ಕೊಲಂಬೊ, ಆ.23: ಇಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದ ಮೊದಲ ದಿನದ ಬೆಳಗಿನ ಅವಧಿಯಲ್ಲಿ ಯಶಸ್ವಿ ಜೈಸ್ವಾಲ್ ಮತ್ತು ಶ್ರೀಲಂಕಾದ ವೇಗಿ ಅಸಿತಾ ಫೆರ್ನಾಂಡೊ ನಡುವೆ ಉದ್ವಿಗ್ನ ಘರ್ಷಣೆ ಭುಗಿಲೆದ್ದಿತು. ಭಾರತದ ಮೊದಲ ಇನ್ನಿಂಗ್ಸ್‌ನ 17 ನೇ ಓವರ್‌ನಲ್ಲಿ, 53 ಎಸೆತಗಳಲ್ಲಿ 45 ರನ್ ಗಳಿಸಿದ್ದ ಜೈಸ್ವಾಲ್ ಅವರನ್ನು ಫರ್ನಾಂಡೊ ಔಟ್ ಮಾಡಿದ ಕೆಲವೇ ಕ್ಷಣಗಳಲ್ಲಿ ಈ ಘಟನೆ ನಡೆಯಿತು.
ಫೆರ್ನಾಂಡೊ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದ ಜೈಸ್ವಾಲ್ ಪೆವಿಲಿಯನ್ ಕಡೆಗೆ ಹೆಜ್ಜೆ ಹಾಕುತಿದ್ದ ವೇಳೆ ಫೆರ್ನಾಂಡೊ ಜೈಸ್ವಾಲ್‌ರನ್ನು ಕೆಣಕಿದರು. ತಾಳ್ಮೆ ಕಳೆದುಕೊಂಡ ಜೈಸ್ವಾಲ್ ಹಿಂದಿರುಗಿ ಫೆರ್ನಾಂಡೊ ಬಳಿ ಬಂದು ತಲೆಗೆ ಹೊಡೆದಂತೆ ಕಂಡುಬಂದಿತು. ಪರಿಸ್ಥಿತಿ ಇನ್ನಷ್ಟು ಹದಗೆಡುವ ಮೊದಲು ಶ್ರೀಲಂಕಾದ ಫೀಲ್ಡರ್‌ಗಳು ತಕ್ಷಣ ಮಧ್ಯ ಪ್ರವೇಶಿಸಿ ಈ ಜೋಡಿಯನ್ನು ಬೇರ್ಪಡಿಸಿದರು.
ಮೊದಲು ಬ್ಯಾಟಿಂಗ್ ಆಯ್ದುಕೊಂಡ ಭಾರತ ಮೊದಲ ಅವಧಿಯಲ್ಲೇ ಎರಡು ವಿಕೆಟ್ ಕಳೆದುಕೊಂಡಿತು. ಆರಂಭಿಕ ರಾಹುಲ್ 18ರನ್ ಗಳಿಸಿದರೆ, ಜೈಸ್ವಾಲ್ 45 ರನ್ ಗಳಿಸಿದರು. ಸದ್ಯ ಶುಭಮನ್ ಗಿಲ್ ಮತ್ತು ದೇವದತ್ತ ಪಡಿಕ್ಕಲ್ ಬ್ಯಾಟಿಂಗ್ ನಡೆಸುತ್ತಿದ್ದಾರೆ.
ಅನಾರೋಗ್ಯದಿಂದ ಸಂಪೂರ್ಣವಾಗಿ ಚೇತರಿಸಿಕೊಳ್ಳದ ಕಾರಣ ಕುಲ್‌ದೀಪ್ ಯಾದವ್ ಈ ಪಂದ್ಯದಿಂದ ಹೊರಗುಳಿದರು. ಕುಲ್‌ದೀಪ್ ಸ್ಥಾನದಲ್ಲಿ ಭಾರತ ತಂಡವು ಸರಾಂಶ್ ಜೈನ್ ಅವರಿಗೆ ಚೊಚ್ಚಲ ಪಂದ್ಯವನ್ನು ಆಡುವ ಅವಕಾಶ ನೀಡಿತು.
ಲಂಕಾ ವಿರುದ್ಧದ ಎರಡನೇ ಟೆಸ್ಟ್‌ನಲ್ಲಿ ಟಾಸ್ ಗೆದ್ದ ಭಾರತ; ಸಾರಾಂಶ್ ಜೈನ್ ಪದಾರ್ಪಣೆ
33 ವರ್ಷದ ಅವರು ದೇಶೀಯ ಕ್ರಿಕೆಟ್‌ನಲ್ಲಿ ಮಧ್ಯಪ್ರದೇಶ ಪರ ಹಲವು ವರ್ಷಗಳ ಸ್ಥಿರ ಪ್ರದರ್ಶನ ನೀಡಿದ ನಂತರ ತಮ್ಮ ಕ್ಯಾಪ್ ಅನ್ನು ಗಳಿಸಿದ್ದಾರೆ. ಇಂದೋರ್ ಕ್ರಿಕೆಟಿಗ 54 ಪ್ರಥಮ ದರ್ಜೆ ಪಂದ್ಯಗಳಲ್ಲಿ ಆಡಿದ್ದು, 31.75 ರ ಸರಾಸರಿಯಲ್ಲಿ 2,223 ರನ್ ಗಳಿಸಿದ್ದಾರೆ ಮತ್ತು 27.30 ರ ಸರಾಸರಿಯಲ್ಲಿ 188 ವಿಕೆಟ್‌ಗಳನ್ನು ಪಡೆದಿದ್ದಾರೆ. 2025-26 ರ ದುಲೀಪ್ ಟ್ರೋಫಿಯಲ್ಲಿ ಕೇಂದ್ರ ವಲಯವನ್ನು ಪ್ರತಿನಿಧಿಸುವ ಅವರು ಟೂರ್ನಮೆಂಟ್‌ನ ಆಟಗಾರರಾಗಿದ್ದರು.
ಉಭಯ ಆಡುವ ಬಳಗ
ಭಾರತ: ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ದೇವದತ್ ಪಡಿಕ್ಕಲ್, ಶುಭಮನ್ ಗಿಲ್(ನಾಯಕ), ರಿಷಭ್ ಪಂತ್(ವಿ.ಕೀ.), ರವೀಂದ್ರ ಜಡೇಜಾ, ಧ್ರುವ್ ಜುರೆಲ್, ಸರನ್ಶ್ ಜೈನ್, ಮಾನವ್ ಸುತಾರ್, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ.
ಶ್ರೀಲಂಕಾ: ಲಾಹಿರು ಉದಾರ, ಕಮಿಲ್ ಮಿಶ್ರಾ, ಪಸಿಂದು ಸೂರಿಯಬಂಡಾರ, ಕಮಿಂದು ಮೆಂಡಿಸ್, ಧನಂಜಯ ಡಿ ಸಿಲ್ವಾ(ನಾಯಕ), ಸೋನಾಲ್ ದಿನುಶಾ, ನಿರೋಶನ್ ಡಿಕ್ವೆಲ್ಲಾ(ವಿ.ಕೀ.), ಕೇಶರ ನುವಂತ, ಪ್ರಭಾತ್ ಜಯಸೂರ್ಯ, ಲಹಿರು ಕುಮಾರ, ಅಸಿತ ಫೆರ್ನಾಂಡೋ.