ನವದೆಹಲಿ, ಎ.23: ಬುಧವಾರ ಲಕ್ನೋದಲ್ಲಿ ನಡೆದ ರಾಜಸ್ಥಾನ್ ರಾಯಲ್ಸ್(RR vs LSG) ಮತ್ತು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ, 15 ವರ್ಷದ ವೈಭವ್ ಸೂರ್ಯವಂಶಿ(Vaibhav Sooryavanshi) ದಾಖಲೆಯೊಂದನ್ನು ಬರೆದಿದ್ದಾರೆ.
ಏಕಾನಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ 11 ಎಸೆತಗಳಲ್ಲಿ ಕೇವಲ 8 ರನ್ ಗಳಿಸಿದ ಸೂರ್ಯವಂಶಿ ಐಪಿಎಲ್‌ನಲ್ಲಿ 500 ರನ್ ಗಳಿಸಿದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು ಇದಕ್ಕೂ ಮುನ್ನ ಈ ದಾಖಲೆ ಪೃಥ್ವಿ ಶಾ (19 ವರ್ಷ 164 ದಿನಗಳು) ಹೆಸರಿನಲ್ಲಿತ್ತು. ಮಾಜಿ ಆರ್‌ಆರ್ ನಾಯಕ ಸಂಜು ಸ್ಯಾಮ್ಸನ್ (19 ವರ್ಷ ಮತ್ತು 195 ದಿನಗಳು) ಈಗ 500 ರನ್‌ಗಳನ್ನು ಗಳಿಸಿದ ಅತ್ಯಂತ ಕಿರಿಯ ಆಟಗಾರರ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ.
ಇದು ಮಾತ್ರವಲ್ಲದೆ ಕಡಿಮೆ ಎಸೆತಗಳಲ್ಲಿ 500 ರನ್ ಮೈಲಿಗಲ್ಲು ತಲುಪಿದ ಮೊದಲ ಆಟಗಾರ ಎಂಬ ದಾಖಲೆಯನ್ನೂ ತಮ್ಮ ಹೆಸರಿಗೆ ಬರೆದಿದ್ದಾರೆ. ಕೇವಲ 227 ಎಸೆತಗಳಲ್ಲಿ ಈ ಮೈಲಿಗಲ್ಲು ತಲುಪಿದರು. ಹಿಂದಿನ ದಾಖಲೆ ಆಸ್ಟ್ರೇಲಿಯಾದ ಗ್ಲೆನ್ ಮ್ಯಾಕ್ಸ್‌ವೆಲ್ ಹೆಸರಿನಲ್ಲಿತ್ತು.
ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ್ ರಾಯಲ್ಸ್ 6 ವಿಕೆಟ್ ನಷ್ಟದಲ್ಲಿ 159 ರನ್ ಕಲೆಹಾಕಿತು. ಜೈಸ್ವಾಲ್(22), ವೈಭವ್(8), ಧ್ರುವ್ ಜುರೆಲ್(0) ಅಬ್ಬರಿಸಲಿಲ್ಲ. ರಿಯಾನ್ ಪರಾಗ್(20), ಹೆಟ್ಮೇಯರ್(22) ಕೂಡಾ ಮಿಂಚಲು ವಿಫಲವಾದ ಬಳಿಕ ತಂಡಕ್ಕೆ ಆಪತ್ಬಾಂಧವರಾಗಿ ಮೂಡಿಬಂದ ಜಡೇಜಾ, 29 ಎಸೆತಕ್ಕೆ ಔಟಾಗದೆ 43 ರನ್ ಸಿಡಿಸಿದರು. ಫೆರಿಯೆರಾ 20, ಶುಭಂ ದುಬೆ 19 ರನ್ ಕೊಡುಗೆ ನೀಡಿದರು. ಶಮಿ, ಮೊಹ್ಸಿನ್, ಪ್ರಿನ್ಸ್ ಯಾದವ್ ತಲಾ 2 ವಿಕೆಟ್ ಕಿತ್ತರು.
ವಿಶ್ವ ಟೆಸ್ಟ್‌ನ ಉಳಿದ 9 ಪಂದ್ಯಗಳಲ್ಲಿ ಜಸ್ಪ್ರೀತ್ ಬುಮ್ರಾ ಆಡಿಸಲು ಬಿಸಿಸಿಐ ನಿರ್ಧಾರ
ಸಣ್ಣ ಗುರಿ ಬೆನ್ನಟ್ಟಿದ ಲಖನೌ ಆರಂಭದಲ್ಲೇ ಬ್ಯಾಟಿಂಗ್ ವೈಫಲ್ಯ ಅನುಭವಿಸಿತು. ಆಯುಶ್ ಬದೋನಿ, ರಿಷಭ್ ಪಂತ್, ಮಾರ್ಕ್‌ರಮ್ ರನ್ ಖಾತೆಯನ್ನೇ ತೆರೆಯಲಿಲ್ಲ. ಮಿಚೆಲ್ ಮಾರ್ಷ್(55) ಏಕಾಂಗಿ ಹೋರಾಟ ತಂಡಕ್ಕೆ ನೆರವಾಗಲಿಲ್ಲ. ಪೂರನ್ 22 ರನ್ ಗಳಿಸಲು 25 ಎಸೆತ ತೆಗೆದುಕೊಂಡರು. ತಂಡ 18 ಓವರ್‌ನಲ್ಲಿ 119ಕ್ಕೆ ಆಲೌಟಾಯಿತು.
ಸಂಕ್ಷಿಪ್ತ ಸ್ಕೋರ್
ರಾಜಸ್ಥಾನ 20 ಓವರ್‌ನಲ್ಲಿ 159/6 (ಜಡೇಜಾ ಔಟಾಗದೆ 43, ಜೈಸ್ವಾಲ್ 22, ಮೊಹ್ಸಿನ್ 2-17, ಪ್ರಿನ್ಸ್ 2-29), ಲಖನೌ 18 ಓವರ್‌ನಲ್ಲಿ 119/10 (ಮಾರ್ಷ್ 55, ಆರ್ಚರ್ 3-20, ಬ್ರಿಜೇಶ್ 2-18)