ಬೆಂಗಳೂರು, ಮೇ 16: ಇಂಧನ ಉಳಿತಾಯಕ್ಕೆ ಪ್ರಧಾನಿ ಮೋದಿ ಕರೆ ನೀಡಿದ ಬೆನ್ನಲ್ಲೇ ಬಿಜೆಪಿ ನೇತೃತ್ವದ ಹಲವು ರಾಜ್ಯ ಸರ್ಕಾರಗಳು ಕೂಡ ಈ ನಿರ್ಧಾರವನ್ನು ಕೈಗೆತ್ತಿಕೊಂಡಿದ್ದರು. ಇದೀಗ ಪ್ರಧಾನಿ ಮೋದಿಯ (PM Narendra Modi) ಈ ಕರೆಯನ್ನು ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ (B.Y. Vijayendra) ಕೂಡ ಬೆಂಬಲಿಸಿದ್ದಾರೆ. ತಮ್ಮ ಅಧಿಕೃತ ಕಾರು ಮತ್ತು ಬೆಂಗಾವಲು ವಾಹನಗಳನ್ನು ಕಡಿಮೆ ಮಾಡಿ, ಸಾರ್ವಜನಿಕ ಸಾರಿಗೆ ವ್ಯವಸ್ಥೆಯಾದ ಮೆಟ್ರೋ ರೈಲನ್ನು ಬಳಸಿದ್ದಾರೆ. ಮೆಜೆಸ್ಟಿಕ್‌ನಿಂದ ಕೆಂಗೇರಿವರೆಗೂ ಮೆಟ್ರೋದಲ್ಲಿ ಪ್ರಯಾಣ ಮಾಡಿದ ಅವರು, ಸಾಮಾನ್ಯರಂತೆ ಕ್ಯೂನಲ್ಲಿ ನಿಂತು ಪ್ರಯಾಣಿಸಿದ್ದಾರೆ. ಇದೇ ರೀತಿ ಕುಂಬಳಗೂಡಿನ ಕಾರ್ಯಕ್ರಮಕ್ಕೂ ಮೆಟ್ರೋ (Metro) ಮೂಲಕವೇ ತೆರಳಿದ್ದಾರೆ. ಇಂಧನ ಮಿತವ್ಯಯ ಮಾಡುವಂತೆ ಪ್ರಧಾನಿ ಸಲಹೆ ನೀಡಿದ್ದಾರೆ. ಸ್ವತಃ ಅವರು ತಮ್ಮ ಬೆಂಗಾವಲು ವಾಹನಗಳ ಸಂಖ್ಯೆಯನ್ನು ಕಡಿಮೆ ಮಾಡಿಕೊಂಡಿದ್ದಾರೆ. ಹೀಗಾಗಿ ಅವರ ಮಾತಿಗೆ ಸ್ಪಂದಿಸಿ ತಾನು ಕೂಡ ಸಾರ್ವಜನಿಕ ಸಾರಿಗೆ ಮೆಟ್ರೋದಲ್ಲಿ ಪ್ರಯಾಣ ಮಾಡುತ್ತಿದ್ದೇನೆ ಎಂದು ಹೇಳಿದ್ದಾರೆ.