾರ್ (61) ಹಾಗೂ ದೇವದತ್ತ ಪಡಿಕ್ಕಲ್ (34) ಮೂರನೇ ವಿಕೆಟ್‌ಗೆ 95 ರನ್ ಜೊತೆಯಾಟವಾಡಿ ಆಸರೆಯಾದರು. ಕೊನೆಯಲ್ಲಿ ಟಿಮ್ ಡೇವಿಡ್ (40), ಕೃಣಾಲ್ ಪಾಂಡ್ಯ (ಔಟಾಗದೇ 28) ಹಾಗೂ ರೊಮಾರಿಯೊ ಶೆಫರ್ಡ್ (ಔಟಾಗದೇ 23) ಹೋರಾಟ ತೋರಿದರಾದರೂ ಗೆಲುವು ಕೈಗೆಟುಕಲಿಲ್ಲ.