ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Asia Cup 2025: ಟೆಸ್ಟ್‌ ಮುಗಿಯಿತು ಇನ್ನೂ ಟೀಮ್‌ ಇಂಡಿಯಾಕ್ಕೆ ಏಷ್ಯಾ ಕಪ್‌ ಸವಾಲು

ಈ ಬಾರಿ ಟೂರ್ನಿ ಟಿ20 ಸ್ವರೂಪದಲ್ಲಿ ನಡೆಯಲಿರುವ ಕಾರಣ ರೋಹಿತ್‌ ಶರ್ಮ, ವಿರಾಟ್‌ ಕೊಹ್ಲಿ ಮತ್ತು ರವೀಂದ್ರ ಜಡೇಜಾ ಆಟ ಕಣ್ತುಂಬಿಕೊಳ್ಳಲು ಸಾಧ್ಯವಿಲ್ಲ. ಏಕೆಂದರೆ ಅವರು ಈಗಾಗಲೇ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ.

ಟೆಸ್ಟ್‌ ಮುಗಿಯಿತು ಇನ್ನೂ ಟೀಮ್‌ ಇಂಡಿಯಾಕ್ಕೆ ಏಷ್ಯಾ ಕಪ್‌ ಸವಾಲು

Abhilash BC Abhilash BC Aug 5, 2025 10:50 AM

ನವದೆಹಲಿ: ಭಾರೀ ಕುತೂಹಲ, ಹಾಗೂ ಸ್ಮರಣೀಯ ಕ್ಷಣಗಳಿಗೆ ಸಾಕ್ಷಿಯಾದ ಈ ಬಾರಿಯ ತೆಂಡುಲ್ಕರ್‌-ಆ್ಯಂಡರ್‌ಸನ್‌ ಸರಣಿ ಅಷ್ಟೇ ರೋಚಕವಾಗಿ ಕೊನೆಗೊಂಡಿದೆ. ಸರಣಿ ಸೋಲಿನ ಭೀತಿಯಲ್ಲಿದ್ದ ಭಾರತ ತಂಡ ಕೊನೆಗೂ ದಿಟ್ಟ ಪ್ರದರ್ಶನ ತೋರುವ ಮೂಲಕ 5 ಪಂದ್ಯಗಳ ಸರಣಿ 2-2ರಲ್ಲಿ ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ಸು ಕಂಡಿತ್ತು. ಇದೀಗ ಒಂದು ತಿಂಗಳ ವಿಶ್ರಾಂತಿ ಪಡೆಯಲಿರುವ ಆಟಗಾರರು ಏಷ್ಯಾ ಕಪ್‌ ಕ್ರಿಕೆಟ್‌ ಟೂರ್ನಿಗೆ ಸಜ್ಜಾಗಲಿದ್ದಾರೆ.

ಏಷ್ಯಾದ ಪ್ರತಿಷ್ಠಿತ ತಂಡಗಳ ನಡುವೆ ನಡೆಯುವ ಈ ಟೂರ್ನಿಯ ಪಂದ್ಯಾವಳಿ ಸೆಪ್ಟೆಂಬರ್ 9 ರಿಂದ 28 ರವರೆಗೆ ದುಬೈ ಮತ್ತು ಅಬುಧಾಬಿಯಲ್ಲಿ ನಡೆಯಲಿದೆ. ಒಟ್ಟು 19 ಪಂದ್ಯಗಳು ನಡೆಯಲಿದೆ.

ಭಾರತದ ಲೀಗ್‌ ಪಂದ್ಯಗಳು ಕ್ರಮವಾಗಿ ಸೆ. 10, 14 ಹಾಗೂ 19ರಂದು ನಿಗದಿಯಾಗಿದೆ. ಈ ದಿನಗಳಲ್ಲಿ ಯುಎಇ, ಪಾಕಿಸ್ತಾನ ಹಾಗೂ ಓಮಾನ್‌ ತಂಡಗಳನ್ನು ಭಾರತ ಎದುರಿಸಲಿದೆ. ಭಾರತ ಹಾಗೂ ಪಾಕಿಸ್ತಾನ ತಂಡಗಳ ತಮ್ಮ ಗ್ರೂಪ್‌ನಲ್ಲಿ ಮೊದಲ ಎರಡು ಅಗ್ರ ತಂಡಗಳಾಗುವುದು ಬಹುತೇಕ ಖಚಿತವಾಗಿದ್ದು, ಸೂಪರ್‌-4 ಸ್ಟೇಜ್‌ನಲ್ಲಿ ಸೆ. 21ರಂದು ಮುಖಾಮುಖಿಯಾಗಲಿದೆ. ಭಾರತದ ಸೂಪರ್‌-4 ಸ್ಟೇಜ್‌ ಹಂತದ ಉಳಿದ ಪಂದ್ಯಗಳು ಲೀಗ್‌ ಹಂತದಲ್ಲಿ ತಂಡ ಯಾವ ಸ್ಥಾನ ಪಡೆಯಲಿದೆ ಎನ್ನುವ ಆಧಾರದ ಮೇಲೆ ನಿರ್ಧಾರವಾಗಲಿದೆ.

ಈ ಬಾರಿ ಟೂರ್ನಿ ಟಿ20 ಸ್ವರೂಪದಲ್ಲಿ ನಡೆಯಲಿರುವ ಕಾರಣ ರೋಹಿತ್‌ ಶರ್ಮ, ವಿರಾಟ್‌ ಕೊಹ್ಲಿ ಮತ್ತು ರವೀಂದ್ರ ಜಡೇಜಾ ಆಟ ಕಣ್ತುಂಬಿಕೊಳ್ಳಲು ಸಾಧ್ಯವಿಲ್ಲ. ಏಕೆಂದರೆ ಅವರು ಈಗಾಗಲೇ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಹೀಗಾಗಿ ಯುವ ಆಟಗಾರರು ಈ ಬಾರಿ ತಂಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ತಂಡದ ಆಯ್ಕೆ ಆಗಸ್ಟ್‌ ಅಂತ್ಯದ ವೇಳೆಗೆ ಪ್ರಕಟಗೊಳ್ಳುವ ಸಾಧ್ಯತೆ ಇದೆ. ರಿಷಭ್‌ ಪಂತ್‌ ಗಾಯಗೊಂಡಿರುವ ಕಾರಣ ವಿಕೆಟ್‌ ಕೀಪಿಂಗ್‌ ಹೊಣೆ ಕನ್ನಡಿಗ ಕೆ.ಲ್‌ ರಾಹುಲ್‌ ಪಾಲಾಗಲಿದೆಯಾ ಅಥವಾ ಕೇರಳ ಸಂಜು ಸ್ಯಾಮ್ಸನ್‌ಗೆ ಒಲಿಯಲಿದೆಯಾ ಎಂದು ಕಾದು ನೋಡಬೇಕಿದೆ.

8 ತಂಡಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. 'ಎ' ಗುಂಪಿನಲ್ಲಿ ಭಾರತ, ಪಾಕಿಸ್ತಾನ, ಯುಎಇ, ಮತ್ತು ಒಮಾನ್ ತಂಡಗಳಿದ್ದರೆ, 'ಬಿ' ಗುಂಪಿನಲ್ಲಿ ಶ್ರೀಲಂಕಾ, ಬಾಂಗ್ಲಾದೇಶ, ಅಫ್ಘಾನಿಸ್ತಾನ, ಮತ್ತು ಹಾಂಗ್ ಕಾಂಗ್ ಕಾಣಿಸಿಕೊಂಡಿದೆ.