ಬೆಂಗಳೂರು: ಮನೆ ಎಂಬುದು ಕೇವಲ ನಾಲ್ಕು ಗೋಡೆಗಳ ಕಟ್ಟಡವಲ್ಲ; ಅದು ಕುಟುಂಬದ ಆರೋಗ್ಯ, ಸಂತೋಷ ಮತ್ತು ಸಮೃದ್ಧಿಯ ಕೇಂದ್ರವಾಗಿದೆ. ವಾಸ್ತುಶಾಸ್ತ್ರ ಹಾಗೂ ಜ್ಯೋತಿಷ್ಯಶಾಸ್ತ್ರದ ಪ್ರಕಾರ ಅಡುಗೆ ಮನೆ ಸಮೃದ್ಧಿಯ ಮೂಲಸ್ಥಾನವೆಂದು ಪರಿಗಣಿಸಲಾಗುತ್ತದೆ. ಅಡುಗೆ ಮನೆಯಲ್ಲಿ ಸಕಾರಾತ್ಮಕ ಶಕ್ತಿ ನೆಲೆಸಿದರೆ ಕುಟುಂಬದಲ್ಲಿ ಐಶ್ವರ್ಯ, ಆರೋಗ್ಯ ಮತ್ತು ಶಾಂತಿ ನೆಲೆಸುತ್ತವೆ ಎಂಬ ನಂಬಿಕೆ ಇದೆ. ಆದರೆ ಕೆಲವು ನಿಯಮಗಳನ್ನು ನಿರ್ಲಕ್ಷಿಸಿದರೆ ವಾಸ್ತು ದೋಷಗಳು ಉಂಟಾಗಿ ಅನೇಕ ತೊಂದರೆಗಳು ಎದುರಾಗಬಹುದು ಎಂದು ತಜ್ಞರು ಹೇಳುತ್ತಾರೆ.
ಹಾಗಾದ್ರೆ ಅಡುಗೆ ಮನೆಯಲ್ಲಿ ಯಾವ ತಪ್ಪುಗಳ್ಯ್ ಯಾವ ಸಮಸ್ಯೆಗಳಿಗೆ ಕಾರಣವಾಗುತ್ತದೆ..? ವಾಸ್ತು ಶಾಸ್ತ್ರ ಪ್ರಕಾರ ಶಕ್ತಿ ಮತ್ತು ಸಮೃದ್ಧಿಯ ಮೂಲಸ್ಥಾನ ಆಗಿರುವ ಅಡುಗೆಮನೆಯಲ್ಲಿ ಯಾವ ಕೆಲಸಗಳನ್ನು ಮಾಡಬಾರದು ? ಎಂಬುದನ್ನು ತಿಳಿದುಕೊಳ್ಳೋಣಾ ಬನ್ನಿ.
ಚಪ್ಪಲಿ ಧರಿಸುವುದು ಅಶುಭ
ವಾಸ್ತು ಪ್ರಕಾರ ಅಡುಗೆ ಮನೆ ಪವಿತ್ರ ಸ್ಥಳ. ಇಲ್ಲಿ ತಯಾರಾಗುವ ಅನ್ನವೇ ಕುಟುಂಬದ ಜೀವಾಳ. ಆದ್ದರಿಂದ ಅಡುಗೆ ಮನೆಯಲ್ಲಿ ಚಪ್ಪಲಿ ಧರಿಸಿ ಹೋಗುವುದನ್ನು ಅಶುಭಕರವೆಂದು ಪರಿಗಣಿಸಲಾಗಿದೆ. ಇದರಿಂದ ಮನೆಗೆ ನಕಾರಾತ್ಮಕ ಶಕ್ತಿ ಪ್ರವೇಶಿಸುತ್ತದೆ ಎಂಬ ನಂಬಿಕೆ ಇದೆ. ಆರ್ಥಿಕ ನಷ್ಟ, ಅನಗತ್ಯ ಖರ್ಚುಗಳು ಹಾಗೂ ಮನಶಾಂತಿಯ ಕೊರತೆ ಉಂಟಾಗಬಹುದು ಎಂದು ಹೇಳಲಾಗುತ್ತದೆ.
ಹರಿತವಾದ ವಸ್ತುಗಳು
ಅಡುಗೆ ಮನೆಯಲ್ಲಿ ಚಾಕು, ಕತ್ತರಿ ಅಥವಾ ಇತರೆ ಚೂಪಾದ ವಸ್ತುಗಳನ್ನು ಗೋಡೆಯ ಮೇಲೆ ತೂಗು ಹಾಕುವುದು ತಪ್ಪು. ಇವು ಕಲಹ, ಕೋಪ ಮತ್ತು ಅಶಾಂತಿಗೆ ಕಾರಣವಾಗಬಹುದು ಎಂದು ವಾಸ್ತು ಸೂಚಿಸುತ್ತದೆ. ಇಂತಹ ವಸ್ತುಗಳನ್ನು ಡ್ರಾಯರ್ ಅಥವಾ ಮುಚ್ಚಿದ ಕ್ಯಾಬಿನೆಟ್‌ನಲ್ಲಿ ಇಡುವುದು ಉತ್ತಮ. ಇದರಿಂದ ಮನೆಯಲ್ಲಿ ಸಮತೋಲನ ಮತ್ತು ಶಾಂತಿ ಕಾಪಾಡಬಹುದು.
ಆಹಾರದ ಮೇಲೆ ಗೌರವ ಇರಲಿ
ಆಹಾರವನ್ನು ದೇವರ ರೂಪವೆಂದು ಭಾರತೀಯ ಸಂಪ್ರದಾಯದಲ್ಲಿ ಪರಿಗಣಿಸಲಾಗಿದೆ. ಪ್ರತೀ ಬಾರಿ ಅಡುಗೆ ಮಾಡಿದ ಬಳಿಕ ಆಹಾರವನ್ನು ಶುದ್ಧ ಪಾತ್ರೆಗಳಲ್ಲಿ ಇಡುವುದು ಮುಖ್ಯ. ವಾಸ್ತು ಪ್ರಕಾರ, ಸ್ವಲ್ಪ ಅನ್ನವನ್ನು ಪ್ರತ್ಯೇಕವಾಗಿ ಇಟ್ಟು ಹಸುವಿಗೆ ನೀಡುವುದು ಶುಭಕರ. ಇದು ಸಾಧ್ಯವಾಗದಿದ್ದರೆ, ಊಟಕ್ಕೆ ಮುನ್ನ ಸ್ವಲ್ಪ ಆಹಾರವನ್ನು ಬೇರ್ಪಡಿಸಿ ಇಡುವ ಪದ್ಧತಿಯನ್ನು ಅನುಸರಿಸಬಹುದು. ಇದರಿಂದ ಹಣಕಾಸಿನ ಸ್ಥಿರತೆ ಹಾಗೂ ಆರೋಗ್ಯ ವೃದ್ಧಿಯಾಗುತ್ತದೆ ಎಂಬ ನಂಬಿಕೆ ಇದೆ.
Vastu Tips: ಮನೆಯಲ್ಲಿ ಧನ, ಸಮೃದ್ಧಿ ಹಾಗೂ ಸಕಾರಾತ್ಮಕ ಶಕ್ತಿ ಹೆಚ್ಚಾಗಬೇಕಾ..?; ಹಾಗಾದ್ರೆ ಈ ವಾಸ್ತು ನಿಯಮ ಪಾಲಿಸಿ
ಹಾಲನ್ನು ಹೀಗೆ ಇಡಿ
ಹಾಲು ಚಂದ್ರನ ಪ್ರತೀಕವಾಗಿರುವುದರಿಂದ ಅದನ್ನು ಶುದ್ಧತೆ ಮತ್ತು ಶಾಂತಿಯ ಸಂಕೇತವೆಂದು ಪರಿಗಣಿಸಲಾಗಿದೆ. ಅಡುಗೆ ಮನೆಯಲ್ಲಿ ಹಾಲನ್ನು ತೆರೆದಿಟ್ಟುಬಿಡುವುದರಿಂದ ನಕಾರಾತ್ಮಕ ಪರಿಣಾಮಗಳು ಉಂಟಾಗಬಹುದು ಎಂದು ಹೇಳಲಾಗಿದೆ. ಆದ್ದರಿಂದ ಹಾಲಿನ ಪಾತ್ರೆಯನ್ನು ಸದಾ ಮುಚ್ಚಿ ಇಡುವುದು ಒಳಿತು. ಇದು ಆರ್ಥಿಕ ಹಾಗೂ ಮಾನಸಿಕ ಸಮಸ್ಯೆಗಳನ್ನು ದೂರ ಮಾಡುತ್ತದೆ ಎಂಬ ನಂಬಿಕೆ ಇದೆ.
ಊಟ ಮಾಡುವ ದಿಕ್ಕಿನ ಮಹತ್ವ
ಅಡುಗೆ ಮನೆಯಲ್ಲಿ ಊಟ ಮಾಡುವಾಗ ದಿಕ್ಕಿನ ವಿಷಯಕ್ಕೂ ವಿಶೇಷ ಗಮನ ಕೊಡಬೇಕು. ಪಶ್ಚಿಮ ಅಥವಾ ದಕ್ಷಿಣ ದಿಕ್ಕಿನತ್ತ ಮುಖ ಮಾಡಿ ಊಟ ಮಾಡುವುದನ್ನು ಅಶುಭವೆಂದು ಪರಿಗಣಿಸಲಾಗಿದೆ. ಜೊತೆಗೆ ಅಡುಗೆ ಮನೆಯ ಮಧ್ಯಭಾಗದಲ್ಲಿ ಕುಳಿತು ಊಟ ಮಾಡಬಾರದು. ಗ್ಯಾಸ್ ಸ್ಟೋವ್ ಹೊರಗಿನಿಂದ ನೇರವಾಗಿ ಗೋಚರಿಸದಂತೆ ಇರಿಸುವುದು ಉತ್ತಮ ಎಂದು ವಾಸ್ತು ತಜ್ಞರು ಸಲಹೆ ನೀಡುತ್ತಾರೆ.
ವಾಸ್ತು ನಿಯಮಗಳು ಸಂಪ್ರದಾಯ ಮತ್ತು ನಂಬಿಕೆಗಳ ಮೇಲೆ ಆಧಾರಿತವಾಗಿದ್ದರೂ, ಅವುಗಳಲ್ಲಿ ಸ್ವಚ್ಛತೆ, ಶಿಸ್ತು ಮತ್ತು ವ್ಯವಸ್ಥಿತ ಜೀವನಶೈಲಿಗೆ ಮಹತ್ವ ನೀಡಲಾಗಿದೆ. ಅಡುಗೆ ಮನೆಯನ್ನು ಸ್ವಚ್ಛವಾಗಿಟ್ಟು, ಸರಿಯಾದ ನಿಯಮಗಳನ್ನು ಪಾಲಿಸುವುದರಿಂದ ಮನೆಗೆ ಶಾಂತಿ, ಸಮೃದ್ಧಿ ಮತ್ತು ಆರೋಗ್ಯ ವೃದ್ಧಿಯಾಗುತ್ತದೆ ಎಂಬ ನಂಬಿಕೆ ಇದೆ. ಸಣ್ಣ-ಸಣ್ಣ ಜಾಗ್ರತೆಗಳು ದೊಡ್ಡ ಸಮಸ್ಯೆಗಳನ್ನು ತಪ್ಪಿಸಬಹುದು ಎಂಬ ಸಂದೇಶವೇ ವಾಸ್ತುಶಾಸ್ತ್ರದ ಸಾರವಾಗಿದೆ.