ಬೆಂಗಳೂರು: ಹೊನ್ನಿನ ಗುಣವುಳ್ಳ ಒಂದು ಕಪ್ಪು ಚಿನ್ನವೆಂದರೆ ಅದು ಹೊನಗೊನ್ನೆ ಸೊಪ್ಪು. ಇದರಿಂದ ಕೂದಲು (Hair health) ಉದುರುವುದು, ತಲೆ ಹೊಟ್ಟು, ಕೂದಲು ಒಡೆಯುವುದು ಸೇರಿದಂತೆ ನಾನಾ ರೀತಿಯ ತೊಂದರೆಗಳನ್ನು ನಿವಾರಿಸಬಹುದು ಎನ್ನುತ್ತಾರೆ ಆಯುರ್ವೇದ ಸೌಂದರ್ಯ ತಜ್ಞರಾದ ದೀಪಾ ನಾಗೇಶ್. ವಿಶ್ವವಾಣಿ ಹೆಲ್ತ್ (Vishwavani Health) ಯೂಟ್ಯೂಬ್ ಚಾನೆಲ್ (Youtube channel) ನಲ್ಲಿ ಈ ಕುರಿತು ಮಾಹಿತಿ ನೀಡಿರುವ ಅವರು ಹೊನಗೊನ್ನೆ ಸೊಪ್ಪಿನಿಂದ ಕಾಡಿಗೆ, ಹೇರ್ ಆಯಿಲ್, ಹೇರ್ ಪ್ಯಾಕ್ ಮಾಡುವ ವಿಧಾನಗಳ ಕುರಿತು ತಿಳಿಸಿದ್ದಾರೆ. ಹೊನಗೊನ್ನೆ ಸೊಪ್ಪನ್ನು ಚೆನ್ನಾಗಿ ಗುದ್ದಿ ರಸ ತೆಗೆದು ಅದರಲ್ಲಿ ಹತ್ತಿಯನ್ನು ಒದ್ದೆ ಮಾಡಿ ಬಾದಾಮಿ ಎಣ್ಣೆಯಿಂದ ದೀಪ ಹಚ್ಚಿ ಇದರಿಂದ ಉತ್ಪತ್ತಿಯಾಗುವ ಮಸಿಯಿಂದ ಕಾಡಿಗೆ ತಯಾರಿಸಿಕೊಳ್ಳಬಹುದು. ಇನ್ನು ತಲೆಗೆ ಹಚ್ಚುವ ಎಣ್ಣೆ ಮಾಡಲು ಹೊನಗೊನ್ನೆ, ಭೃಂಗರಾಜ, ಬ್ರಾಹ್ಮಿ ಎಲೆ, ಕೊಬ್ಬರಿ ಎಣ್ಣೆ ಮಿಶ್ರ ಮಾಡಿ ಬಿಸಿ ಮಾಡಿ ಎಣ್ಣೆ ಮಾಡಿಕೊಂಡು ಇಟ್ಟರೆ ಇದನ್ನು ವರ್ಷವಿಡೀ ಬಳಕೆ ಮಾಡಬಹುದು. ಇದನ್ನು ನಿಯಮಿತವಾಗಿ ತಲೆಗೆ ಹಚ್ಚಿಕೊಂಡರೆ ಅಕಾಲಿಕವಾಗಿ ಕೂದಲು ಬಿಳಿಯಾಗುವುದನ್ನು ತಡೆಯಬಹುದು. ಇದರ ಪಲ್ಯ, ಚಟ್ನಿ ಕೂಡ ಸೇವಿಸುವುದರಿಂದ ಸಾಕಷ್ಟು ಆರೋಗ್ಯ ಪ್ರಯೋಜನಗಳು ಕೂಡ ಇವೆ ಎನ್ನುತ್ತಾರೆ ಅವರು.