ಲಕ್ನೋ, ಎ.1: ಕಳೆದ ಎರಡು ಋತುಗಳಲ್ಲಿ ಗಾಯಗಳಿಂದಾಗಿ ಹಿನ್ನಡೆ ಅನುಭವಿಸಿದ್ದ ಮಯಾಂಕ್ ಯಾದವ್(Mayank Yadav) ಈ ಬಾರಿಯ ಐಪಿಎಲ್(IPL 2026)ನಲ್ಲಿ ಆಡುವ ನಿರೀಕ್ಷೆಯಲ್ಲಿದ್ದಾರೆ. ಲಕ್ನೋ ಸೂಪರ್ ಜೈಂಟ್ಸ್(LSG vs DC) ತಂಡವು ಅವರ ಫಿಟ್ನೆಸ್ ಬಗ್ಗೆ ಹೆಚ್ಚಿನ ಗಮನ ಹರಿಸಿದೆ. 2024 ರಲ್ಲಿ 150 ಕಿಮೀ ವೇಗದ ಎಸೆತಗಳ ಮೂಲಕ ಕ್ರಿಕೆಟ್ ಜಗತ್ತನ್ನು ಬೆರಗುಗೊಳಿಸಿದ್ದ ಮಯಾಂಕ್ ಗಾಯದ ಸಮಸ್ಯೆಯಿಂದ ಬಳಲಿದ್ದರು. ಎರಡು ಋತುಗಳಲ್ಲಿ ಕೇವಲ ಆರು ಪಂದ್ಯಗಳನ್ನು ಮಾತ್ರ ಆಡಿದ್ದಾರೆ. ಬೆನ್ನಿನ ಗಾಯಕ್ಕೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಅವರು ಪುನರ್ವಸತಿಗಾಗಿ ಬಿಸಿಸಿಐ ಸಿಒಇಯಲ್ಲಿ ಕೆಲಸ ಮಾಡಿದ್ದರು. ಇದೀಗ ಅವರು ಇಂದಿನ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಆಡುವ ಬಗ್ಗೆ ಲಕ್ನೋ ತಂಡದ ಕೋಚ್ ಜಸ್ಟಿನ್ ಲ್ಯಾಂಗರ್(Justin Langer) ಮಾಹಿತಿ ನೀಡಿದ್ದಾರೆ.
ಪಂದ್ಯಪೂರ್ವ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಲ್ಯಾಂಗರ್, ಮಾಯಾಂಕ್ ಸಂಪೂರ್ಣವಾಗಿ ಫಿಟ್ ಆಗಿದ್ದು, ಕ್ಯಾಪಿಟಲ್ಸ್ ವಿರುದ್ಧದ ಎಲ್‌ಎಸ್‌ಜಿಯ ಆರಂಭಿಕ ಪಂದ್ಯದಲ್ಲಿ ಆಡಲಿದ್ದಾರೆ. ಮಾಯಾಂಕ್ ಯಾದವ್ ಜತೆ ನಮನ್ ತಿವಾರಿಯೂ ಫಿಟ್ ಆಗಿದ್ದಾರೆ. ಅವರಿಬ್ಬರೂ ಬಹಳ ರೋಮಾಂಚಕಾರಿ ಆಟಗಾರರು ಮತ್ತು ಅವರಿಗೆ ದೊಡ್ಡ ಭವಿಷ್ಯವಿದೆ" ಎಂದು ಲ್ಯಾಂಗರ್ ಹೇಳಿದರು.
"ಈ ಟೂರ್ನಮೆಂಟ್‌ನಲ್ಲಿ ನಾವು ಹಿಂದೆಂದೂ ಹೊಂದಿರದ ಸುಂದರವಾದ ವಿಷಯವೆಂದರೆ, ನಮ್ಮಲ್ಲಿ ಆ ಇಬ್ಬರು ಯುವ ಬೌಲರ್‌ಗಳು ಮಾತ್ರವಲ್ಲ, ಮೊಹ್ಸಿನ್ ಖಾನ್, ಆವೇಶ್ ಖಾನ್, ಮೊಹಮ್ಮದ್ ಶಮಿ, ಆಕಾಶ್ ಸಿಂಗ್, ಆನ್ರಿಚ್ ನೋರ್ಜೆ ಮತ್ತು ಅರ್ಜುನ್ ತೆಂಡೂಲ್ಕರ್ ಅವರಂತಹ ಬೌಲರ್‌ಗಳು ಇದ್ದಾರೆ. ಆಯ್ಕೆಯಾಗಲು ಯೋಗ್ಯರಾದ ಆಟಗಾರರು, ವೇಗದ ಬೌಲರ್‌ಗಳು ನಮ್ಮಲ್ಲಿದ್ದಾರೆ" ಎಂದು ಲ್ಯಾಂಗರ್ ಹೇಳಿದರು.
PBKS vs GT: ಚೊಚ್ಚಲ ಐಪಿಎಲ್ ಪಂದ್ಯದಲ್ಲೇ ಅರ್ಧಶತಕ ಬಾರಿಸಿದ ಕೂಪರ್ ಕೊನೊಲಿ ಯಾರು?
ಒಬ್ಬ ಕೋಚ್ ಆಗಿ ತಾನು ನಿಭಾಯಿಸುವ ಒತ್ತಡದ ಬಗ್ಗೆಯೂ ಲ್ಯಾಂಗರ್ ಮಾತನಾಡುತ್ತಾ, 30 ವರ್ಷಗಳಿಂದ ಅದಕ್ಕೆ ಒಗ್ಗಿಕೊಂಡಿದ್ದೇನೆ ಎಂದು ಹೇಳಿದರು. "ನನ್ನ ಮೇಲೆ 30 ವರ್ಷಗಳಿಂದ ಒತ್ತಡವಿತ್ತು. ನಾನು ಬ್ಯಾಟಿಂಗ್ ಮಾಡಿದಾಗಲೆಲ್ಲಾ ನನ್ನ ಮೇಲೆ ಒತ್ತಡವಿತ್ತು. ನಾನು ಒಂದು ತಂಡಕ್ಕೆ ತರಬೇತಿ ನೀಡಿದಾಗಲೆಲ್ಲಾ ನನ್ನ ಮೇಲೆ ಒತ್ತಡವಿತ್ತು. ನನಗೆ ಒತ್ತಡ ಇಷ್ಟ, ಮತ್ತು ಒತ್ತಡ ಇರಬೇಕು. 30 ವರ್ಷಗಳಲ್ಲಿ ಅದು ಯಶಸ್ವಿಯಾಗಿದೆ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ" ಎಂದು ಲ್ಯಾಂಗರ್ ಹೇಳಿದರು.
ತಂಡದ ಬ್ಯಾಟಿಂಗ್ ವಿಭಾಗವು ಉತ್ತಮವಾಗಿದೆ. ಮಿಚೆಲ್ ಮಾರ್ಷ್ ಮತ್ತು ಏಡನ್ ಮರ್ಕರಂ ಅವರಂತಹ ಸ್ಫೋಟಕ ಶೈಲಿಯ ಬ್ಯಾಟರ್‌ಗಳ ಬಲ ತಂಡಕ್ಕೆ ಇದೆ. ಅವರಿಬ್ಬರೂ ಇನಿಂಗ್ಸ್ ಆರಂಭಿಸಲಿದ್ದಾರೆ. ಹೋದ ವರ್ಷ ಬಹುತೇಕ ಪಂದ್ಯಗಳಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಪಂತ್ ಆಡಿದ್ದರು. ಆದರೆ ಕೊನೆಯ ಪಂದ್ಯದಲ್ಲಿ ಮೂರನೇ ಕ್ರಮಾಂಕದಲ್ಲಿ ಆಡಿ ನೂರು ರನ್ ಗಳಿಸಿದ್ದರು. ಆದ್ದರಿಂದ ಅವರು ಈ ಸಲ ಮೂರನೇ ಕ್ರಮಾಂಕದಲ್ಲಿ ಆಡುವುದು ಬಹುತೇಕ ಖಚಿತ. ನಾಲ್ಕನೇ ಕ್ರಮಾಂಕದಲ್ಲಿ ನಿಕೊಲಸ್ ಪೂರನ್ ಇದ್ದಾರೆ.