ತಿರುವನಂತಪುರಂ, ಸೆ.26: ಕಳೆದ ಎರಡು ದಶಕಗಳಲ್ಲಿ ಏಕದಿನ ಕ್ರಿಕೆಟ್‌ನಲ್ಲಿ ಸ್ಥಿರತೆಯ ಸಂಕೇತವಾಗಿ ವಿರಾಟ್ ಕೊಹ್ಲಿ ಗುರುತಿಸಿಕೊಂಡಿದ್ದಾರೆ. ಸೆಪ್ಟೆಂಬರ್ 27, ಭಾನುವಾರದಂದು ಪ್ರಾರಂಭವಾಗಲಿರುವ ವೆಸ್ಟ್ ಇಂಡೀಸ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಭಾರತ ಆಯೋಜಿಸುತ್ತಿದ್ದು, ಈ ಸರಣಿಯ ಮೂಲಕ ಕೊಹ್ಲಿ ಮತ್ತೆ ಅಖಾಡಕ್ಕಿಳಿಯಲಿದ್ದಾರೆ.
37 ವರ್ಷದ ಕೊಹ್ಲಿ ನಿಸ್ಸಂದೇಹವಾಗಿ ಕೆರಿಬಿಯನ್ ತಂಡದ ವಿರುದ್ಧ ಅತ್ಯಂತ ಯಶಸ್ವಿ ಬ್ಯಾಟರ್‌ಗಳಲ್ಲಿ ಒಬ್ಬರಾಗಿದ್ದಾರೆ. ವಿಂಡೀಸ್ ವಿರುದ್ಧ ಅವರು ಅತ್ಯದ್ಭುತ ಅಂಕಿಅಂಶಗಳನ್ನು ಹೊಂದಿದ್ದು, ಬ್ಯಾಟಿಂಗ್ ಮೂಲಕ ಹಲವು ಸ್ಮರಣೀಯ ಸರಣಿ ಪ್ರದರ್ಶನಗಳನ್ನೂ ನೀಡಿದ್ದಾರೆ. 2018ರ ಸ್ಮರಣೀಯ ಸರಣಿಯೊಂದರಲ್ಲಿ ಇದೇ ಎದುರಾಳಿಯ ವಿರುದ್ಧ ಸತತ ಮೂರು ಶತಕಗಳನ್ನು ಬಾರಿಸಿದ್ದ ಕೊಹ್ಲಿ, ಇದೀಗ ಅಂತಹದ್ದೇ ಸಾಧನೆಯನ್ನು ಪುನರಾವರ್ತಿಸಲು ಎದುರು ನೋಡುತ್ತಿದ್ದಾರೆ.
ವಿರಾಟ್ ಕೊಹ್ಲಿ ಇದುವರೆಗೆ ವೆಸ್ಟ್ ಇಂಡೀಸ್ ವಿರುದ್ಧ 43 ಏಕದಿನ ಪಂದ್ಯಗಳನ್ನು ಆಡಿದ್ದು 2,261 ರನ್ ಬಾರಿಸಿದ್ದಾರೆ. ಇದರಲ್ಲಿ 11 ಅರ್ಧಶತಕ ಮತ್ತು 9 ಶತಕ ಒಳಗೊಂಡಿದೆ. 157* ಗರಿಷ್ಠ ವೈಯಕ್ತಿಕ ಮೊತ್ತ.
ವೆಸ್ಟ್ ಇಂಡೀಸ್ ಏಕದಿನ ಸರಣಿಯಲ್ಲಿ ರೋಹಿತ್ ಶರ್ಮ ನಿರ್ಮಿಸಬಹುದಾದ ದಾಖಲೆಗಳು
ಏಕದಿನ ಕ್ರಿಕೆಟ್‌ನಲ್ಲಿ 15,000 ರನ್‌ಗಳ ಗಮನಾರ್ಹ ಮೈಲಿಗಲ್ಲನ್ನು ತಲುಪಲು ಕೊಹ್ಲಿ ಈಗ ಕೇವಲ 59 ರನ್‌ಗಳ ಅಂತರದಲ್ಲಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಲ್ಲಿ ವಿರಾಟ್ ಕೊಹ್ಲಿ ಮುರಿಯಬಹುದಾದ ದಾಖಲೆಗಳ ಪಟ್ಟಿ ಇಲ್ಲಿದೆ.
ಕೊಹ್ಲಿ 59 ರನ್ ಬಾರಿಸಿದರೆ ಏಕದಿನ ಕ್ರಿಕೆಟ್‌ನಲ್ಲಿ (ODI) ಅತಿ ವೇಗವಾಗಿ 15,000 ರನ್ ಪೂರೈಸಿದ ಆಟಗಾರನಾಗಲಿದ್ದಾರೆ.
ಸರಣಿಯಲ್ಲಿ 2 ಶತಕ ಬಾರಿಸಿದರೆ 'ಲಿಸ್ಟ್ ಎ' (List A) ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕಗಳನ್ನು ಗಳಿಸಿದ ಆಟಗಾರ ಎನಿಸಿಕೊಳ್ಳಲಿದ್ದಾರೆ.
ವೆಸ್ಟ್ ಇಂಡೀಸ್ ವಿರುದ್ಧ ಅತಿ ಹೆಚ್ಚು ಅಂತಾರಾಷ್ಟ್ರೀಯ ಶತಕಗಳನ್ನು ದಾಖಲಿಸಲು 2 ಶತಕಗಳ ಅಗತ್ಯ.
ತವರಿನಲ್ಲಿ ಅತಿ ಹೆಚ್ಚು ಅಂತಾರಾಷ್ಟ್ರೀಯ ಶತಕ ಬಾರಿಸಿದ ದಾಖಲೆ ನಿರ್ಮಾಣಕ್ಕೆ 2 ಶತಕ ಬೇಕಿದೆ.
110 ರನ್ ಕಲೆಹಾಕಿದರೆ ತವರಿನಲ್ಲಿ ಅತಿ ಹೆಚ್ಚು ಏಕದಿನ ರನ್ ಗಳಿಸಿದ ಆಟಗಾರನಾಗಲಿದ್ದಾರೆ.
ವೆಸ್ಟ್ ಇಂಡೀಸ್ ವಿರುದ್ಧ ಅತಿ ಹೆಚ್ಚು ಅಂತಾರಾಷ್ಟ್ರೀಯ ರನ್ ಗಳಿಸಿದ ಆಟಗಾರನಾಗಲು 271 ರನ್ ಬೇಕಿದೆ.
ಮೂರನೇ ಕ್ರಮಾಂಕದಲ್ಲಿ 13,000 ಏಕದಿನ ರನ್ ಗಳಿಸಿದ ಮೊದಲ ಆಟಗಾರನಾಗಲು 180 ರನ್‌ಗಳ ಅಗತ್ಯ.
ಏಷ್ಯಾದಲ್ಲಿ 17,000 ಅಂತಾರಾಷ್ಟ್ರೀಯ ರನ್‌ಗಳ ಮೈಲಿಗಲ್ಲು ತಲುಪಲು 215 ರನ್ ಬೇಕಿದೆ.