ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vijay Hazare Trophy final: ವಿದರ್ಭ ಮಣಿಸಿ ಚಾಂಪಿಯನ್‌ ಪಟ್ಟ ಅಲಂಕರಿಸಿದ ಕರ್ನಾಟಕ

Vijay Hazare Trophy final: ಕರ್ನಾಟಕ ಪರ ಬೌಲಿಂಗ್‌ನಲ್ಲಿ ವಿ. ಕೌಶಿಕ್‌, ಪ್ರಸಿದ್ಧ್‌ ಕೃಷ್ಣ ಮತ್ತು ಅಭಿಲಾಷ್‌ ಶೆಟ್ಟಿ ತಲಾ ಮೂರು ವಿಕೆಟ್‌ ಕಿತ್ತರು.

Vijay Hazare Trophy final: ವಿದರ್ಭ ಮಣಿಸಿ ಚಾಂಪಿಯನ್‌ ಪಟ್ಟ ಅಲಂಕರಿಸಿದ ಕರ್ನಾಟಕ

Vijay Hazare Trophy final

Profile Abhilash BC Jan 18, 2025 9:36 PM

ವಡೋದರ: ಸ್ಮರಣ್‌ ರವಿಚಂದ್ರನ್‌(101) ಅವರ ಶತಕದ ನೆರವಿನಿಂದ ಕರ್ನಾಟಕ ತಂಡ ವಿಜಯ್‌ ಹಜಾರೆ ಟ್ರೋಫಿ ಪ್ರಶಸ್ತಿ ಸೆಣಸಾಟದಲ್ಲಿ ವಿದರ್ಭವನ್ನು 36 ರನ್‌ಗಳಿಂದ ಮಣಿಸಿ ಚಾಂಪಿಯನ್‌ ಪಟ್ಟ ಅಲಂಕರಿಸಿದೆ. ಇದು ಈ ಕೂಟದಲ್ಲಿ ಕರ್ನಾಟಕ್ಕೆ ಒಲಿದ 5ನೇ ಟ್ರೋಫಿಯಾಗಿದೆ. ಈ ಹಿಂದಿನ ನಾಲ್ಕೂ ಫೈನಲ್‌ನಲ್ಲಿಯೂ ಗೆದ್ದು ಚಾಂಪಿಯನ್‌ ಪಟ್ಟ ಅಲಂಕರಿಸಿತ್ತು.

ಇಲ್ಲಿನ ಕೋಟಂಬಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಫೈನಲ್‌ ಪಂದ್ಯದಲ್ಲಿ ಟಾಸ್‌ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಕರ್ನಾಟಕ ತಂಡ ಆರಂಭಿಕ ಆಘಾತದ ಹೊರತಾಗಿಯೂ 6 ವಿಕೆಟ್‌ಗೆ 348 ರನ್‌ ಪೇರಿಸಿ ಬೃಹತ್‌ ಮೊತ್ತದ ಸವಾಲೊಡ್ಡಿತು. ಜವಾಬಿತ್ತ ವಿದರ್ಭ ಒಂದು ಹಂತದ ವರೆಗೆ ದಿಟ್ಟ ಹೋರಾಟ ನಡೆಸಿದರೂ ಅಂತಿಮವಾಗಿ 48.2 ಓವರ್‌ಗಳಲ್ಲಿ 312 ರನ್‌ಗೆ ಸರ್ವಪತನ ಕಂಡಿತು.

ಪ್ರಸಕ್ತ ಸರಣಿಯಲ್ಲಿ ಶತಕಗಳ ತೋರಣವನ್ನೇ ಕಟ್ಟಿದ್ದ ಕರುಣ್‌ ನಾಯರ್‌ ಫೈನಲ್‌ ಪಂದ್ಯದಲ್ಲಿ 27 ರನ್‌ಗೆ ಸೀಮಿತರಾದರು. ಇವರ ವಿಕೆಟ್‌ ಪ್ರಸಿದ್ಧ್‌ ಕೃಷ್ಣ ಕಿತ್ತರು. ಮಹಾರಾಷ್ಟ್ರ ವಿರುದ್ಧದ ಸೆಮಿಫೈನಲ್‌ ಪಂದ್ಯದಲ್ಲಿ ಶತಕ ಸಿಡಿಸಿದ್ದ ಧ್ರುವ ಶೋರೆ ಈ ಪಂದ್ಯದಲ್ಲಿ ಶತಕ ಬಾರಿಸಿ ಮಿಂಚಿದರು. 111 ಎಸೆತ ಎದುರಿಸಿದ ಅವರು 8 ಬೌಂಡರಿ ಮತ್ತು 2 ಸಿಕ್ಸರ್‌ ನೆರವಿನಿಂದ 110 ರನ್‌ ಚಚ್ಚಿದರು. ಅಂತಿಮ ಹಂತದಲ್ಲಿ ಸಿಡಿದು ನಿಂತ ಹರ್ಷ ದುಬೆ ಸತತ ಸಿಕ್ಸರ್‌ ಮತ್ತು ಬೌಂಡರಿ ಬಾರಿಸಿ ಪಂದ್ಯವನ್ನು ರೋಚಕ ಹಂತಕ್ಕೆ ತಂದರೂ ತಂಡಕ್ಕೆ ಗೆಲುವಿನ ಹರ್ಷ ನೀಡಲು ಸಾಧ್ಯವಾಗಲಿಲ್ಲ.



ಶಕ್ತಿ ಮೀರಿ ಬ್ಯಾಟಿಂಗ್‌ ನಡೆಸಿದ ಅವರು ತಲಾ 5 ಸಿಕ್ಸರ್‌ ಮತ್ತು ಬೌಂಡರಿ ನೆರವಿನಿಂದ 63 ರನ್‌ ಬಾರಿಸಿದರು. ಎದುರಿಸಿದ್ದು ಕೇವಲ 30 ಎಸೆತ. ಇವರ ವಿಕೆಟ್‌ ಪತನದೊಂದಿಗೆ ತಂಡದ ಸೋಲು ಕೂಡ ಖಚಿತಗೊಂಡಿತು. ಕರ್ನಾಟಕ ಪರ ಬೌಲಿಂಗ್‌ನಲ್ಲಿ ವಿ. ಕೌಶಿಕ್‌, ಪ್ರಸಿದ್ಧ್‌ ಕೃಷ್ಣ ಮತ್ತು ಅಭಿಲಾಷ್‌ ಶೆಟ್ಟಿ ತಲಾ ಮೂರು ವಿಕೆಟ್‌ ಕಿತ್ತರು.



ಮೊದಲು ಬ್ಯಾಟಿಂಗ್‌ ನಡೆಸಿದ ಕರ್ನಾಟಕ ಪರ ನಾಯಕ ಮಯಾಂಕ್‌ ಅಗರ್ವಾಲ್‌(31) ಮತ್ತು ದೇವದತ್ತ ಪಡಿಕ್ಕಲ್‌(8) ಈ ಪಂದ್ಯದಲ್ಲಿ ನಿರಾಸೆ ಮೂಡಿಸಿದರು. ಆದರೆ ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳಾದ ಸ್ಮರಣ್‌ ರವಿಚಂದ್ರನ್‌ ಶತಕ ಬಾರಿಸಿದರೆ, ಕೃಷ್ಣನ್ ಶ್ರೀಜಿತ್ ಮತ್ತು ಅಭಿನವ್‌ ಮನೋಹರ್‌ ಅರ್ಧಶತಕ ಬಾರಿಸಿ ತಂಡದ ಬೃಹತ್‌ ಮೊತ್ತಕ್ಕೆ ಕಾರಣರಾದರು. ಅಂತಿಮ ಹಂತದಲ್ಲಿ ಜಿದ್ದಿಗೆ ಬಿದ್ದವರಂತೆ ಬ್ಯಾಟ್‌ ಬೀಸಿದ ಕೃಷ್ಣನ್ ಶ್ರೀಜಿತ್(78) ಮತ್ತು ಅಭಿನವ್‌ ಮನೋಹರ್‌(79) ರನ್‌ ಬಾರಿಸಿದರು.