ಕೋಲ್ಕತ್ತಾ,ಜು.9: ವಯಸ್ಸು ಅನ್ನೋದು ಕೇವಲ ನಂಬರ್ ಅಷ್ಟೇ ಶ್ರಮ ಪಡುವ ಛಲ ಇದ್ದರೆ ಹೇಗೂ ಬದುಕು ನಿಭಾಯಿಸಬಹುದು ಅನ್ನೋದಕ್ಕೆ ಈ ವೃದ್ಧ ವ್ಯಕ್ತಿಯ ಜೀವನವೇ ಸಾಕ್ಷಿ. ಹೌದು ವಯಸ್ಸು 80 ದಾಟಿದರೂ, ದೇಹದಲ್ಲಿ ಶಕ್ತಿ ಕುಂದಿದ್ದರೂ ತಮ್ಮ ಪತ್ನಿಯ ರಕ್ಷಣೆಗಾಗಿ ಟ್ಯಾಕ್ಸಿ ಓಡಿಸುವ ಮೂಲಕ ಈ ವೃದ್ಧ ವ್ಯಕ್ತಿ ಹೋರಾಡುತ್ತಿದ್ದಾರೆ. ತಮ್ಮ 67 ವರ್ಷದ ಪತ್ನಿಗೆ ಆರೋಗ್ಯ ಸಮಸ್ಯೆ ಇದ್ದು ಅವರನ್ನು ಸಾಕಲು ಟ್ಯಾಕ್ಸಿ ಪ್ರಯಾಣ ಆರಂಭ ಮಾಡಿದ್ದಾರೆ. ಇವರ ಈ ಹೃದಯ ಸ್ಪರ್ಶಿ (Viral News) ಕಥೆ ಕೇಳಿ ನೆಟ್ಟಿಗರು ನಿಜಕ್ಕೂ ಸ್ಪೂರ್ತಿದಾಯಕ ಎಂದಿದ್ದಾರೆ.
ಬಹುತೇಕ 80 ವರ್ಷ ವಯಸ್ಸಿನಲ್ಲೂ, ಯಾವುದೇ ರೀತಿ ಭಯಪಡದೆ, ರವೀಂದ್ರನಾಥ್ ಸರ್ಕಾರ್ ಅವರು ಪ್ರತಿದಿನ ಬೆಳಿಗ್ಗೆ ತಮ್ಮ ಹಳದಿ ಟ್ಯಾಕ್ಸಿಯ ಸ್ಟೀರಿಂಗ್ ಹಿಡಿಯುತ್ತಾರೆ. ಇದು ಯಾವುದೇ ಉಳಿತಾಯ ಅಥವಾ ತನ್ನ ಖರ್ಚಿಗಾಗಿ ಅಲ್ಲ, ಬದಲಾಗಿ 67 ವರ್ಷದ ವೃದ್ಧ ಪತ್ನಿಯನ್ನು ನೋಡಿಕೊಳ್ಳಲು ಈ ಕೆಲಸ ಮಾಡುತ್ತಿದ್ದಾರೆ. ಟ್ಯಾಕ್ಸಿ ಚಾಲಕನಾಗಿ ತನ್ನ ಅನಾರೋಗ್ಯ ಪೀಡಿತ ಪತ್ನಿಯನ್ನು ನೋಡಿಕೊಳ್ಳಲು ದಿನಕ್ಕೆ 16 ಗಂಟೆಗಳ ಕಾಲ ಕೆಲಸ ಮಾಡುತ್ತಾರೆ.
ವಿಡಿಯೋ ನೋಡಿ:
ಸೋಷಿಯಲ್ ಮೀಡಿಯಾದಲ್ಲಿ ಚೈತಾಲಿ ಬೋಸ್ ಎಂಬುವವರು ಈ ವಿಡಿಯೊ ಶೇರ್ ಮಾಡಿದ್ದಾರೆ. ಕೋಲ್ಕತ್ತಾದ ರೈಲ್ವೆ ಹಳಿಗಳ ಬಳಿ ವಾಸಿಸುವ ಈ ವೃದ್ಧ ದಂಪತಿಯ ಕಥೆ ಕೇಳಿ ನೆಟ್ಟಿಗರು ಮರುಗಿದ್ದಾರೆ. ವಯಸ್ಸಾಗುತ್ತಿರುವ ಮತ್ತು ಆರೋಗ್ಯ ಹದಗೆಡುತ್ತಿರುವ ಹೊರತಾಗಿಯೂ, ಅವರು ಒಂದು ದಿನದ ರಜೆಯೂ ಇಲ್ಲದೆ ಟ್ಯಾಕ್ಸಿಯನ್ನು ಓಡಿಸುತ್ತಲೇ ಇದ್ದಾರೆ. ಪ್ರಯಾಣಿಕರು ಸಿಗದಿದ್ದರೂ ಅಥವಾ ದಿನವಿಡೀ ಒಂದು ರೂಪಾಯಿ ಕೂಡ ಸಂಪಾದನೆ ಇಲ್ಲದಿದ್ದರೂ, ಅವರು ಟ್ಯಾಕ್ಸಿಯ ಬಾಡಿಗೆಯನ್ನು ಮಾಲೀಕರಿಗೆ ಪಾವತಿಸಬೇಕಾಗುತ್ತದೆ ಎಂದು ತಮ್ಮ ಕಷ್ಟ ಹೇಳಿಕೊಂಡಿದ್ದಾರೆ. ನೋಡಿಕೊಳ್ಳಲು ಮಕ್ಕಳು ಇಲ್ಲದೆ , ಅವರು ಗಳಿಸುವ ಹಣದಿಂದ ಬದುಕುತ್ತಿದ್ದಾರೆ.
ರವೀಂದ್ರನಾಥ್ ಅವರು ತೀವ್ರವಾದ ಉಬ್ಬಸ ಕಾಯಿಲೆಯಿಂದ ಬಳಲುತ್ತಿದ್ದರೆ, ಅವರ ಪತ್ನಿ ಹೃದಯ ರೋಗಿಯಾಗಿದ್ದಾರೆ. ಇಷ್ಟೆಲ್ಲಾ ಕಷ್ಟಗಳಿದ್ದರೂ ಬದುಕುವ ಛಲದಿಂದ ಕೆಲಸ ಮಾಡುತ್ತಿದ್ದಾರೆ. ವಿಡಿಯೋದ ಕೊನೆಯಲ್ಲಿ, ಚೈತಾಲಿ ಬೋಸ್ ಅವರು ಈ ವೃದ್ಧ ದಂಪತಿಗೆ ಸಾರ್ವಜನಿಕರು ತಮಗೆ ಸಾಧ್ಯವಾದಷ್ಟು ಆರ್ಥಿಕ ನೆರವು ನೀಡಿ ಎಂದು ಮನವಿ ಮಾಡಿದ್ದಾರೆ.
ಈ ಬಗ್ಗೆ ನೆಟ್ಟಿಗರು ಪ್ರತಿಕ್ರಿಯೆ ನೀಡಿದ್ದು ಇಂತವರಿಗೆ ಸಹಾಯಮಾಡುವುದು ತಪ್ಪಲ್ಲ, ಕೈಲಾದಷ್ಟು ಸಹಾಯ ಮಾಡಿ ಎಂದು ಬಳಕೆದಾರರೊಬ್ಬರು ಕೇಳಿಕೊಂಡಿದ್ದಾರೆ. ಮತ್ತೊಬ್ಬರು ಕೋಲ್ಕತ್ತಾದಲ್ಲಿ ಪ್ರಯಾಣಿಸುವ ಜನ ಇವರ ಟ್ಯಾಕ್ಸಿ ಬಳಸಿ ಎಂದು ಮನವಿ ಮಾಡಿದ್ದಾರೆ.