ಮುಂಬಯಿ: ದಕ್ಷಿಣ ಆಫ್ರಿಕಾ ವಿರುದ್ಧದ ನಿರ್ಣಾಯಕ ವೈಟ್-ಬಾಲ್ ಸರಣಿಗೂ(IND vs SA odi series) ಮುನ್ನ ಭಾರತ ರಾಷ್ಟ್ರೀಯ ಕ್ರಿಕೆಟ್ ತಂಡವು ನಾಯಕತ್ವದ ಸಮಸ್ಯೆಯನ್ನು ಎದುರಿಸುತ್ತಿದೆ. ಭಾರತದ ನಾಯಕ ಶುಭಮನ್ ಗಿಲ್ ಕುತ್ತಿಗೆ ನೋವಿನಿಂದಾಗಿ ದಕ್ಷಿಣ ಆಫ್ರಿಕಾ(IND vs SA) ವಿರುದ್ಧದ ಮೊದಲ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದಾರೆ ಮತ್ತು ಎರಡನೇ ಟೆಸ್ಟ್ ಪಂದ್ಯವನ್ನೂ ತಪ್ಪಿಸಿಕೊಳ್ಳುವ ಸಾಧ್ಯತೆ ಇದೆ.
ನವೆಂಬರ್ 22 ರಿಂದ ಪ್ರಾರಂಭವಾಗುವ ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಮತ್ತು ಅಂತಿಮ ಟೆಸ್ಟ್ ಪಂದ್ಯಕ್ಕೆ ಶುಭಮನ್ ಗಿಲ್ ತಂಡದೊಂದಿಗೆ ಗುವಾಹಟಿಗೆ ಪ್ರಯಾಣಿಸುವುದಿಲ್ಲ ಎಂದು ಹೇಳಲಾಗುತ್ತಿದೆ. ಗಿಲ್ ಅವರ ಫಿಟ್ನೆಸ್ ಬಗ್ಗೆ ಕಳವಳಗಳ ನಡುವೆ ಯುವ ಆಲ್‌ರೌಂಡರ್ ನಿತೀಶ್ ಕುಮಾರ್ ರೆಡ್ಡಿ ಅವರನ್ನು ಸಹ ತಂಡಕ್ಕೆ ಕರೆಸಿಕೊಳ್ಳಲಾಗಿದೆ.
ಆದಾಗ್ಯೂ, ಎರಡನೇ ಟೆಸ್ಟ್ ಇನ್ನೂ ಗುವಾಹಟಿಯಲ್ಲಿ ಆರಂಭವಾಗಿಲ್ಲ, ಆದರೆ ಗಮನವು ಈಗಾಗಲೇ ದಕ್ಷಿಣ ಆಫ್ರಿಕಾ ವಿರುದ್ಧದ ಮುಂಬರುವ ಮೂರು ಪಂದ್ಯಗಳ ಏಕದಿನ ಸರಣಿಯತ್ತ ಸಾಗಿದ್ದು, ಶೀಘ್ರದಲ್ಲೇ ತಂಡವನ್ನು ಪ್ರಕಟಿಸಲಾಗುವುದು. ಮೊದಲ ಏಕದಿನ ಪಂದ್ಯವು ನವೆಂಬರ್ 30 ರಂದು ರಾಂಚಿಯಲ್ಲಿ ನಡೆಯಲಿದೆ. ಉಳಿದ ಎರಡು ಪಂದ್ಯಗಳು ಕ್ರಮವಾಗಿ ಡಿಸೆಂಬರ್ 3 ರಂದು ರಾಯ್‌ಪುರದಲ್ಲಿ ಮತ್ತು ಡಿಸೆಂಬರ್ 6 ರಂದು ವಿಶಾಖಪಟ್ಟಣದಲ್ಲಿ ನಡೆಯಲಿವೆ.
ಏಕದಿನ ಸರಣಿಯ ನಂತರ, ಭಾರತ ಮತ್ತು ದಕ್ಷಿಣ ಆಫ್ರಿಕಾ ಡಿಸೆಂಬರ್ 9 ರಿಂದ ಡಿಸೆಂಬರ್ 19 ರವರೆಗೆ ಕಟಕ್, ನ್ಯೂ ಚಂಡೀಗಢ, ಧರ್ಮಶಾಲಾ, ಲಕ್ನೋ ಮತ್ತು ಅಹಮದಾಬಾದ್‌ನಲ್ಲಿ ಐದು ಪಂದ್ಯಗಳ ಟಿ20 ಸರಣಿಯನ್ನು ಆಡಲಿವೆ. ಆದಾಗ್ಯೂ, ಏಕದಿನ ಸರಣಿಗೆ ಭಾರತದ ನಾಯಕತ್ವದ ಯೋಜನೆಗಳು ಅನಿಶ್ಚಿತವಾಗಿಯೇ ಉಳಿದಿವೆ.
ಇದನ್ನೂ ಓದಿ IND vs SA: ಗಾಯಳು ಶುಭಮನ್ ಗಿಲ್ ಬದಲಿಗೆ ಮತ್ತೆ ತಂಡ ಸೇರಿದ ನಿತೀಶ್ ರೆಡ್ಡಿ
ನಾಯಕ ಶುಭಮನ್ ಗಿಲ್ ಏಕದಿನ ಸರಣಿಯಿಂದ ಹೊರಗುಳಿಯುವ ಸಾಧ್ಯತೆಯಿದೆ. ಅತ್ತ ಉಪನಾಯಕ ಶ್ರೇಯಸ್ ಅಯ್ಯರ್ ಕೂಡ ಗಾಯದ ಕಾರಣದಿಂದಾಗಿ ತಂಡದಿಂದ ಹೊರಗುಳಿದಿದ್ದಾರೆ. ಇದರಿಂದಾಗಿ ನಾಯಕರ ಅನುಪಸ್ಥಿತಿಯಲ್ಲಿ ತಂಡವನ್ನು ಮುನ್ನಡೆಸಲು ಕೆಎಲ್ ರಾಹುಲ್ ಮತ್ತು ಟೆಸ್ಟ್ ಉಪನಾಯಕ ರಿಷಭ್ ಪಂತ್ ಪ್ರಮುಖ ಸ್ಪರ್ಧಿಗಳಾಗಿದ್ದಾರೆ.
ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿರುವಂತೆ, ಮುಂಬರುವ ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಕೆಎಲ್ ರಾಹುಲ್ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ವರದಿ ಮಾಡಿದೆ. ಗಾಯದ ಕಾರಣದಿಂದಾಗಿ ಆಸ್ಟ್ರೇಲಿಯಾ ಪ್ರವಾಸದಿಂದ ಹೊರಗುಳಿದಿದ್ದ ಪ್ರಮುಖ ಆಲ್‌ರೌಂಡರ್‌ಗಳಾದ ಹಾರ್ದಿಕ್ ಪಾಂಡ್ಯ ಮತ್ತು ರವೀಂದ್ರ ಜಡೇಜಾ ಕೂಡ ಏಕದಿನ ಸರಣಿಗೆ ಕಮ್‌ಬ್ಯಾಕ್ ಮಾಡುವ ನಿರೀಕ್ಚೆ ಇದೆ.