ಮುಂಬಯಿ, ಡಿ.25: ಟೀಮ್ ಇಂಡಿಯಾದ ಬ್ಯಾಟಿಂಗ್ ಸೂಪರ್‌ಸ್ಟಾರ್ ವಿರಾಟ್ ಕೊಹ್ಲಿ(Virat Kohli) ಮತ್ತು ರೋಹಿತ್ ಶರ್ಮ(Rohit Sharma) ಬುಧವಾರ ನಡೆದಿದ್ದ ವಿಜಯ್ ಹಜಾರೆ ಟ್ರೋಫಿ(Vijay Hazare Trophy)ಯ ಲೀಗ್ ಪಂದ್ಯದಲ್ಲಿ ಭರ್ಜರಿ ಶತಕ ಬಾರಿಸಿ ಮಿಂಚಿದ್ದರು. ಬೆಂಗಳೂರಿನಲ್ಲಿ ನಡೆದಿದ್ದ ಆಂಧ್ರಪ್ರದೇಶದ ವಿರುದ್ಧದ ಪಂದ್ಯದಲ್ಲಿ ಆಡುವ ಮೂಲಕ ಕೊಹ್ಲಿ 15 ವರ್ಷಗಳ ನಂತರ ದೆಹಲಿ ಪರ ತಮ್ಮ ಮೊದಲ ವಿಜಯ್ ಹಜಾರೆ ಟ್ರೋಫಿ ಪಂದ್ಯವನ್ನು ಆಡಿದ್ದರು.
ವಿಶ್ವದ ನಂ. 1 ಏಕದಿನ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ತಮ್ಮ ದೇಶೀಯ ತಂಡವಾದ ಮುಂಬೈ ಪರ ವಿಜಯ್ ಹಜಾರೆ ಟ್ರೋಫಿ ಪಂದ್ಯವನ್ನು ಆಡಿದ್ದರು. 38 ವರ್ಷದ ರೋಹಿತ್ ಕೇವಲ 94 ಎಸೆತಗಳಲ್ಲಿ 155 ರನ್‌ಗಳನ್ನು ಗಳಿಸಿದರು ಮತ್ತು 18 ಬೌಂಡರಿಗಳು ಮತ್ತು 9 ಸಿಕ್ಸರ್‌ಗಳನ್ನು ಬಾರಿಸಿದರು. ಕೊಹ್ಲಿ131 ರನ್ ಬಾರಿಸಿದ್ದರು.
ಹಲವು ವರ್ಷಗಳ ನಂತರ ಮೊದಲ ವಿಜಯ್ ಹಜಾರೆ ಟ್ರೋಫಿಯಲ್ಲಿ ಸುದ್ದಿ ಮಾಡಿದ ನಂತರ, ರೋಹಿತ್ ಮತ್ತು ಕೊಹ್ಲಿ ಕ್ರಮವಾಗಿ ಮುಂಬೈ ಮತ್ತು ದೆಹಲಿ ಪರ ಕನಿಷ್ಠ ಒಂದು ಪಂದ್ಯವನ್ನಾಡಲಿದ್ದಾರೆ. ಈ ಪಂದ್ಯ ಯಾವಾಗ ಎಂಬ ಅಭಿಮಾನಿಗಳ ಪ್ರಶ್ನೆಗೆ ಉತ್ತರ ಇಲ್ಲಿದೆ.
ಡಿಸೆಂಬರ್ 26 ರಂದು ಸವಾಯಿ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ಉತ್ತರಾಖಂಡ ವಿರುದ್ಧ ನಡೆಯಲಿರುವ ಮುಂಬೈನ ಎರಡನೇ ಎಲೈಟ್ ಗ್ರೂಪ್ ಸಿ ಪಂದ್ಯದಲ್ಲೂ ರೋಹಿತ್ ಆಡಲಿದ್ದಾರೆ ಎಂದು ವರದಿಯಾಗಿದೆ.
ಜಾಂಟಿ ರೋಡ್ಸ್ ವಿಶ್ವ ದಾಖಲೆ ಮುರಿದ 24 ವರ್ಷದ ವಿಘ್ನೇಶ್ ಪುತ್ತೂರು
ಮತ್ತೊಂದೆಡೆ, ವಿಜಯ್ ಹಜಾರೆ ಟ್ರೋಫಿಯಲ್ಲಿ ಕೊಹ್ಲಿ ಎಷ್ಟು ಪಂದ್ಯಗಳನ್ನು ಆಡುತ್ತಾರೆ ಎಂಬುದರ ಕುರಿತು ಅಧಿಕೃತ ಸ್ಪಷ್ಟತೆ ಇಲ್ಲ. ಸದ್ಯ ಅವರು ಬೆಂಗಳೂರಿನಲ್ಲಿದ್ದಾರೆ ಮತ್ತು ಬಿಸಿಸಿಐನ ಸೆಂಟರ್ ಆಫ್ ಎಕ್ಸಲೆನ್ಸ್ (CoE) ನಲ್ಲಿ ಶುಕ್ರವಾರ ಗುಜರಾತ್ ವಿರುದ್ಧ ದೆಹಲಿಯ ಎರಡನೇ ಎಲೈಟ್ ಗ್ರೂಪ್ ಡಿ ಪಂದ್ಯವನ್ನು ಆಡುವ ನಿರೀಕ್ಷೆಯಿದೆ. ದೆಹಲಿಯಂತೆಯೇ, ಗುಜರಾತ್ ಕೂಡ ಬುಧವಾರ ಆಲೂರಿನ ಕೆಎಸ್‌ಸಿಎ ಕ್ರಿಕೆಟ್ (2) ಮೈದಾನದಲ್ಲಿ ನಡೆದ ವಿಜಯ್ ಹಜಾರೆ ಟ್ರೋಫಿಯ ಮೊದಲ ಪಂದ್ಯದಲ್ಲಿ ಸರ್ವಿಸಸ್ ತಂಡವನ್ನು 8 ವಿಕೆಟ್‌ಗಳಿಂದ ಸೋಲಿಸಿತ್ತು.
ಜಾರ್ಖಂಡ್ ತಂಡ ಬುಧವಾರ ಒಟ್ಟು 412 ರನ್ ಗಳಿಸಿದ್ದರೂ ಸೋಲನ್ನು ಅನುಭವಿಸಿತ್ತು. ಇಶಾನ್ ಕಿಶನ್ ಪಡೆ ತನ್ನ ಎರಡನೇ ಪಂದ್ಯದಲ್ಲಿ ರಾಜಸ್ಥಾನವನ್ನು ಎದುರಿಸಲಿದೆ. ರಾಜಸ್ಥಾನ ಮತ್ತು ಜಾರ್ಖಂಡ್ ನಡುವಿನ ಪಂದ್ಯವು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ.