ಗುವಾಹಟಿ: ಐಸಿಸಿ ಮಹಿಳಾ ಕ್ರಿಕೆಟ್ ವಿಶ್ವಕಪ್(Women's World Cup,Guwahati, Women's ODI World Cup 2025 ) ಟೂರ್ನಿಯ ಭಾರತ ಮತ್ತು ಶ್ರೀಲಂಕಾ ನಡುವಣ ಉದ್ಘಾಟನ ಪಂದ್ಯ ಮಹಿಳಾ ಕ್ರಿಕೆಟ್ ವಿಶ್ವಕಪ್‌ನಲ್ಲಿ ಹೊಸ ದಾಖಲೆಯೊಂದನ್ನು ಬರೆದಿದೆ. ಬರ್ಸಾಪರಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯಕ್ಕೆ 22,843 ಅಭಿಮಾನಿಗಳು ಸೇರಿದ್ದರು, ಇದು ಮಹಿಳಾ ವಿಶ್ವಕಪ್ ಪಂದ್ಯಾವಳಿಯ ಗುಂಪು ಹಂತದಲ್ಲಿ ದಾಖಲಾದ ಇದುವರೆಗಿನ ಅತಿ ಹೆಚ್ಚು ಪ್ರೇಕ್ಷಕರ ಸಂಖ್ಯೆಯಾಗಿದೆ.
ಭಾರತ ಮಹಿಳಾ ತಂಡ ತಮ್ಮ ಅಭಿಯಾನವನ್ನು ಪ್ರಾರಂಭಿಸುವುದನ್ನು ವೀಕ್ಷಿಸಲು ಮಾತ್ರವಲ್ಲದೆ, ಗಾಯಕ ಜುಬೀನ್ ಗಾರ್ಗ್ ಅವರಿಗೆ ಗೌರವ ಸಲ್ಲಿಸಲು ಭಾರತೀಯ ಅಭಿಮಾನಿಗಳು ಇಲ್ಲಿಗೆ ಬಂದಿದ್ದರು. ಅಸ್ಸಾಂ ಮೂಲದ ಜುಬೀನ್ ಇತ್ತೀಚೆಗೆ ಸ್ಕೂಬಾ ಡೈವಿಂಗ್ ಅಪಘಾತದಲ್ಲಿ ನಿಧನರಾಗಿದ್ದರು.
ಉದ್ಘಾಟನಾ ಪಂದ್ಯವನ್ನು ವೀಕ್ಷಿಸಲು ಅಫ್ಘಾನಿಸ್ತಾನದ ನಿರಾಶ್ರಿತ ಮಹಿಳಾ ಕ್ರಿಕೆಟ್ ತಂಡ ಹಾಜರಿದ್ದರು. ತಾಲಿಬಾನ್ ಆಡಳಿತದಿಂದ ಸದ್ಯ ಆಸ್ಟ್ರೇಲಿಯಾದಲ್ಲಿ ನೆಲೆಸಿರುವ ಆಪ್ಘಾನ್ ಮಹಿಳಾ ತಂಡ(Afghanistan women's cricket team) ಕಲಿಕಾ ಪ್ರವಾಸಕ್ಕಾಗಿ ಗುವಾಹಟಿಗೆ ಭೇಟಿ ನೀಡಿತ್ತು.
ಭಾರತದ ಮಹಿಳಾ ತಂಡವು ತಮ್ಮ ಆರಂಭಿಕ ಪಂದ್ಯದಲ್ಲಿ 59 ರನ್‌ಗಳಿಂದ ಜಯಗಳಿಸಿ, ಟೂರ್ನಿಯಲ್ಲಿ ಉತ್ತಮ ಆರಂಭವನ್ನು ಪಡೆಯಿತು. ಬ್ಯಾಟಿಂಗ್‌ನಲ್ಲಿ ಕುಸಿತ ಕಂಡರೂ ಬೌಲಿಂಗ್‌ನಲ್ಲಿ ಉತ್ಕೃಷ್ಟ ಮಟ್ಟದ ಪ್ರದರ್ಶನ ತೋರುವ ಮೂಲಕ ಪಂದ್ಯವನ್ನು ಗೆದ್ದರು.
ಇದನ್ನೂ ಓದಿ INDW vs SLW: ದೀಪ್ತಿ ಆಲ್‌ರೌಂಡರ್ ಪ್ರದರ್ಶನ; ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ಭಾರತ ಗೆಲುವಿನ ಶುಭಾರಂಭ